ಸರ್ಕಾರ ಮಹಿಳಾ ಉದ್ಯಮಿಗಳಿಗಾಗಿ ರೂಪಿಸಿರುವ ಯೋಜನೆಗಳು ಪ್ರತಿಯೋರ್ವ ಮಹಿಳಾ ಉದ್ಯಮಿಗೆ ತಲುಪುವಂತಾಗಬೇಕು ಎಂದು ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಯುತ ಎಂ. ಶಂಕರ್ ರವರು ನುಡಿದರು.
ಅವರು ಸ್ವೇದ ಮಹಿಳಾ ಉದ್ಯಮಿಗಳ ಸಂಘ ನಗರದ ಮಥುರಾ ಪ್ಯಾರಡೈಸ್ ಎದುರಿನ ಪ್ರವಾಸಿ ಕಾರು ನಿಲ್ದಾಣದಲ್ಲಿ ಆಯೋಜಿಸಿದ್ದ ಸ್ವೇದ ಸಂತೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಯಮ ಮಾಡಲು ಬಯಸುವ ಮಹಿಳೆಯರಿಗೆ ಸಾಲ ಸೌಲಭ್ಯ ಗಳ ದೊರಕಿಸುವ ಮಾಹಿತಿಯನ್ನು ಅವರು ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಶ್ರೀ ಎನ್. ಗೋಪಿನಾಥ್ ಮಾತನಾಡಿ ಸಂತೆಯಲ್ಲಿ ಭಾಗವಹಿಸಿರುವ ಒಬ್ಬೊಬ್ಬ ಮಹಿಳೆಯೂ ಹತ್ತು ಹತ್ತು ಮಹಿಳಾ ಉದ್ಯಮಿಗಳನ್ನು ಬೆಳಕಿಗೆ ತಂದು ಸಂತೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮಾಡಬೇಕೆಂದು ನುಡಿದರು.
ಸ್ವೇದಮಹಿಳಾ ಸಂಘದ ಅಧ್ಯಕ್ಷರಾದ ಡಾ. ಲಕ್ಷ್ಮೀದೇವಿ ಗೋಪಿನಾಥ್ ಸಂಘದ ಕಾರ್ಯಕ್ರಮಗಳು ಹಾಗೂ ಸ್ವೇಧ ಸಂತೆಯ ಉದ್ದೇಶವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವೇದ ಸಂಸ್ಥೆಯ ಕಾರ್ಯದರ್ಶಿ ಶಿಲ್ಪ ಗೋಪಿನಾಥ್, ನಿರ್ದೇಶಕಿ ಸಹನಾ ಚೇತನ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಶ್ರೀ ವಿಜಯಕುಮಾರ್,ಪ್ರವಾಸಿ ಕಾರಿನ ಸಂಘದ ಶ್ರೀ ಮೂರ್ತಿ ಮತ್ತು ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು. ನಾಗರಾಜ್ ಪ್ರಾರ್ಥಿಸಿದರು.