ಶಿವಮೊಗ್ಗ: ನಿಸ್ವಾರ್ಥ ಮನೋಭಾವದಿಂದ ನಿರಂತರವಾಗಿ ಸಮಾಜಮುಖಿ ಸೇವೆಗಳನ್ನು ನಡೆಸುತ್ತಿರುವ ರೋಟರಿ ಕ್ಲಬ್ಗಳ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಅಗತ್ಯ ಇರುವವರಿಗೆ ನೆರವು ಒದಗಿಸುವ ಕೆಲಸ ನಿರಂತರವಾಗಿ ಮಾಡಲಿ ಎಂದು ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ಸಿ.ಎ.ದೇವ್ ಆನಂದ್ ಆಶಿಸಿದರು.
ಶಿವಮೊಗ್ಗ ನಗರದ ಸಾಯಿ ಇಂಟರ್ ನ್ಯಾಷನಲ್ ಹೊಟೇಲ್ನಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಪದವಿ ಸ್ವೀಕಾರ ಸಮಾರಂಭದಲ್ಲಿ ಪ್ರತಿಷ್ಠಾಪನಾಧಿಕಾರಿಯಾಗಿ ಉದ್ಘಾಟಿಸಿ ಮಾತನಾಡಿದರು.
ರೋಟರಿ ಸಂಸ್ಥೆಯು ವಿಶ್ವದ ನೂರಾರು ದೇಶಗಳಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಕೈಗೊಂಡು ಸೇವೆ ಸಲ್ಲಿಸುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುವ ಜತೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಸೇವೆಗಳ ಮುಖಾಂತರ ಜನಮಾನಸ ತಲುಪುತ್ತಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ 2023-24ರ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದು, ಮೌಲ್ಯ ಆಧಾರಿತ ಶಿಕ್ಷಣ, ಮಣ್ಣಿನ ಫಲವತ್ತತೆಯ ಸಂರಕ್ಷಣೆ, ಸುರಕ್ಷಿತ ವಾಹನ ಚಾಲನೆ ಹಾಗೂ ಇ-ತ್ಯಾಜ್ಯ ವಿಲೇವಾರಿ ಕುರಿತಂತೆ ಜಾಗೃತಿ ಅಭಿಯಾನವನ್ನು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಉತ್ತಮ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ವಿಶೇಷವಾಗಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮುಖಾಂತರ ಅಗತ್ಯ ಇರುವವರಿಗೆ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಇದೆ. ಶಿಬಿರಗಳ ಜತೆಯಲ್ಲಿ ಆರೋಗ್ಯ ಜಾಗೃತಿ, ಮಾನಸಿಕ ಸ್ವಾಸ್ಥ್ಯ ಕುರಿತ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ 15 ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು. ರೋಟರಿ ವಲಯ 11ರ ಸಹಾಯಕ ಗವರ್ನರ್ ರವಿ ಕೋಟೋಜಿ, ಜೋನಲ್ ಲೆಫ್ಟಿನೆಂಟ್ ಧರ್ಮೇಂದರ್ ಸಿಂಗ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್ಕುಮಾರ್.ಡಿ., ಉಪಾಧ್ಯಕ್ಷ ಜಿ.ವಿಜಯ್ಕುಮಾರ್, ನಿಕಟಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ, ನಿಕಟಪೂರ್ವ ಕಾರ್ಯದರ್ಶಿ ಕೆ.ಕುಮಾರಸ್ವಾಮಿ, ಮಂಜುನಾಥ್ ಕದಂ, ಡಾ. ಗುಡದಪ್ಪ ಕಸಬಿ, ವಸಂತ್ ಹೋಬಳಿದಾರ್, ಕಡಿದಾಳ್ ಗೋಪಾಲ್, ಸೂರ್ಯನಾರಾಯಣ, ಚಂದ್ರಹಾಸ ಪಿ.ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.
