Moringa oleifera or drumstick vegetable

ಕಡಿಮೆ ಶ್ರಮ, ಅತೀ ಕಡಿಮೆ ನಿರ್ವಹಣೆಯಿಂದ ಹೆಚ್ಚು ಲಾಭ ತಂದುಕೊಡುವ ಬೆಳೆ ಅಂದರೆ ನುಗ್ಗೆ ಬೆಳೆ. ನುಗ್ಗೆ ಬೆಳೆಯುವುದು ಅತೀ ಕಷ್ಟದ ಕೆಲಸ ಅಲ್ಲವೇ ಅಲ್ಲ. ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಒಂದಷ್ಟು ಸಕಾಲಿಕ ಹಾಗೂ ಅಚ್ಚುಕಟ್ಟು ನಿರ್ವಹಣೆ ವಿಧಾನ ಅನುಸರಿಸಿದರೆ, ಬೇರೆ ಬೆಳೆಗಳ ನಡುವೆ ಮಿಶ್ರ ಬೆಳೆಯಾಗಿಯೂ ನುಗ್ಗೆ ಸಾಕಷ್ಟು ಆದಾಯವನ್ನು ತಂದುಕೊಡಬಲ್ಲುದು.
ಹವಾಗುಣ : ನುಗ್ಗೆ ಶುಷ್ಕವಲಯದ ಒಣ ಬೇಸಾಯದಲ್ಲಿ ಶೀಘ್ರವಾಗಿ ಬೆಳೆಯುವ ಬೆಳೆಯಾಗಿದೆ. ಇದು ಹೆಚ್ಚು ನೀರು ಅಥವಾ ತೇವಾಂಶವನ್ನು ಸಹಿಸುವುದಿಲ್ಲ. ಇದನ್ನು ಮನೆಯ ಕೈ ತೋಟದಲ್ಲಿಯೂ ಬೆಳೆಯಬಹುದು. ಇದಕ್ಕೆ ಮರುಳು ಮಿಶ್ರಿತ ಗೋಡುಮಣ್ಣು ಸೂಕ್ತ. ಆದರೆ ಜಿಗುಟು ಮಣ್ಣು ಯೋಗ್ಯವಾದುದಲ್ಲ. ಈ ಬೆಳೆಗೆ ಸೂಕ್ತವಾದ ಮಣ್ಣಿನ ರಸಸಾರ 6 ರಿಂದ 6.2 ಆಗಿದೆ.
ಬಿತ್ತನೆ ಕಾಲ :-ಮಳೆಯಾಶ್ರಯದಲ್ಲಿ ಜೂನ್-ಜುಲೈ ತಿಂಗಳುಗಳಲ್ಲಿ ನಾಟಿ ಮಾಡಬಹುದು. ನೀರಾವರಿ ಅನುಕೂಲತೆ ಇದ್ದರೆ ವರ್ಷದ ಯಾವ ಸಮಯದಲ್ಲಾದರೂ ನಾಟಿ ಮಾಡಬಹುದು.

ತಳಿಗಳು:

  1. ಪಿ . ಕೆ . ಎಂ :- 1
    ನುಗ್ಗೆ, ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6- 12 ತಿಂಗಳಲ್ಲಿ ಫಸಲು ಕೊಡುತ್ತದೆ. ಸ್ವಾಧಿಷ್ಟವಾದ ರುಚಿಯನ್ನು ಹೊಂದಿರುತ್ತದೆ.
  2. ಪಿ . ಕೆ . ಎಂ :-2
    ಇದು ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6-12 ತಿಂಗಳಲ್ಲಿ ಫಸಲು ಕೊಡುತ್ತದೆ. ಕಾಯಿಗಳು ಹಸಿರಾಗಿದ್ದು 75-90ಸೆಂ.ಮೀ. ಉದ್ದವಿರುತ್ತವೆ. ಈ ತಳಿಯು ಗಿಡ ನೆಟ್ಟ 8-9ತಿಂಗಳಲ್ಲಿ ಫಸಲು ಪ್ರಾರಂಭವಾಗುತ್ತದೆ. ಸ್ವಾಧಿಷ್ಟವಾದ ರುಚಿಯನ್ನು ಹೊಂದಿರುತ್ತದೆ. ಪ್ರತಿ ಮರದಿಂದ ವರ್ಷಕ್ಕೆ 140-200 ಕಾಯಿಗಳನ್ನು ಪಡೆಯಬಹುದು.
  3. ಭಾಗ್ಯ ( ಕೆ . ಡಿ . ಎಮ್ -01)
    ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಲ್ಲಿ ಈ ತಳಿಯನ್ನು ಬಿಡುಗಡೆ ಮಾಡಲಾಗಿದೆ. ಈ ತಳಿಯು ಮೂಲವಾಗಿ ಗಿಡ್ಡ ಜಾತಿಯಾಗಿದ್ದು ಗಿಡದ ಎತ್ತರ 2-4ಮೀ ವರೆಗೆ ಬೆಳೆಯುವುದು. ಗಿಡಗಳು ಶೀಘ್ರವಾಗಿ ಹೂ ಬಿಡುತ್ತವೆ. (100-110 ದಿನಗಳು ನಾಟಿ ಮಾಡಿದ ನಂತರ) ನಾಟಿ ಮಾಡಿದ 160-180 ದಿನಗಳ ನಂತರ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಪ್ರತಿ ಕಾಯಿಯು 60-70ಸೆಂ.ಮೀ. ಉದ್ದವಿದ್ದು, ಕಡುಹಸಿರು ಬಣ್ಣದೊಂದಿಗೆ ದುಂಡಗೆ ಇರುತ್ತದೆ. ಪ್ರಥಮ ವರ್ಷದಲ್ಲಿ 350-400 ಕಾಯಿಗಳು ಹಾಗೂ ಎರಡನೇ ವರ್ಷದಿಂದ 800-1000 ಕ್ಕೂ ಹೆಚ್ಚು ಕಾಯಿಗಳು ಪ್ರತಿ ಗಿಡದಿಂದ ಪಡೆಯಬಹುದು.

