ಶಿವಮೊಗ್ಗ, ಆಗಸ್ಟ್ 07 : ಜನಸಾಮಾನ್ಯರ ಆರೋಗ್ಯ ಮತ್ತು ಶಿಕ್ಷಣ ಸುಧಾರಣೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಎಲ್ಲರೂ ಅರಿತು ಅವುಗಳ ಲಾಭ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಅವರು ಹೇಳಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದಲ್ಲಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ಆರೋಗ್ಯ ಕಾರ್ಯಕ್ರಮಗಳ ಕುರಿತು ಜನಜಾಗೃತಿಗಾಗಿ ಇಂದಿನಿಂದ 2ದಿನಗಳ ನಡೆಯಲಿರುವ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅನೇಕರಿಗೆ ತಮ್ಮ ಸುತ್ತಮುತ್ತಲ ಪರಿಸರ, ಕುಡಿಯುವ ನೀರಿನ ಮೂಲಗಳು ಹಾಗೂ ಅವುಗಳು ಕಲುಷಿತವಾಗುವುದರಿಂದ ಆಗಬಹುದಾದ ಅನಾರೋಗ್ಯದ ಕುರಿತು ಅರಿವಿಲ್ಲ. ಆದ್ದರಿಂದ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಗಮನಹರಿಸುವುದರ ಜೊತೆಗೆ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಗಮನಹರಿಸಬೇಕು. ನಮ್ಮ ಆರೋಗ್ಯದ ರಕ್ಷಣೆ ನಮ್ಮದೇ ಜವಾಬ್ದಾರಿ. ಅದಕ್ಕೆ ಪೂರಕವಾಗಿ ಜನಹಿತಕ್ಕಾಗಿ ಸರ್ಕಾರಗಳು ಅನುಷ್ಠಾನಗೊಳಿಸುವ ಯೋಜನೆಗಳನ್ನು ಬಳಸಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಮುಂದಾಗುವಂತೆ ಅವರು ಕರೆನೀಡಿದರು.
ಈ ವಸ್ತುಪ್ರದರ್ಶನದಲ್ಲಿ ಶುದ್ಧ ಕುಡಿಯುವ ನೀರಿನ ಸೇವನೆ, ಆಹಾರ ಸೇವನೆಗೆ ಮುನ್ನ ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ರೀತಿ, ಪರಿಸರದ ಸ್ವಚ್ಚತೆ, ಜಲಮೂಲಗಳ ಸಂರಕ್ಷಣೆ, ತಾಯಿ ಮತ್ತು ಮಗುವಿನ ಆರೈಕೆ, ನವಜಾತ ಶಿಶುಗಳ ಆರೈಕೆ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳು, ಬಾಣಂತಿಯರು ಸೇವಿಸುವ ಪೌಷ್ಠಿಕಾಂಶಯುಕ್ತ ಆಹಾರ ಕ್ರಮಗಳು, ತಾಯಿ ಕಾರ್ಡು, ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮ, ಶೌಚಗೃಹ ಬಳಕೆ, ವಿದ್ಯುತ್ ಅವಘಡಗಳಿಂದ ಪಾರಾಗುವ ಹಾಗೂ ಸುರಕ್ಷತಾ ಕ್ರಮಗಳ ಅರಿವು, ರಕ್ತಹೀನತೆ, ಡೇಂಗ್ಯೂ ಮತ್ತು ಚಿಕೂನ್‍ಗುನ್ಯ ನಿಯಂತ್ರಣ ಕ್ರಮಗಳು, ಮಾನಸಿಕ ಆರೋಗ್ಯ, ಅಲ್ಲದೇ ನೇಕಾರರ, ಮೀನುಗಾರರ ಸಾಲಮನ್ನಾ ಮತ್ತು ಕೃಷಿಕ್ಷೇತ್ರದ ವಿಕಾಸಕ್ಕೆ ಸರ್ಕಾರದ ಕ್ರಮಗಳ ಕುರಿತು ಮಾಹಿತಿ ವಸ್ತುಪ್ರದರ್ಶನದಲ್ಲಿ ಬಿತ್ತರಿಸಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ರಾಜೇಶ್ ಸುರಗೀಹಳ್ಳಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಫಿಸಾದುದ್ದೀನ್, ಡಾ||ನಾಗರಾಜ್‍ನಾಯ್ಕ್ ಸೇರಿದಂತೆ ಕೆ.ಎಸ್.ಆರ್.ಟಿ.ಸಿ. ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

error: Content is protected !!