ಶಿವಮೊಗ್ಗ, ಅಕ್ಟೋಬರ್-15 : ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರವು ದಸರಾ ನಾಡಹಬ್ಬವನ್ನು ಕೊರೋನಾ ಹಿನ್ನೆಲೆಯನ್ನು ಸರಳವಾಗಿ ಆಚರಿಸುತ್ತಿದ್ದು, ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ನಾಡ ಹಬ್ಬದ ಆಚರಣೆ ಸಂದರ್ಭದಲ್ಲಿ 100 ಕ್ಕಿಂತ ಹೆಚ್ಚು ಸಾರ್ವಜನಿಕರು ಒಮ್ಮೆಲೇ ಸೇರುವಂತಿಲ್ಲ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಪಾಲಿಸುವಂತೆ ರಾಜ್ಯ ಸರ್ಕಾರ ಅದೇಶಿಸಿದೆ.
ನಗರದಲ್ಲಿ ಅ. 17 ರಿಂದ 19 ರವರೆಗೆ 9 ದಿನಗಳ ಕಾಲ ನಡೆಯುವ ದಸರಾ ನಾಡ ಹಬ್ಬದ ಆಚರಣೆಯನ್ನು ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದ್ದು, ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ಇರುವುದಿಲ್ಲ. ಬನ್ನಿ ಮುಡಿಯುವ ಕಾರ್ಯಕ್ರಮವನ್ನು ವಿವಿಧ ವಿದ್ಯುನ್ಮಾನ ಯಂತ್ರ ಹಾಗೂ ಸ್ಥಳೀಯ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡುತ್ತಿದ್ದು, ದಸರಾ ಹಬ್ಬವನ್ನು ಸಾರ್ವಜನಿಕರು ಮನೆಯಲ್ಲಿಯೇ ವೀಕ್ಷಿಸಬಹುದಾಗಿದೆ.
ಹಬ್ಬ ಹರಿದಿನಗಳು ಸಮಾಜದ ಶಾಂತಿ ಸೌಹಾರ್ದತೆ ಮತ್ತು ಸಾಮರಸ್ಯವನ್ನು ಕಾಪಾಡಲು ಪೂರಕವಾಗಿರುವುದರಿಂದ ದಸರಾ ನಾಡ ಹಬ್ಬವನ್ನು ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.