ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಬರುವ ರೋಗಗಳನ್ನು ಜೈವಿಕವಾಗಿ ಹತೋಟಿ ಮಾಡುವಲ್ಲಿ ಬಹುಪಯೋಗಿ ಶಿಲೀಂಧ್ರವಾದ ಟ್ರೈಕೊಡರ್ಮಾ ಮಹತ್ತರ ಪಾತ್ರವಹಿಸಿದೆ. ಇತ್ತಿಚೀನ ದಿನಗಳಲ್ಲಿ ಸಾವಯವ ಕೃಷಿಯಲ್ಲಿ ಇದರ ಬಳಕೆ ಹೆಚ್ಚುತ್ತಿದೆ. ಸಸ್ಯಗಳಲ್ಲಿ ಕಂಡುಬರುವ ರೋಗದ ಹತೋಟಿಯನ್ನು ರಾಸಾಯನಿಕ ಶಿಲೀಂಧ್ರನಾಶಕಗಳಿಂದ ಸಮರ್ಪಕವಾಗಿ ಮಾಡಬಹುದಾದರು ಈ ರಾಸಾಯನಿಕ ಶೇಷ ವಸ್ತುಗಳು ಮಣ್ಣಿನಲ್ಲಿ ಹಾಗೂ ಸಸ್ಯ ಭಾಗಗಳಲ್ಲಿ ಉಳಿದುಕೊಳ್ಳುವುವು. ಇದರಿಂದ ಮಣ್ಣಿನ ಆರೋಗ್ಯ ಮತ್ತು ಆಹಾರದ ಆರೋಗ್ಯದ ಮೇಲೆ ಪ್ರತಿರಿಕ್ತ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚು. ರಾಸಾಯನಿಕ ಶಿಲೀಂಧ್ರನಾಶಕ ಮಾರುಕಟ್ಟೆಯಲ್ಲಿ ದುಬಾರಿ ದರ ಹೊಂದಿದ್ದು, ಇದರಿಂದ ತಾತ್ಕಾಲಿಕ ರೋಗ ಹತೋಟಿ ಸಾಧ್ಯ ಹಾಗೂ ನಿಗದಿತ ಕಾಲದಲ್ಲಿ ಪುನರ್ಬಳಕೆಯಿಂದ ಬೆಳೆಯ ಉತ್ಪಾದನಾ ವೆಚ್ಚವು ಹೆಚ್ಚಾಗುವುದು. ಇಂತಹ ಸಂದರ್ಭದಲ್ಲಿ ಜೈವಿಕ ಹತೋಟಿ ಕ್ರಮಗಳು ಸಾವಯವ ಕೃಷಿಯಲ್ಲಿ ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಮತ್ತು ಪರಿಸರ ಸ್ನೇಹಿಯಾಗಿದೆ.


ಟ್ರೈಕೋಡರ್ಮಾ ವಿವಿಧ ಬೆಳೆಗಳ ಬೇರು ವ್ಯಾಪ್ತಿಯಲ್ಲಿ ಬೆಳೆದು, ಮಣ್ಣಿನಿಂದ ಹರಡುವ ರೋಗಗಳನ್ನು ಜೈವಿಕವಾಗಿ ಸಮರ್ಪಕ ರೀತಿಯಲ್ಲಿ ಹತೋಟಿ ಮಾಡುವ ಸಾಮಥ್ರ್ಯವುಳ್ಳ ಉಪಯುಕ್ತವಾದ ಶಿಲೀಂದ್ರ ಜೀವಿ. ಸರ್ವೆಸಾಮಾನ್ಯವಾಗಿ ಟೈಕೋಡರ್ಮಾ ವಿರಿಡೆ, ಟ್ರೈಕೋಡರ್ಮಾ ಹಾರ್ಜಿಯಾನಮ್ ಮತ್ತು ಟ್ರೈಕೋಡರ್ಮಾ ಕೋನಿಂಗಿ ಎಂಬ ಪ್ರಬೇಧಗಳನ್ನು ವ್ಯಾಪಕವಾಗಿ ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆಗೊಳಿಸಿ ಸಸ್ಯ ರೋಗಗಳ ಹತೋಟಿಗೆ ಬಳಸಲಾಗುತ್ತದೆ. ಈ ಉಪಯೋಗಿ ಶಿಲೀಂಧ್ರವು ಮಣ್ಣಿನಲ್ಲಿ ಬೆಳೆದು ಬೇರಿನ ಸುತ್ತಲೂ ಒಂದು ಪ್ರಬಲ ರಕ್ಷಣಾ ಕವಚವನ್ನು ನಿರ್ಮಿಸಿ ಹಾನಿಕಾರಕ ಶಿಲೀಂಧ್ರಗಳನ್ನು ನಾಶಪಡಿಸಿ, ಬೆಳೆಗೆ ಸಮರ್ಪಕವಾಗಿ ಆಹಾರ ಮತ್ತು ನೀರು ಸರಬರಾಜು ಮಾಡಲು ಸಹಕರಿಸುತ್ತದೆ. ಈ ಜೈವಿಕ ಶಿಲೀಂಧ್ರ್ರವು ಮಣ್ಣಿನಲ್ಲಿ ಇತರೆ ಹಾನಿಕಾರಕ ಸೂಕ್ಷ್ಮಾಣು ಜೀವಿಗಳಿಗಿಂತ ಅತೀ ವೇಗವಾಗಿ ಬೆಳೆದು ಬೇರು ಮತ್ತು ಮಣ್ಣಿನ ಕಣಗಳ ಸುತ್ತಲೂ ಹರಡುತ್ತದೆ. ಇದರಿಂದ ಪರೋಪ ಜೀವಿ ಹಾಗೂ ಹಾನಿಕಾರಕ ಶಿಲೀಂಧ್ರಕ್ಕೆ ಸ್ಥಳ ಹಾಗೂ ಆಹಾರದ ಅಭಾವ ಉಂಟಾಗುತ್ತದೆ. ಇದಲ್ಲದೆ, ಟ್ರೈಕೋಡರ್ಮಾ ಬೆಳೆಯುವ ಹಂತದಲ್ಲಿ ಟ್ರೈಕೋಡರ್ಮಿನ್ ಆ್ಯಂಟಿ ಬಯಾಟಿಕ್ ಕಿಣ್ವಗಳನ್ನು ಬಿಡುಗಡೆ ಮಾಡುವುದರಿಂದ ರೋಗಾಣುವನ್ನು ಯಶಸ್ವಿಯಾಗಿ ನಿಯಂತ್ರಿಸುತ್ತದೆ.
:: ಟ್ರೈಕೋಡರ್ಮಾ ಬಳಸುವ ವಿಧಾನಗಳು ::
ಏಕದಳ, ದ್ವಿಧಳ, ಎಣ್ಣೆಕಾಳು, ತರಕಾರಿ, ಹೂ-ಹಣ್ಣು, ತೋಟಗಾರಿಕಾ ಬೆಳೆಗಳಲ್ಲಿ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರವನ್ನು ವಿವಿಧ ವಿಧಾನಗಳಲ್ಲಿ ಬಳಸಲಾಗುತ್ತದೆ.
 ಬೀಜೋಪಚಾರ: ಪ್ರತಿ ಕಿಲೋ ಬಿತ್ತನೆ ಬೀಜಕ್ಕೆ 5 ರಿಂದ 10 ಗ್ರಾಂ. ಟ್ರೈಕೋಡರ್ಮಾ ಜೈವಿಕ ನಿಯಂತ್ರಕ ಪುಡಿಯನ್ನು 10 ಮೀ.ಲೀ. ನೀರಿನೊಂದಿಗೆ ಬೆರೆಸಿ ಬೀಜೋಪಚಾರಕ್ಕಾಗಿ ಬಿತ್ತನೆಗಿಂತ ನಾಲ್ಕು ತಾಸುಗಳ ಮುಂಚಿತವಾಗಿ ಮಾಡಲಾಗುತ್ತದೆ. ಹೀಗೆ ಬೀಜೋಪಚರಿಸಿದ ಬೀಜಗಳನ್ನು ನೆರಳಿನಲ್ಲಿ 5 ತಾಸುಗಳ ವರೆಗೆ ಒಣಗಿಸಿ ನಂತರ ಬಿತ್ತನೆಗೆ ಉಪಯೋಗಿಸಬೇಕು.
