ಶಿವಮೊಗ್ಗ, ಡಿಸೆಂಬರ್ 23 : ಮುಂದಿನ ಬಜೆಟ್ ಮಂಡನೆಯ ನಂತರದ ತಿಂಗಳುಗಳಿಂದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆಸಿಕೊಂಡು ಬಂದಿದ್ದ ಅನ್ನದಾತನ ಮನೆಯಂಗಳದಲ್ಲಿ ಎಂಬ ಕಾರ್ಯಕ್ರಮವನ್ನು ಪುನರ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಅವರು ಇಂದು ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘ ನಿಯಮಿತದ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿ ತಿಂಗಳಿಗೊಮ್ಮೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ತಜ್ಞರು, ಅಧಿಕಾರಿಗಳು ಹಾಗೂ ಕೃಷಿಕರೊಂದಿಗೆ ಭಾಗವಹಿಸಿ ಈ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
ಈ ಅವಧಿಯಲ್ಲಿ ವಿಶೇಷವಾಗಿ ಸಾವಯವ ಕೃಷಿಗೆ ಒತ್ತು ನೀಡಲಾಗುವುದು. ಇಂದಿನ ಗ್ರಾಮೀಣ ಯುವ ಜನಾಂಗ ಉದ್ಯೋಗವನ್ನು ಅರಸಿ, ಕೃಷಿಯಿಂದ ವಿಮುಖರಾಗಿ ನಗರ ಪ್ರದೇಶಗಳತ್ತ ಮುಖ ಮಾಡಿರುವುದು ಸೂಕ್ತವಲ್ಲ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಬೇಕಾದ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ ಎಂದವರು ನುಡಿದರು.
ಪ್ರಸ್ತುತ ಸಂದರ್ಭದಲ್ಲಿ 50,000ದಷ್ಟಿರುವ ಸಾವಯವ ಕೃಷಿ ಕುಟುಂಬಗಳು ಮುಂದಿನ ಒಂದು ವರ್ಷದ ಅವಧಿಯಲ್ಲಿ ಅದರ ಸಂಖ್ಯೆ 5ಲಕ್ಷಕ್ಕೇರಿಸಬೇಕು. ಮಾತುಗಳು ಸಾಧನೆಯಾಗಬಾರದು ಸಾಧನೆಯೇ ಮಾತಾಗಬೇಕು ಎಂದ ಅವರು, ಹೆಚ್ಚು ಇಳುವರಿ ಬರುವ ರಾಸಾಯನಿಕಗಳ, ಔóಷಧಗಳ ನಿರಂತರ ಬಳಕೆಯಿಂದಾಗಿ ರೋಗ-ರುಜಿನಗಳು ಹೆಚ್ಚುತ್ತಿವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಗ್ರಾಮೀಣ ರೈತರು ತಾವಿರುವಲ್ಲಿಯೇ ಕೃಷಿಯನ್ನು ಅವಲಂಭಿಸಿಕೊಂಡು ನೆಮ್ಮದಿಯ ಹಾಗೂ ಸ್ವಾಭಿಮಾನದ ಜೀವನ ನಿರ್ವಹಣೆ ಮಾಡುವಂತಾಗಬೇಕು. ಅದಕ್ಕಾಗಿ ಸರ್ಕಾರದ ಅಗತ್ಯ ಕ್ರಮ ಕೈಗೊಳ್ಳಲಿದೆ. ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಅರಿತಿದ್ದು, ಅವುಗಳ ಇತ್ಯರ್ಥಕ್ಕೆ ವ್ಯವಸ್ಥಿತ ಕ್ರಮ ವಹಿಸಲಾಗಿದೆ. ಅಂತೆಯೇ ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಬೇಕೆಂಬುದು ನಮ್ಮದು ಬಹುದಿನದ ಆಶಯವಾಗಿದೆ ಎಂದರು.
ಸಾವಯವ ಪದ್ಧತಿಯಲ್ಲಿ ಬೆಳೆದ ಹಣ್ಣು-ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ನೈಸರ್ಗಿಕ ಹಾಗೂ ಸ್ಥಳೀಯ ಸಂಪನ್ಮೂಲಗಳ ಬಳಕೆಯಿಂದ ಕೃಷಿ ಮಾಡುವುದು ಲಾಭದಾಯಕವಾಗಲಿದೆ. ರಾಸಾಯನಿಕಗಳ ಬಳಕೆಯಿಂದ ಭೂಮಿ ತನ್ನ ಸಾರ ಕಳೆದುಕೊಳ್ಳುತ್ತಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಿ ನೈಸರ್ಗಿಕ ಬೆಳೆ ಸಾಧ್ಯವಿದೆ. ಕಡಿಮೆ ವೆಚ್ಚದಲ್ಲಿ ಲಾಭದಾಯಕ ಬೆಳೆ ಬೆಳೆಯುವ ವಿಧಾನಗಳಲ್ಲಿ ಅರಿಯಬೇಕು. ಏಕಬೆಳೆಯಿಂದ ಹೊರಬಂದು ಮಿಶ್ರ ಹಾಗೂ ಬಹುಬೆಳೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಮುಂದಿನ ಬಜೆಟ್‍ನಲ್ಲಿ ಸಾವಯನ ಕೃಷಿಗೆ ಆದ್ಯತೆ ನೀಡಲಾಗುವುದು ಎಂದವರು ನುಡಿದರು.
ಮುಂದಿನ ದಿನಗಳಲ್ಲಿ ಸಾವಯವ ಕೃಷಿಗೆ ಒತ್ತು ನೀಡಲಾಗುವುದು. ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದ ಅವರು 2020ರ ಜನವರಿ 03ರಂದು ತುಮಕೂರಿನಲ್ಲಿ ರೈತರ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದವರು ನುಡಿದರು.
ಬಹುಶ್ರುತ ಸಾವಯವ ಕೃಷಿ ಸಾಧಕ ಶ್ರೀಮತಿ ಲಕ್ಷ್ಮವ್ವ ಹೊಸಮನಿ ಮತ್ತು ಈರಪ್ಪ ಹೊಸಮನಿ ದಂಪತಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾರಿಗೆ ಮತ್ತು ಕೃಷಿ ಸಚಿವ ಲಕ್ಷ್ಮಣ್ ಎಸ್.ಸವದಿ, ಸಂಸದ ಬಿ.ವೈ.ರಾಘವೇಂದ್ರ, ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘದ ಅಧ್ಯಕ್ಷ ಆನಂದ ಆ.ಶ್ರೀ., ಸಾವಯವ ಕೃಷಿ ಪರಿವಾರ ರಾಜ್ಯ ಘಟಕದ ಅಧ್ಯಕ್ಷ ನಂಜುಂಡಪ್ಪ ಎನ್., ಶಾಸಕರಾದ ರುದ್ರೇಗೌಡ್ರು, ಆರಗ ಜ್ಞಾನೇಂದ್ರ, ಕೆ.ಬಿ.ಅಶೋಕಕುಮಾರ್, ಪಟ್ಟಾಭಿರಾಮ್, ಸೇರಿದಂತೆ ಸುಭಿಕ್ಷಾ ಬಳಗದ ಸದಸ್ಯರು, ಅನೇಕ ಗಣ್ಯರು, ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಪ್ರಗತಿಪರ ಸಾವಯವ ಕೃಷಿಕರು, ಅನೇಕ ಗಣ್ಯರು ಉಪಸ್ಥಿತರಿದ್ದರು.

error: Content is protected !!