ಶಿವಮೊಗ್ಗ, ಜನವರಿ 05 : ಸಾಗರ ನಗರಸಭಾ ಕಾರ್ಯಾಲಯವು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ(ಡೇ-ನಲ್ಸ್) 03 ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಗೌರವಧನದ ಆಧಾರದ ಮೇಲೆ ಸೃಜಿಸಿ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಡೇ-ನಲ್ ಯೋಜನೆಯಡಿ ರಚಿಸಿದ ಪ್ರದೇಶ ಮಟ್ಟದ ಒಕ್ಕೂಟ, ಸ್ವ-ಸಹಾಯ ಸಂಘಗಳ ಸದಸ್ಯರು ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ ರೂ.8000/-ಹಾಗೂ ಗರಿಷ್ಟ ಪ್ರಯಾಣ ವೆಚ್ಚ ರೂ.2000/-ಗಳನ್ನು ನೀಡಲಾಗುವುದು.
ಅರ್ಹ ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಿಂದ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿಯ ನಿರ್ಣಯವೇ ಅಂತಿಮವಾದುದಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗಧಿತ ಅರ್ಜಿ ನಮೂನೆಯನ್ನು ಸಾಗರ ನಗರಸಭೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ದೃಢೀಕೃತ ದಾಖಲೆಗಳೊಂದಿಗೆ ದಿನಾಂಕ:21-01-2022ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಯು 18ರಿಂದ 45ವರ್ಷ ವಯೋಮಿತಿಯೊಳಗಿನವರಾಗಿದ್ದು, ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು. ಸಾಗರ ನಗರಸಭೆ ವ್ಯಾಪ್ತಿಯ ಡೇ-ನಲ್ಮ್ ಯೋಜನೆಯಡಿ ರಚಿಸಿದ ಪ್ರದೇಶ ಮಟ್ಟದ ಒಕ್ಕೂಟ, ಸಹಾಯ ಸಂಘಗಳಲ್ಲಿ ಕನಿಷ್ಟ ಮೂರು ವರ್ಷದಿಂದ ಸದಸ್ಯರಾಗಿರಬೇಕು. ಕಂಪ್ಯೂಟರ್ ನಿರ್ವಹಣೆಗೆ ಜ್ಞಾನ ಹೊಂದಿರಬೇಕು.(ಪ್ರಮಾಣ ಪತ್ರ ಲಗತ್ತಿಸುವುದು) ಸ್ವ-ಸಹಾಯ ಸಂಘವು ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯತ್ವವನ್ನು ಹೊಂದಿರಬೇಕು. ಸ್ವ-ಸಹಾಯ ಸಂಘದಲ್ಲಿ ಅಂತರಿಕ ಸಾಲ ಪಡೆದು ಮರು ಪಾವತಿಸಿರಬೇಕು. ಸುಸ್ತಿದಾರರಾಗಿರಬಾರದು.
ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಸ್ಥಳೀಯ ನಿವಾಸಿಯಾಗಿರಬೇಕು. ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಸ್ವ-ಇಚ್ಛಸೇವಾ ಮನೋಭಾವ ಹೊಂದಿರಬೇಕು. ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಬೇರೆ ಬೇರೆ ಸ್ಥಳಗಳಲ್ಲಿ, ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಹೊರ ರಾಜ್ಯಗಳಲ್ಲಿ ನೀಡುವ ತರಬೇತಿಗೆ ಅಥವಾ ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು. ಸಂಘದಿಂದ ಸಾಲ ಪಡೆದು ಆಸ್ತಿ ಸೃವಿಸುವಿಕೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಮುಂತಾದ ಚಟುವಟಿಕೆಗಳನ್ನು ಕೈಗೊಂಡಿರಬೇಕು. ಪಂಚಸೂತ್ರದ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದು, ಸ್ವ-ಸಹಾಯ ಸಂಘ ನಿರ್ವಹಿಸಬೇಕಾಗಿರುವ ಮಸ್ತಕಗಳು ಹಾಗೂ ವಹಿಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು. ಯಾವುದೇ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳಲ್ಲಿ ಪೂರ್ಣಾವಧಿ ಅಥವಾ ತಾತ್ಕಾಲಿಕ ಉದ್ಯೋಗಸ್ಥರಾಗಿರಬಾರದು.
ಮಾಹಿತಿಗಾಗಿ ದೂರವಾಣಿ ಸಂಖ್ಯೆ 08183-226021ನ್ನು ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!