ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರೆಗೆ ಅಂಕೆ ಹಾಕುವ ಸಂಪ್ರದಾಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಮಂಗಳವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಿದರು.
ಅಂಕೆ ಹಾಕುವ ಶಾಸ್ತ್ರ ನಡೆಸುವ ಮೂಲಕ ಸಾಗರದ ಶ್ರೀ ಮಾರಿಕಾಂಬ ಜಾತ್ರೆಯ ಧಾರ್ಮಿಕ ಪ್ರಕ್ರಿಯೆ ಆರಂಭಗೊಂಡಿದ್ದು, ಜಾತ್ರೆಗೆ ಎಂಟು ದಿನ ಇರುವ ಮುನ್ನ ಅಂಕೆ ಹಾಕಲಾಗುತ್ತದೆ. ಜಾತ್ರೆ ಆರಂಭದ ಹಿನ್ನೆಲೆಯಲ್ಲಿ ಅಂಕೆ ಹಾಕಿದ್ದು, ನಂತರದಲ್ಲಿ ಸ್ಥಳೀಯರು ಬೇರೆ ಊರಿಗೆ ಹೋಗಬಾರದು ಎಂಬ ಪ್ರತೀತಿ ಇದೆ. ಬಹುತೇಕ ಜನರು ಸಹ ಇಂತಹ ಸಂದರ್ಭದಲ್ಲಿ ಬೇರೆಡೆ ಹೋಗುವುದಿಲ್ಲ.
ಫೆಬ್ರವರಿ 7ರಿಂದ ಜಾತ್ರೆಯು ಅದ್ಧೂರಿಯಾಗಿ ಆರಂಭಗೊಳ್ಳಲಿದ್ದು, ಫೆ. 7ರಂದು ರಾತ್ರಿ ರಾಜಬೀದಿ ಉತ್ಸವದ ಮೂಲಕ ಶ್ರೀ ಮಾರಿಕಾಂಬೆಯನ್ನು ಗಂಡನ ಮನೆಗೆ ಕಳುಹಿಸಲಾಗುತ್ತದೆ. ಫೆಬ್ರವರಿ 15ರ ವರೆಗೂ ಒಂಬತ್ತು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳು ನಡೆಯಲಿವೆ.
ಜಾತ್ರೆಯ ಆರಂಭ ದಿನದಿಂದ ಫೆ. 15ರವರೆಗೂ ಸಾಗರ ನಗರದಲ್ಲಿ ವೈವಿಧ್ಯಮಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾಜ್ಯದ ವಿವಿಧ ಭಾಗಳಿಂದ ಕಲಾವಿದರು ಆಗಮಿಸಿ ಸಂಗೀತ, ನೃತ್ಯ, ಗಾಯನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಗೆ ಸಾಗರ ತಾಲೂಕು ಸೇರಿದಂತೆ ಶಿವಮೊಗ್ಗದ ವಿವಿಧ ತಾಲೂಕಿನ ಜನರು, ಜಿಲ್ಲೆಯ ಹಾಗೂ ರಾಜ್ಯದ ಜನರು ಜಾತ್ರೆಗೆ ಆಗಮಿಸುತ್ತಾರೆ. ಲಕ್ಷಾಂತರ ಜನರು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಮಾರಿಕಾಂಬಾ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಮಾತನಾಡಿ, ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರೆಯ ಅಂಕೆ ಹಾಕುವ ಶಾಸ್ತ್ರ ನಡೆಸಿದ್ದು, ಜಾತ್ರೆಯ ಧಾರ್ಮಿಕ ಕಾರ್ಯ ಆರಂಭಗೊಂಡಿದೆ. ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಶ್ರೀ ಮಾರಿಕಾಂಬಾ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರರಾವ್ ಮಾತನಾಡಿ, ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರದ ಶ್ರೀ ಮಾರಿಕಾಂಬ ಜಾತ್ರೆಗೆ ಸಮಿತಿ ವತಿಯಿಂದ ಎಲ್ಲ ರೀತಿ ಸಿದ್ಧತೆ ನಡೆಸಿದ್ದು, ಸಾಂಸ್ಕೃತಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಜಾತ್ರೆಯ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿ ಖಜಾಂಚಿ ನಾಗೇಂದ್ರ ಕುಮಟ ಮಾತನಾಡಿ, ಜಾತ್ರೆಯ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿ ಸಮಿತಿ ವತಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದು, ಜಾತ್ರೆಯ ಯಶಸ್ಸಿಗೆ ಎಲ್ಲ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.  
ಸಾಗರದ ಶ್ರೀ ಮಾರಿಕಾಂಬ ದೇವಸ್ಥಾನಗಳ ವ್ಯವಸ್ಥಾಪಕ ಸಮಿತಿಯ ಉಪಾಧ್ಯಕ್ಷರು, ಸಹ ಕಾರ್ಯದರ್ಶಿ, ವಿವಿಧ ಸಮಿತಿಯ ಸಂಚಾಲಕರು, ಸಹ ಸಂಚಾಲಕರು ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

error: Content is protected !!