  4. ಎಕರೆಗೆ ಬೇಕಾಗುವ ಸಾಮಾಗ್ರಿಗಳ ವಿವರ :100 ಗ್ರಾಂ ಬೀಜ ಹಾಗೂ ಸಸಿಗಳಾದಲ್ಲಿ 370 ಬೇಕಾಗುತ್ತದೆ.
    ನುಗ್ಗೆಯನ್ನು ಬೀಜದಿಂದ ಸಸಿ ತಯಾರಿಸಿ ಬೆಳೆಸಬಹುದು. ಬೀಜಗಳಿಂದ ಸಸಿ ತಯಾರಿಸಿಕೊಳ್ಳಲು ಮೊದಲು 15 x 4 ಸೆಂ.ಮೀ. ಅಳತೆಯ ಪಾಲಿಥೀನ್ ಕವರ್ ನಲ್ಲಿ ಫಲವತ್ತಾದ ಮಣ್ಣು-ಗೊಬ್ಬರ ಬೆರೆಸಿ ತುಂಬಿಕೊಳ್ಳಬೇಕು. ಬೀಜವನ್ನ ಮಣ್ಣಿನೊಳಗೆ ಒಂದು ಅಂಗುಲ ಆಳಕ್ಕೆ ಬಿತ್ತಿ , ಅದು ಹುಟ್ಟುವ ತನಕ ಬೀಜ ಕೊಳೆಯದಂತೆ ಮಿತವಾಗಿ ನೀರು ಸಿಂಪಡಿಸುತ್ತಿರಬೇಕು. ಸಾಮಾನ್ಯವಾಗಿ ಬೀಜ 7 ರಿಂದ 9 ದಿನಗಳಲ್ಲಿ ಹುಟ್ಟಿ 30 – 40 ದಿನಗಳಲ್ಲಿ ಸಸಿ ತಯಾರಾಗುತ್ತವೆ.

  5. ಬೇಸಾಯ ಕ್ರಮ : 0.06 ಘನ ಮೀ. ಗುಣಿಗಳನ್ನು 3.25 ಮೀ. ಅಂತರದಲ್ಲಿ (ಗಿಡ್ಡ ಜಾತಿಗೆ) ಅಥವಾ 5 ಮೀ. ಅಂತರ (ಎತ್ತರ ಜಾತಿಗೆ)ದಲ್ಲಿ ತೆಗೆಯಬೇಕು. ಗುಣಿಗಳಿಗೆ ಸಮಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಕೊಡಬೇಕು. ನಂತರ ಪ್ರತಿ ಗುಣಿಗೆ ಒಂದು ಸಸಿಯನ್ನು ನೆಡಬೇಕು.
    ಗಿಡಗಳಿಗೆ ಆಕಾರ ಹಾಗೂ ಚಾಟನಿ :-ಸಸಿ ನಾಟಿ ಮಾಡಿದ 2 ಅಥವಾ 3 ತಿಂಗಳುಗಳಲ್ಲಿ ಗಿಡದ ತುದಿಯನ್ನು ಚಿವುಟಿ ಹೆಚ್ಚು ಕವಲುಗಳು ಬರುವಂತೆ ನೊಡಿಕೊಳ್ಳಬೇಕು. ನಂತರ ಗಿಡದ ಬೆಳವಣಿಗೆ ಅವಲಂಭಿಸಿ ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಕಾಯಿಗಳನ್ನು ಕಿತ್ತ ನಂತರ ನೆಲದಿಂದ 1ರಿಂದ 2 ಅಡಿ ಎತ್ತರದಲ್ಲಿ ಗಿಡವನ್ನು ಪೂರ್ತಿಯಾಗಿ ಕಟಾವು ಮಾಡಿ ಒಂದೆರಡು ತಿಂಗಳು ವಿಶ್ರಾಂತಿ ಕೊಟ್ಟು ನಂತರ ಭೂಮಿಯನ್ನು ಹದ ಮಾಡಿ ಶಿಫಾರಸ್ಸು ಮಾಡಿದ ಗೊಬ್ಬರ ಕೊಟ್ಟು ನೀರನ್ನು ಹಾಯಿಸಬೇಕು. ಇದರಿಂದ ಬುಡದಲ್ಲಿ ಸಾಕಷ್ಟು ಚಿಗುರುಗಳು ಒಡೆಯುತ್ತವೆ. ಅವುಗಳಲ್ಲಿ ಸಧೃಡವಾದ ಸಮಾನ ಅಂತರದಲ್ಲಿರುವ 4 ರಿಂದ 5 ಚಿಗುರುಗಳನ್ನು ಬೆಳೆಯಲು ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು. ಈ ಚಿಗುರುಗಳು ಸುಮಾರು ಎರಡುಮೂರು ಅಡಿ ಎತ್ತರವಾದಾಗ ಅವುಗಳ ತುದಿಯನ್ನು ಚಿವುಟಿ ಕವಲು ಟೊಂಗೆಗಳು ಬರುವಂತೆ ನೋಡಿಕೊಳ್ಳಬೇಕು.

