ಶಿವಮೊಗ್ಗ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳ ನೌಕರರಲ್ಲಿ ಕೆಲಸದೊತ್ತಡ ಹೆಚ್ಚಾಗುತ್ತಿದ್ದು, ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಮೆಗಾನ್ ಬೋಧನಾ ಆಸ್ಪತ್ರೆ ಮಾನಸಿಕ ವಿಭಾಗದ ಆಪ್ತ ಸಮಾಲೋಚಕ ಶಿವಕುಮಾರ್ ಹೇಳಿದರು.
ಸರ್ಕಾರಿ ನೌಕರರ ಸಂಘ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಅ„ಕಾರಿ ಮತ್ತು ನೌಕರರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಶ್ವ ಮಾನಸಿಕ ಸ್ವಾಸ್ಥ್ಯ ದಿನಾಚರಣೆಯ ಪ್ರಯುಕ್ತ ಮಾನಸಿಕ ಸ್ವಾಸ್ಥ್ಯ ವಿಷಯ ಕುರಿತು ಅವರು ಮಾತನಾಡಿದರು.
ಬಯೋಮೆಟ್ರಿಕ್ ತಂತ್ರಾಂಶ ಅಳವಡಿಸಿರುವುದರಿಂದ ಆರೋಗ್ಯ ಇಲಾಖೆ ನೌಕರರ ಆರೋಗ್ಯ ಹದಗೆಡಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆರೋಗ್ಯ ಇಲಾಖೆ ನೌಕರರಲ್ಲಿಯೇ ಆರೋಗ್ಯ ಸಮಸ್ಯೆ ಕಂಡುಬಂದರೆ ಬೇರೆಯವರ ಆರೋಗ್ಯ ಕಾಪಾಡುವುದಕ್ಕೆ ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಆರೋಗ್ಯ ಎಲ್ಲರಿಗಾಗಿ ಆರೋಗ್ಯ ಎಲ್ಲರಿಗು ಎಂಬುದು ಆರೋಗ್ಯ ಇಲಾಖೆಯ ದ್ಯೇಯವಾಕ್ಯವಾಗಿದೆ. ಆದರೆ ಆರೋಗ್ಯ ಇಲಾಖೆ ನೌಕರರ ಆರೋಗ್ಯವೇ ಸರಿ ಇಲ್ಲದಿದ್ದರೆ ಬೇರೆಯವರ ಆರೋಗ್ಯ ಕಾಪಾಡುವುದಾರರು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆರೋಗ್ಯ ಇಲಾಖೆಯಲ್ಲಿ ದಿನದ 24 ಗಂಟೆ ಸೇವೆ ಒದಗಿಸಬೇಕಾದಂತಹ ಪರಿಸ್ಥಿತಿ ಇದೆ. ಸೇವೆ ಸಲ್ಲಿಸುವಾಗ ನೌಕರರಲ್ಲಿ ಬದ್ಧತೆ ಬೇಕು. ಹೀಗಾಗಿ ವೇಳೆ ನಿಗದಿ ಮಾಡಿದಾಗ ಬದ್ಧತೆ ಬರುತ್ತದೆ. ಅದು ಬಿಟ್ಟು ಬಯೋಮೆಟ್ರಿಕ್ ಪದ್ದತಿ ಅಳವಡಿಸಿದರೆ ಇನ್ನಷ್ಟು ತೊಂದರೆ ಉಂಟಾಗುತ್ತದೆ, ಹೊರತು ಇದರಿಂದ ಸಿಬ್ಬಂದಿಗಳಿಗೆ ಅನುಕೂಲ ಉಂಟಾಗಲು ಸಾಧ್ಯವಿಲ್ಲ. ಇದರ ನೇರ ಪರಿಣಾಮ ಸೇವೆಯಲ್ಲಿ ಕಂಡುಬರುತ್ತದೆ ಎಂದರು.
ಇಲಾಖೆ ನೌಕರರಲ್ಲಿ ಒತ್ತಡ ನಿವಾರಣೆ ಆಗಬೇಕಾದರೆ ಈ ಪದ್ಧತಿಯನ್ನು ತೆಗೆದು ಹಾಕಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚನೆ ನಡೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘದ ಅಧ್ಯಕ್ಷ ಮ.ಸ. ನಂಜುಂಡಸ್ವಾಮಿ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಐ.ಪಿ. ಶಾಂತರಾಜ್, ಗೌರವ ಅಧ್ಯಕ್ಷ ಡಾ. ಗುಡದಪ್ಪ ಕಸುಬಿ ಹಾಜರಿದ್ದರು. ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಪ್ರಭಾಕರ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ನರಸಿಂಹ ನಿರೂಪಿಸಿದರು, ಶಶಿಕುಮಾರ್ ವಂದಿಸಿದರು.