ಶಿವಮೊಗ್ಗ ಚಾಲುಕ್ಯ ಕನ್ನಡ ಯುವಕರ ಸಂಘದ ವತಿಯಿಂದ ಭಾನುವಾರ ಸಂಜೆ ಚಾಲುಕ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತರಸವ ಕಾರ್ಯಕ್ರಮವನ್ನು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಉದ್ಘಾಟಿಸಿದರು.
ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಿ
ಶಿವಮೊಗ್ಗ : ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿದರೆ ಕನ್ನಡ ಎಂದಿಗೂ ಅಳಿಯುವುದಿಲ್ಲ, ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.
ಚಾಲುಕ್ಯ ಕನ್ನಡ ಯುವಕರ ಸಂಘದ ವತಿಯಿಂದ ಭಾನುವಾರ ಸಂಜೆ ಚಾಲುಕ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ತಾಯಿ ಭಾಷೆಯಾದ ಕನ್ನಡವನ್ನು ನಾವು ಹೆಮ್ಮೆಯಿಂದ ಮಾತನಾಡಬೇಕು. ಕನ್ನಡವನ್ನು ಮಾತನಾಡಲು ನಮ್ಮಲ್ಲಿ ಕೀಳರಿಮೆ ಇರಬಾರದು. ಕನ್ನಡ ಮಾಧ್ಯಮದಲ್ಲಿ ಓದಿದರೆ ಸಾಧನೆ ಮಾಡಲಾಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಎಲ್ಲರೂ ಬಿಡಬೇಕು. ನಾನೂ ಕನ್ನಡ ಮಾಧ್ಯಮದಲ್ಲೇ ಓದಿ ಇವತ್ತು ವೈದ್ಯನಾಗಿದ್ದೇನೆ, ಇದು ಸಣ್ಣ ಉದಾಹರಣೆಯಷ್ಟೇ. ಮಾತೃ ಭಾಷೆಯಲ್ಲಿ ಕಲಿಯುವ ಮೂಲಕ ಛಲ ಮತ್ತು ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಕರೆಕೊಟ್ಟರು.
ಪುನೀತ್ ರಾಜ್ ಕುಮಾರ್ ಅವರನ್ನು ನಾವೆಲ್ಲರೂ ಸ್ಮರಣೆ ಮಾಡುತ್ತಿದ್ದೇವೆ. ಯಾಕೆಂದರೆ ನಟನೆಯ ಜೊತೆಗೆ ಅನಾಥರಿಗೆ, ಅಶಕ್ತರಿಗೆ ಹಾಗೂ ವೃದ್ಧರಿಗೆ ಪೂರಕವಾಗುವ ನಿಟ್ಟಿನಲ್ಲಿ ಆಶ್ರಮಗಳನ್ನು ಕಟ್ಟುವ ಮೂಲಕ ಅವರ ಬದುಕಿಗೊಂದು ಆಸರೆಯಾಗಿದ್ದಾರೆ. ಅಲ್ಲದೇ ನೂರಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಉನ್ನತ ಆದರ್ಶಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಇದೇ ಸಂದರ್ಭ ಚಾಲುಕ್ಯ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಕಳೆದ 15 ವರ್ಷಗಳಿಂದ ನಿಸ್ವಾರ್ಥವಾಗಿ ಸ್ವಚ್ಛತಾ ಕಾರ್ಯಗಳನ್ನುಮಾಡುತ್ತಿರುವ ಹಾಗೂ ಅವಕಾಶ ಸಿಕ್ಕಾಗಲೆಲ್ಲಾ ಬಾಣಂತಿಯರ ಆರೈಕೆಯನ್ನು ಸೇವಾ ಮನೋಭಾವನೆಯೊಂದಿಗೆ ಮಾಡುತ್ತಿರುವ ತುಂಗಾ ನಗರದ ನಿವಾಸಿ ಶ್ರೀಮತಿ ಸರಸಮ್ಮ ಅವರನ್ನು ಸರ್ಜಿ ಫೌಂಡೇಶನ್ ವತಿಯಿಂದ ನಿಮಗೆ ನಮ್ಮ ನಮನ ಶೀರ್ಷಿಕೆಯಡಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಲ್ಲದೇ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ಅವರನ್ನು ಚಾಲುಕ್ಯ ಕನ್ನಡ ಯುವಕ ಸಂಘದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾಣಗರ ಪಾಲಿಕೆ ಉಪಮೇಯರ್ ಲಕ್ಷಮ್ಮ ಶಂಕರನಾಯ್ಕ, ಚಾಲುಕ್ಯ ಕನ್ನಡ ಯುವಕರ ಸಂಘದ ಅಧ್ಯಕ್ಷರಾದ ಸಿ.ಕೆ.ಬಾಲಚಂದ್ರ, ಕಾರ್ಯದರ್ಶಿ ಎಂ.ಜೆ.ಪ್ರವೀಣ್ ಕುಮಾರ್, ಭವಾನಿ ಲೇಔಟ್‌ನ ಪ್ರಮುಖರಾದ ವೇಣುಗೋಪಾಲ್ ಹಾಗೂ ಶ್ರೀಧರ್ ಉಪಸ್ಥಿತರಿದ್ದರು.
ಶಿವಮೊಗ್ಗ ಚಾಲುಕ್ಯ ಕನ್ನಡ ಯುವಕರ ಸಂಘದ ವತಿಯಿಂದ ಭಾನುವಾರ ಸಂಜೆ ಚಾಲುಕ್ಯ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತರಸವ ಕಾರ್ಯಕ್ರಮದಲ್ಲಿ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಶ್ರಮಜೀವಿ ಶ್ರೀಮತಿ ಸರಸಮ್ಮ ಅವರನ್ನು ಸನ್ಮಾನಿಸಿದರು.