ಸರ್ಕಾರದ ನೆರವಿಲ್ಲದೇ ಗ್ರಾಮಸ್ಥರೇ ತಮ್ಮ ಗ್ರಾಮದಲ್ಲಿರುವ ಮೂರು ಪುರಾತನ ಕೆರೆಗಳನ್ನು ಗುರುತಿಸಿ, ಹೂಳೆತ್ತಿ ಕೆರೆಗಳಿಗೆ ಮರು ಜೀವ ನೀಡುವ ಮೂಲಕ ಹೊಸನಗರ ತಾಲೂಕಿನ ಮುತ್ತಲ ಊರಿನ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಗಳಿಗೆ ಮಾದರಿಯಾಗಿದ್ದಾರೆ.
ಗ್ರಾಮದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೆರೆಗಳ ಪುನರುಜ್ಜೀವನ ಕಾರ್ಯವನ್ನು ಕೈಗೊಂಡಿರುವ ಮುತ್ತಲದ ಗ್ರಾಮಸ್ಥರಿಗೆ ಸಾರಾ ಎಂಬ ಸಂಸ್ಥೆ ಮಾರ್ಗದರ್ಶನ ನೀಡುತ್ತಿದೆ. ಗ್ರಾಮದಲ್ಲಿ 82ಮನೆಗಳಿದ್ದು, ಎಲ್ಲರೂ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಕೆರೆ ಹೂಳೆತ್ತುವ ಮೂಲಕ ಗ್ರಾಮದಲ್ಲಿನ ಕೃಷಿ ಚಟುವಟಿಕೆಗಳಿಗೆ ಸ್ಥಳೀಯವಾಗಿ ನೀರಿನ ಮೂಲವನ್ನು ಕಂಡುಕೊಳ್ಳುವ ಹಾದಿಯಲ್ಲಿ ಗ್ರಾಮಸ್ಥರು ಯಶಸ್ಸನ್ನು ಕಂಡುಕೊಂಡಿದ್ದಾರೆ.
`ಗ್ರಾಮದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ನಿರ್ಣಯ ಕೈಗೊಂಡ ಬಳಿಕ, ಗ್ರಾಮದಲ್ಲಿನ 3ಪುರಾತನ ಕೆರೆಗಳನ್ನು ಈ ಕಾರ್ಯಕ್ಕಾಗಿ ಗುರುತಿಸಲಾಯಿತು. ಪ್ರಥಮವಾಗಿ ಮಾಕೋಡು ಕೆರೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿ, ಸರ್ಕಾರದ ನೆರವಿಗಾಗಿ ಕಾಯದೇ, ಗ್ರಾಮಸ್ಥರೇ ಈ ಕಾರ್ಯದಲ್ಲಿ ತೊಡಗಲು ನಿರ್ಧರಿಸಿದೆವು. ಇದೇ ಸಂದರ್ಭದಲ್ಲಿ ಸಾರಾ ಎಂಬ ಸರ್ಕಾರೇತರ ಸಂಸ್ಥೆಯ ನೆರವು ದೊರೆಯಿತು. ಸಂಸ್ಥೆಯವರು ಜೆಸಿಬಿಯನ್ನು ಒದಗಿಸಿದರು. ಊರಿನ ಪ್ರತಿಯೊಂದು ಮನೆಯವರ ತನು ಮನ ಧನ ಸಹಕಾರದೊಂದಿಗೆ ಕೆರೆಯ ಹೂಳನ್ನು ತೆಗೆದು ಅಚ್ಚುಕಟ್ಟಾಗಿ ಕೆರೆಗೆ ಮರು ಜೀವ ನೀಡಲು ಸಾಧ್ಯವಾಗಿದೆ’ ಎಂದು ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ ಅವರು ತಿಳಿಸಿದ್ದಾರೆ.
ಮೊದಲ ಪ್ರಯತ್ನದ ಯಶಸ್ಸಿನಿಂದ ಉತ್ತೇಜಿತರಾಗಿ ಇದೀಗ ಊರಿನ ಇನ್ನೊಂದು ಹಳೆ ಕೆರೆಯಾದ ವರ್ತೆ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೇ.60ರಷ್ಟು ಕೆಲಸ ಮುಗಿದಿದೆ. ಇನ್ನೊಂದು ವಾರದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ. ಮಾಕೋಡು ಕೆರೆ ಅಭಿವೃದ್ಧಿಯಿಂದ 22ಎಕ್ರೆ ಜಮೀನಿಗೆ ನೀರಾವರಿ ಸಾಧ್ಯವಾಗಲಿದೆ. ಇದೇ ರೀತಿ ವರ್ತೆ ಕೆರೆ ಅಭಿವೃದ್ಧಿಯಿಂದ 60ಎಕ್ರೆ ಜಮೀನಿಗೆ ನೀರು ಪೂರೈಕೆ ಸಾಧ್ಯವಾಗಲಿದೆ. ಮಾಕೋಡು ಕೆರೆ ಅಭಿವೃದ್ಧಿಗೆ 2.40ಲಕ್ಷ ರೂ. ವೆಚ್ಚವಾಗಿದ್ದು ವರ್ತೆ ಕೆರೆ ಅಭಿವೃದ್ಧಿಗೆ 3.80ಲಕ್ಷ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಇನ್ನೊಂದು ಕೆರೆ ಅಭಿವೃದ್ಧಿ ಕಾರ್ಯವನ್ನು ಮಳೆಗಾಲ ಮುಗಿದ ಬಳಿಕ ಜನವರಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಗ್ರಾಮದಲ್ಲಿ ಇನ್ನೊಂದು ಇಂಗು ಗುಂಡಿ ಕಾಮಗಾರಿಯನ್ನು ಸಹ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ಮುತ್ತಲ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅಂತರ್ಜಲ ಚೇತನ ಯೋಜನೆಯಡಿ ಜಿಲ್ಲೆಯಾದ್ಯಂತ ಕೆರೆಗಳ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಜನರ ಸಹಭಾಗಿತ್ವದಿಂದ ಮಾತ್ರ ಇಂತಹ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂಬುವುದನ್ನು ಮುತ್ತಲ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
—