ಶಿವಮೊಗ್ಗ: ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯ ರಕ್ತದಾನ ಆಗಿದ್ದು, ಆರೋಗ್ಯವಂತ ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಭಿಪ್ರಾಯ ಪಟ್ಟರು.
ಶಿವಮೊಗ್ಗ ನಗರದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ಜವಾಹರಲಾಲ್ ನೆಹರು ತಾಂತ್ರಿಕ ಮಹಾವಿದ್ಯಾಲಯ, ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು,
ರಕ್ತದಾನ ಮಾಡುವುದರಿಂದ ಆರೋಗ್ಯ ಸದೃಢವಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಇರುವವರಿಗೆ ರಕ್ತದ ನೆರವು ನೀಡಿದಂತಾಗುತ್ತದೆ. ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಜೀವದಾನ ಮಾಡಲು ಸಾಧ್ಯ ಇರುವುದು ರಕ್ತದಾನದಿಂದ ಮಾತ್ರ. ರಕ್ತದಾನ ಮಾಡುವ ಹವ್ಯಾಸವನ್ನು ಆರೋಗ್ಯವಂತ ಯುವ ಜನರು ಬೆಳೆಸಿಕೊಳ್ಳಬೇಕು ಎಂದರು.
ಜೆಎನ್‌ಎನ್‌ಸಿಇ ಪ್ರಾಚಾರ್ಯ ಡಾ. ನಾಗೇಂದ್ರಪ್ರಸಾದ್ ಮಾತನಾಡಿ, ನಮ್ಮ ಕಾಲೇಜಿನ ವತಿಯಿಂದ ಉತ್ತಮ ಕಾರ್ಯ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ. ಇತರರ ಜೀವ ಉಳಿಸುವ ಕಾರ್ಯದಲ್ಲಿ ನೀವೆಲ್ಲ ಕೈಜೋಡಿಸುವುದು ಮಾದರಿಯಾಗಿದೆ ಎಂದು ಹೇಳಿದರು.
ರೋಟರಿ ಸಹಾಯಕ ಗವರ್ನರ್ ಸುನೀತಾ ಶ್ರೀಧರ್ ಮಾತನಾಡಿ, ರೋಟರಿ ಸಂಸ್ಥೆಯು ಸೇವೆಯಿಂದ ವಿಶ್ವಾದ್ಯಂತ ಹೆಸರು ಗಳಿಸಿದ್ದು, ಜ್ಯೂಬಿಲಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ನಿರಂತರವಾಗಿ ನಡೆದು ಕೊಂಡು ಬಂದಿದೆ ಎಂದು ತಿಳಿಸಿದರು. 131 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಅಶ್ವತ್ಥನಾರಾಯಣ ಶೆಟ್ಟಿ, ಎನ್.ಜೆ.ಸುರೇಶ್, ವೆಂಕಟೇಶ್ ಗುತ್ತಲ್, ಬಸವರಾಜ್, ಡಾ. ಪಿ.ಮಂಜುನಾಥ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ದಿನೇಶ್, ಗಿರೀಶ್, ಸುರೇಶ್, ಅಶ್ವಿನಿ, ಸತ್ಯಪ್ರೇಮ, ಕಾವ್ಯ, ಭೂಮಿಕ, ಅಶ್ವಥ್, ಆನಂದರಾಜ್, ಅರುಣ್ ಕುಮಾರ್, ಎಸ್.ಎಸ್.ವಾಗೇಶ್ ಉಪಸ್ಥಿತರಿದ್ದರು.

error: Content is protected !!