ಮಂಗಳವಾರ ಶ್ರೀ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ …ಲಕ್ಷಾಂತರ ಭಕ್ತರು ಭಾಗವಹಿಸುವ ನೀರಿಕ್ಷೆ
ಸಾಗರ: ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಇಡೀ ಸಾಗರ ಪಟ್ಟಣವೇ ಸಿಂಗಾರಗೊಳ್ಳುತ್ತಿದ್ದು, ಎಲ್ಲ ಕಡೆಯಲ್ಲಿಯೂ ಜಾತ್ರೆಯ ವೈಭವದ ಸಿದ್ಧತೆ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಶ್ರೀ ಮಾರಿಕಾಂಬ ಜಾತ್ರೆಯಲ್ಲಿ ಲಕ್ಷಾಂತರ ಜನರು ದೇವಿಯ ದರ್ಶನ ಪಡೆಯಲಿದ್ದಾರೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಮಾರಿಕಾಂಬ ಜಾತ್ರೆಗೆ ಎರಡು ಮೂರು ತಿಂಗಳಿನಿಂದಲೇ ಸಿದ್ಧತೆ ಆರಂಭಗೊಳ್ಳುತ್ತದೆ. ಧಾರ್ಮಿಕ ವಿಧಿ ವಿಧಾನಗಳು ತಿಂಗಳ ಮುಂಚೆಯೇ ಶುರುವಾಗುತ್ತದೆ. ಜನವರಿ 31ರ ರಾತ್ರಿ ಅಂಕೆ ಹಾಕುವ ಮುಖಾಂತರ ಜಾತ್ರೆಯ ಆಚರಣೆಗೆ ಚಾಲನೆ ನೀಡಲಾಯಿತು. ಎರಡು ದಿನ ಮುಂಚಿತವಾಗಿ ಭಾನುವಾರ ಫೆ. 5ರಿಂದ ದಿಂದ ಪೂಜಾ ಕಾರ್ಯಗಳು ಚಾಲನೆಗೊಂಡಿವೆ.
ದೇವಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ: ಸೋಮವಾರ ರಾತ್ರಿ 10ಕ್ಕೆ ಚಿಕ್ಕಮ್ಮನನ್ನು ಹೊರಡಿಸುವ ಕಾರ್ಯಕ್ರಮ ಮುಗಿದ ಬಳಿಕ 9 ಮನೆಗಳಿಂದ ಘಟೇವು ತರಲಾಗುತ್ತದೆ. ಫೆ. 7ರ ಮಂಗಳವಾರ ಬೆಳಗ್ಗೆ 2ಕ್ಕೆ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ದೇವಿಯ ಮಾಂಗಲ್ಯ ಪೂಜೆ ನಡೆಸಲಾಗುತ್ತದೆ. ಪುರೋಹಿತರ ಮನೆಯಲ್ಲಿ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ತಾಯಿಯ ಮನೆ ಆವರಣಕ್ಕೆ ಮೆರವಣಿಗೆ ಆಗಮಿಸಲಿದೆ.
ಫೆ. 7ರ ಮಂಗಳವಾರ ಬೆಳಗ್ಗೆ 5ಕ್ಕೆ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀದೇವಿಗೆ ದೃಷ್ಠಿ ಇಡುವುದು, ಮಾಂಗಲ್ಯ ಧಾರಣೆ ಹಾಗೂ ಶ್ರೀ ಮಾರಿಕಾಂಬ ದೇವಿಯ ಪ್ರತಿಷ್ಠಾಪನೆ ಜರುಗಲಿದೆ. ಫೆಬ್ರವರಿ 7ರ ರಾತ್ರಿ 10ಕ್ಕೆ ಶ್ರೀ ಪೋತರಾಜನಿಂದ ಚಾಟಿ ಸೇವೆ ನಂತರ ಹೆಣ್ಣು ಒಪ್ಪಿಸುವ ಕಾರ್ಯಕ್ರಮ ನಡೆಯಲಿದ್ದು, ಇದೇ ದಿನ ರಾತ್ರಿ ಶ್ರೀದೇವಿಯ ದಂಡಿನ ಮೆರವಣಿಗೆಯು ಪ್ರಸಿದ್ಧ ಜಾನಪದ ಕಲಾ ತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ.
ಸಾಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಸಾಗಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಹಾಗೂ ಕಲಾತಂಡಗಳು ಆಗಮಿಸಿ ಪಾಲ್ಗೊಳ್ಳಲಿವೆ. ಫೆ. 8ರ ಬೆಳಗ್ಗೆ ಶ್ರೀ ಮಾರಿಕಾಂಬ ದೇವಿಯ ಗಂಡನ ಮನೆ ದೇವಸ್ಥಾನದಲ್ಲಿ ಶ್ರೀ ದೇವಿಯ ಮೂರ್ತಿ ಕೂರಿಸಲಾಗುತ್ತದೆ. ಎಂಟು ದಿನಗಳ ಕಾಲ ಫೆಬ್ರವರಿ 15ರವರೆಗೂ ದೇವಿಯ ದರ್ಶನ ಮಾಡಲು ಸಾರ್ವಜನಿಕರಿಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಜಾತ್ರಾ ಸಮಿತಿಯು ಎಲ್ಲ ರೀತಿ ಪೂಜೆಗಳಿಗೆ ಅನುಕೂಲವಾಗುವಂತೆ ಕ್ರಮ ವಹಿಸುತ್ತಿದೆ.
ಶ್ರೀ ದೇವಿಯ ಹರಕೆ ಸಲ್ಲಿಸಲು ವಿಶೇಷ ಸೇವೆ, ಉಡಿ ಸೇವೆ, ಪಂಚಕಜ್ಜಾಯ ಪ್ರಸಾದ, ದೇವಿಗೆ ಹೂವಿನ ಅಲಂಕಾರ ಸೇವೆ, ತುಲಾಭಾರ ಸೇರಿದಂತೆ ವಿವಿಧ ಸೇವೆ ಸಲ್ಲಿಸಲು ಅವಕಾಶವಿದೆ. ಫೆಬ್ರವರಿ 7ರಿಂದ 15ರ ವರೆಗೂ ಪ್ರತಿ ದಿನ ಬೆಳಗ್ಗೆ 8 ಗಂಟೆಯಿಂದ ಮಹಾಮಂಗಳಾರತಿ, ರಾತ್ರಿ 9.30ರವರೆಗೆ ಶ್ರೀ ದೇವಿಗೆ ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಇರುತ್ತದೆ.
ಶ್ರೀ ಮಾರಿಕಾಂಬ ಕಲಾ ವೇದಿಕೆ (ಗಂಡನ ಮನೆ)ಯಲ್ಲಿ ದಿನ ಸಂಜೆ 5.30ರಿಂದ ವಿವಿಧ ಸಂಘಟನೆಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ವಿವಿಧ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಒಂಬತ್ತು ದಿನಗಳ ವೈವಿಧ್ಯಮಯ ಪೂಜಾ ವಿಧಾನಗಳ ನಂತರ ಫೆಬ್ರವರಿ 15ರ ರಾತ್ರಿ 10.30ಕ್ಕೆ ಅಮ್ಮನವರಿಗೆ ಚಾಟಿಸೇವೆ, ಅಮ್ಮನವರಿಗೆ ನೈವೇದ್ಯ ಮಹಾಪ್ರಸಾದ ವಿನಿಯೋಗ, ನಂತರ ರಾತ್ರಿ 12ರಿಂದ ಬೆಳಗ್ಗೆ 5ರವರೆಗೂ ಪ್ರಸಿದ್ಧ ಜಾನಪದ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದೆ. ಶ್ರೀ ಮಾರಿಕಾಂಬ ದೇವಿಯನ್ನು ವನಕ್ಕೆ ಬಿಟ್ಟುಬರುವ ಮೂಲಕ ಜಾತ್ರೆಯು ಸಂಪನ್ನಗೊಳ್ಳಲಿದೆ.