  6. ಸಸ್ಯ ಸಂರಕ್ಷಣೆ ಕ್ರಮಗಳು :
    ಕೀಟಗಳು: ಹೇನು, ಕಪ್ಪು ಕಂಬಳಿಹುಳು, ಕಾಯಿನೊಣ, ಬೂದು ಕಂಬಳಿ ಹುಳು, ಹೂ ಮೊಗ್ಗಿನ ಕೊರಕ, ಕಾಂಡ ಕೊರಕ.
    ರೋಗಗಳು : ಬೂದಿ ರೋಗ, ಎಲೆ ಚುಕ್ಕೆ ರೋಗ
    ಸಸ್ಯ ಹೇನು ಹಾಗೂ ಎಲೆ ತಿನ್ನುವ ಕೀಟಗಳ ಹತೋಟಿಗಾಗಿ 2ಮಿ.ಲೀ. ಅಸಿಪೆಟ್ ಅಥವಾ 1.5ಮಿ.ಲೀ. ಟ್ರೈಜೊಪಾಸ್ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
    ಬೆಳೆದ ಗಿಡಗಳಲ್ಲಿ ಬೂದಿ ರೋಗದ ನಿವಾರಣೆಗಾಗಿ 3ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗುವ ಗಂಧಕವನ್ನು ಹಾಗೂ ಕಾಯಿಯ ಬೆಂಕಿ ರೋಗ ನಿವಾರಣೆಗಾಗಿ 2ಗ್ರಾಂ ಪ್ರತಿ ಲೀಟರ್ ನೀರಿಗೆ ಕ್ಲೊರ್ಥಲಾನಿನ್ ಸಿಂಪರಣೆಗಳನ್ನು ಬಳಸಬೇಕು. ಜೂನ್-ಜುಲೈ, ಜನವರಿ-ಫೆಬ್ರವರಿಯಲ್ಲಿ ಗಿಡಗಳು ಹೊಸದಾಗಿ ಚಿಗುರಿದಾಗ 2ಮಿ.ಲೀ. ಮೆಲಾಥಿಯಾನ್ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

  7. ಕೊಯ್ಲು ಮತ್ತು ಇಳುವರಿ : ನುಗ್ಗೆ ನಾಟಿ ಮಾಡಿದ ಏಳರಿಂದ ಎಂಟು ತಿಂಗಳುಗಳಲ್ಲಿ ಕಾಯಿಗಳು ಕಟಾವಿಗೆ ಸಜ್ಜಾಗಿ 2- 3 ತಿಂಗಳುಗಳ ಕಾಲ ಕಟಾವು ಮಾಡಬಹುದು. ಕಾಯಿಗಳು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿ, ಗೆರೆಗಳು ತುಂಬಿಕೊಂಡಾಗ ಹಸಿರು ಬಣ್ಣವಿರುವಾಗ ಕಟಾವು ಮಾಡಬೇಕು. ಪ್ರತಿ ಗಿಡಕ್ಕೆ 250 ರಿಂದ 300 ಕಾಯಿಗಳನ್ನು, ಅಂದರೆ 25 ರಿಂದ 30 ಕಿ.ಗ್ರಾಂ. (ತಳಿಗನುಗುಣವಾಗಿ) ಹಾಗೂ ಎಕರೆಗೆ ಸುಮಾರು 25ರಿಂದ 30ಟನ್ ಇಳುವರಿಯನ್ನು ಪಡೆಯಬಹುದು.

ನುಗ್ಗೆ ಕೃಷಿಯ ಬಗ್ಗೆ ಹೆಚ್ಚಿನ ಮಾಹಿಗಾಗಿ ಸಂಪಕಿ೯ಸಿ: Smitha, G. B. Scientist, (Horticulture),KVK,Shivamogga
ಮೊಬೈಲ್‌ ಸಂಖ್ಯೆ: 9611726001
ಹಾಗು ಉತ್ತಮ ಗುಣಮಟ್ಟದ ನುಗ್ಗೆ ಗಿಡಗಳಿಗೆ ಸಂಪರ್ಕಿಸಿ

error: Content is protected !!