ಶಿವಮೊಗ್ಗ, ಜುಲೈ 03 ಶಿವಮೊಗ್ಗ ನಗರದ ಸೀಗೆಹಟ್ಟಿ ವಾರ್ಡ್ ಪ್ರದೇಶದಲ್ಲಿ ರಾಜಕಾಲುವೆ ಸ್ವಚ್ಛತೆಗೆ ಟೆಂಡರ್ ಕರೆಯುವುದು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ ಆಯುಕ್ತೆ ಚಾರುಲತಾ ಸೋಮಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸೀಗೆಹಟ್ಟಿ ವಾರ್ಡ್‍ಗೆ ಭೇಟಿ ನೀಡಿ ಸ್ವಚ್ಛತೆ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಕಿರಿದಾದ ರಸ್ತೆಯ ಕಾರಣ ಸಂಚಾರ ಸಮಸ್ಯೆ, ರಸ್ತೆಗುಂಡಿ ಇತ್ಯಾದಿಗಳನ್ನು ಪರಿಶೀಲಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸೀಗೆಹಟ್ಟಿಯಲ್ಲಿ ಇರುವ ಮಂಡಕ್ಕಿ ಬಟ್ಟಿಗೆ ಅತ್ಯಂತ ಕಡಿಮೆ ಸ್ಥಳವಿದ್ದು, ಇಲ್ಲಿ 24 ಕುಟುಂಬಗಳು ವಾಸಿಸುತ್ತಿವೆ. ಮಂಡಕ್ಕಿ ಬಟ್ಟಿಗೆ ಕನಿಷ್ಟ 100ಅಡಿ ಜಾಗ ಬೇಕಿದ್ದು, ಮಂಡಕ್ಕಿ ಬಟ್ಟಿ ಮೇಲೆ ಕನಿಷ್ಟ 7ರಿಂದ 8ಲಕ್ಷ ರೂ. ಬಂಡವಾಳ ಹೂಡಿದ್ದಾರೆ. ಇಲ್ಲಿ ಸ್ಥಳದ ಅಭಾವದಿಂದಾಗಿ ಕೆಲವರು ಸೂಳೆಬೈಲು ಹತ್ತಿರ ಸ್ಥಳಾಂತರಿಸಿದ್ದಾರೆ. ಈ ಹಿಂದೆ ಎಪಿಎಂಸಿ ಹತ್ತಿರ ಸ್ಥಳ ಹಂಚಿಕೆಯಾಗಿದ್ದರೂ, ಆ ಸ್ಥಳವನ್ನು ಮಂಡಕ್ಕಿ ಬಟ್ಟಿಯವರು ಮಾರಿದ್ದಾರೆ. ಎ.ಪಿ.ಎಂ.ಸಿಯಲ್ಲಿ ಮಂಡಕ್ಕಿ ಬಟ್ಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಸ್ಥಳೀಯ ಕಾರ್ಪೊರೇಟರ್ ಶಂಕರ ಗನ್ನಿ ಅವರು ತಿಳಿಸಿದರು.
ಇಲ್ಲಿನ ರಸ್ತೆಗಳಲ್ಲಿ ಗುಂಡಿಗಳು ಸಾಕಷ್ಟು ಬಿದ್ದಿದ್ದು, ರಾಜಕಾಲುವೆಯಿಂದ ತೊಂದರೆ ಉಂಟಾಗುತ್ತಿದೆ. ಇದಕ್ಕೆ ತಾತ್ಕಾಲಿಕ ಪರಿಹಾರವನ್ನು ಮಾತ್ರ ಕಂಡುಕೊಳ್ಳದೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು. ರಸ್ತೆ ಗುಂಡಿಗಳು ಹಾಗೂ ಯುಜಿಡಿ ತೊಂದರೆಗಳಿರುವ ಕಡೆ ಮ್ಯಾನ್ಯುವಲ್ ಪ್ಲೇಟ್‍ಗಳನ್ನು ಅಳವಡಿಸುವಂತೆ ಇಂಜಿನಿಯರ್‍ಗೆ ಸೂಚಿಸಿದರು.
ಈ ಏರಿಯಾದಲ್ಲಿರುವ ಎಲ್ಲಾ ಮೋರಿಗಳ ಕಸವನ್ನು ತಕ್ಷಣ ತೆರವುಗೊಳಿಸಬೇಕು. ರಾಜಕಾಲುವೆ ಸಮಸ್ಯೆ ಬಗೆಹರಿಸಲು ಟೆಂಡರ್ ಕರೆದು ಕಾರ್ಯ ಆರಂಭಿಸಬೇಕು. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ ಅಧಿಕಾರಿಗಳಾದ ಶಿವಯೋಗಿ ಎಲಿ, ರಮೇಶ ಘಾಟ್ಗೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!