ಜಾತ್ರಾ ಸಂಭ್ರಮದ ಹಿನ್ನೆಲೆಯಲ್ಲಿ ಇಡೀ ಪಟ್ಟಣದಲ್ಲಿ ವೈವಿಧ್ಯಮಯ ಅಂಗಡಿ, ಮಳಿಗೆ, ಮನೋರಂಜನಾ ಆಟಿಕೆ, ಸಿಹಿತಿಂಡಿಗಳ ಅಂಗಡಿ, ಬಳೆ ಸಾಮಾಗ್ರಿಗಳ ಅಂಗಡಿ ಸೇರಿದಂತೆ ಸಾಲು ಸಾಲು ಮಳಿಗೆಗಳು ಜಾತ್ರೆಗಾಗಿ ಸಿದ್ಧಗೊಳ್ಳುತ್ತಿವೆ. ಜಿಲ್ಲೆಯ ಜನರು, ಸುತ್ತಮುತ್ತಲಿನ ಜಿಲ್ಲೆ ಹಾಗೂ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರಾ ಸಮಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ವೀಕ್ಷಿಸಲು ಸಾವಿರಾರು ಜನರು ಆಗಮಿಸುತ್ತಾರೆ.
ಸಾಗರದ ಶ್ರೀ ಮಾರಿಕಾಂಬಾ ಜಾತ್ರಾ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಆಗಮಿಸುವ ಸಾರ್ವಜನಿಕರಿಗೆ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ. ಎಲ್ಲರಿಗೂ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಪಟ್ಟಣದ ಸ್ಥಳೀಯ ಸಂಘ ಸಂಸ್ಥೆಗಳು ಸಹ ಉಚಿತವಾಗಿ ಪಾನೀಯ, ಉಪಾಹಾರ ವ್ಯವಸ್ಥೆ ಮಾಡಿರುತ್ತವೆ.
ಸಾಗರ ನಗರಸಭೆ ಅವರಣದಲ್ಲಿ ಮಾರಿಕಾಂಬ ಕಲಾ ವೇದಿಕೆಯಲ್ಲಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 8ರಿಂದ 15ರವರೆಗೂ ಸಂಜೆ 5.30ರಿಂದ ರಾತ್ರಿವರೆಗೂ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾವಿದರು ನಡೆಸಿಕೊಡಲಿದ್ದಾರೆ. ಚಂಡೆವಾದನ, ಭರತನಾಟ್ಯ, ರಸಮಂಜರಿ, ಯೋಗ, ಡೊಳ್ಳು ಪ್ರದರ್ಶನ, ಸುಗಮ ಸಂಗೀತ, ಮಲ್ಲಗಂಬ, ಸಾಕ್ಸೋಫೋನ್ ವಾದನ ಸೇರಿದಂತೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.
ವಸ್ತು ಪ್ರದರ್ಶನ ಫೆಬ್ರವರಿ 7ರ ಸಂಜೆ 5ಕ್ಕೆ
ಸಾಗರದ ಶ್ರೀ ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಸಾಗರ ನಗರದ ನೆಹರು ಮೈದಾನದಲ್ಲಿ ಫೆ. 7ರ ಸಂಜೆ 5ಕ್ಕೆ ವಸ್ತು ಪ್ರದರ್ಶನವನ್ನು ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸುವರು. ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸಾಗರ ಗ್ರಾಮಾಂತರ ಠಾಣೆ ವೃತ್ತ ನೀರಿಕ್ಷಕ ಕೃಷ್ಣಪ್ಪ, ಸಾಗರ ಠಾಣೆ ವೃತ್ತ ನೀರಿಕ್ಷಕ ಸೀತಾರಾಮ್, ಮೆಸ್ಕಾಂ ಇಇ ವೆಂಕಟೇಶ್, ಎಇಇ ಮಂಜುನಾಥ ಉಪಸ್ಥಿತರಿರುವರು. ಶ್ರೀ ಮಾರಿಕಾಂಬ ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಸಮಿತಿ ಸಂಚಾಲಕ ತಾರಾಮೂರ್ತಿ, ಸಹಸಂಚಾಲಕ ಬಾಲಕೃಷ್ಣ ಗುಳೇದ್, ಮಂಜುನಾಥ್, ಉಪಾಧ್ಯಕ್ಷ ಸುಂದರ್ಸಿಂಗ್, ವಿ.ಶಂಕರ್, ರಾಮಪ್ಪ, ಸಹ ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಎಂ.ಡಿ.ಆನಂದ್, ಖಜಾಂಚಿ ನಾಗೇಂದ್ರ ಎಸ್.ಕುಮುಟಾ ಉಪಸ್ಥಿತರಿರುವರು.