 ಮಣ್ಣಿಗೆ ಬೆರೆಸುವ ವಿಧಾನ: ಬಿತ್ತನೆ ಮಾಡುವಾಗ ಕೃಷಿ ಬೆಳೆಗಳಿಗೆ ಬಳಸಲು ಎರಡು ಕಿಲೋ ಟ್ರೈಕೋಡರ್ಮಾ ಜೈವಿಕ ಪುಡಿಯನ್ನು ಸಾಣಿಸಿದ ತಿಪ್ಪೆ ಗೊಬ್ಬರದಲ್ಲಿ ಬೆರೆಸಿ ಭೂಮಿಗೆ ಸೇರಿಸಿದಲ್ಲಿ ಮಣ್ಣಿನಿಂದ ಬರುವ ರೋಗಾಣುಗಳನ್ನು ಹತೋಟಿ ಮಾಡಬಹುದು.
 ಗಿಡಗಳಿಗೆ ಬಳಸುವ ವಿಧಾನ: ಬೇರುವ್ಯಾಪ್ತಿಯ ಅನುಕೂಲಕ್ಕೆ ತಕ್ಕಂತೆ ವಿವಿಧ ಬೆಳೆಗಳಲ್ಲಿ ಇದನ್ನು ಬಳಸಲಾಗುತ್ತದೆ. ಹಣ್ಣಿನ ಗಿಡಗಳಿಗೆ 10-15 ಗ್ರಾಂ., ತೋಟಗಾರಿಕಾ ಬೆಳೆಗಳಿಗೆ 50-100 ಗ್ರಾಂ., ತರಕಾರಿ ಬೆಳೆಗಳಿಗೆ 25-50 ಗ್ರಾಂ. ಜೈವಿಕ ಪುಡಿಯನ್ನು 5 ಕಿಲೋ ಗ್ರಾಂ. ತಿಪ್ಪೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರದಲ್ಲಿ ಬೆರೆಸಿ ನಂತರ ಗಿಡಗಳ ಸುತ್ತಲೂ ಉಂಗುರು ಆಕಾರದಲ್ಲಿ ಹಾಕಿ ಮಣ್ಣಿನಿಂದ ಮುಚ್ಚಿ ತೇವಾಂಶ ಕಾಪಾಡಲು ಸಹಕಾರಿಯಾಗುವಷ್ಟು ಅಲ್ಪ ಪ್ರಮಾಣದಲ್ಲಿ ನೀರು ಹಾಯಿಸಬೇಕು.
 ಸಸಿ ಮಡಿಗಳಲ್ಲಿ ಬಳಸುವ ವಿಧಾನ: 500 ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು 50 ಲೀಟರ್ ನೀರಿನಲ್ಲಿ ಬೆರೆಸಿ 10 ಗುಂಟೆ ಪ್ರದೇಶದ ಸಸಿ ಮಡಿಗಳಲ್ಲಿ ಬೀಜ ಬಿತ್ತನೆ ಮಾಡಿದ ಕೂಡಲೇ ಮಣ್ಣಿನ ಮೇಲೆ ಸಿಂಪಡಿಸಬಹುದು ಅಥವಾ 50 ಗ್ರಾಂ. ಟ್ರೈಕೋಡರ್ಮಾವನ್ನು 2ಘಿ4 ಮೀಟರ್ ಅಳತೆಯ ಸಸಿ ಮಡಿ ತಯಾರಿ ವೇಳೆ ಮಣ್ಣಿಗೆ ಸೇರಿಸಬಹುದು.
 ದ್ರಾವಣ ರೂಪದ ಟ್ರೈಕೋಡರ್ಮಾ ಬಳಸುವ ವಿಧಾನ: ಈ ರೂಪದ ಸಿಂಪರಣೆಯ ಕನಿಷ್ಠ 5-6 ದಿವಸ ಮುಂಚೆ ಹಾಗೂ ನಂತರ ವೇಳೆ ಅಂತರವ್ಯಾಪಿ ರಾಸಾಯನಿಕ ಔಷಧಿಗಳ ಸಿಂಪರಣೆಯನ್ನು ಕೈಗೊಳ್ಳಬಾರದು. ನೀರಿನಂಶವುಳ್ಳ ಹಣ್ಣಿನ ಬೆಳೆಗಳಾದ ಸೇಬು, ದ್ರಾಕ್ಷಿ, ಸೀಬೆ, ಪಪಾಯ ಇತ್ಯಾದಿ ಹಣ್ಣುಗಳನ್ನು ಬಿಡಿಸುವ ಎರಡು ದಿವಸದಗಳ ಮುಂಚೆ 5 ಮಿ.ಲೀ. ಟ್ರೈಕೋಡರ್ಮಾಯುಕ್ತ ದ್ರಾವಣವನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದರಿಂದ ಸಾಗಾಣಿಕೆ ಹಂತದಲ್ಲಿ ಹಣ್ಣುಗಳನ್ನು ಕೆಲ ದಿನಗಳವರೆಗೆ ಕೆಡದಂತೆ ರಕ್ಷಿಸಬಹುದು.

 ಕಾಂಪೋಸ್ಟ್ ತಯಾರಿಸಲು ಬಳಸುವ ವಿಧಾನ: ಒಂದು ಕ್ವಿಂಟಾಲ್ ಸಾವಯವ ಅಂಶವುಳ್ಳ ಪದಾರ್ಥ ಅಥವಾ ಕಾಂಪೋಸ್ಟ್‍ಗೆ ಒಂದು ಕಿಲೋ ಗ್ರಾಂ. ಟ್ರೈಕೋಡರ್ಮಾವನ್ನು ಪದರ ಪದರ ವಾಗಿ ಬೆರೆಸಿ ಇಪ್ಪತ್ತು ದಿನಗಳ ನಂತರ ಕೃಷಿ ಭೂಮಿಗೆ ಬಳಸಬಹುದಾಗಿದೆ. ಈ ಹಂತದಲ್ಲಿ ಕಂಪೋಸ್ಟ್ ಗುಂಡಿಯ ತ್ಯಾಜ್ಯವು ಕನಿಷ್ಠ ತೇವಾಂಶ ಹೊಂದಿರಬೇಕು. ಟ್ರೈಕೋಡರ್ಮಾ ಶಿಲೀಂಧ್ರವು ದ್ರಾಕ್ಷಿ, ಲಿಂಬೆ, ಬಾಳೆ, ಶೇಂಗಾ, ಕಡಲೆ, ಬದನೆ, ಮೆಣಸಿನಕಾಯಿ, ಟೊಮಾಟೋ, ಅಡಿಕೆ, ತೆಂಗು, ಕಾಳು ಮೆಣಸು, ಶುಂಠಿ, ಅರಿಶಿನ ಹಾಗೂ ಇನ್ನಿತರ ಬೆಳೆಗಳ ಮಣ್ಣಿನಿಂದ ಬರುವಂತಹ ರೋಗಗಳನ್ನು ಯಶಸ್ವಿಯಾಗಿ ಹತೋಟಿಯಾಗಿರುವುದು ಕಂಡುಬಂದಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಸಂಶೋಧನಾ ಕೇಂದ್ರ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಲ್ಲಿ ಇದರ ಲಭ್ಯತೆ ಇದೆ.

ಹೆಚ್ಚಿನ ಮಾಹತಿಗಾಗಿ ಸಂಪಕಿ೯ಸಿ:

ZAHEER AHAMED B, SCIENTIST (PLANT PATHOLOGY)ICAR KVK, KALABURAGI (GULBARGA)KARNATAKA -585101 , ಮೊಬೈಲ್‌ ಸಂಖ್ಯೆ: 9845300326

error: Content is protected !!