ಶಿವಮೊಗ್ಗ, ಜನವರಿ 12 : ಭಾರತದ ತತ್ವಜ್ಞಾನ, ಯೋಗ, ವೇದಾಂತ ಸೇರಿದಂತೆ ಇಲ್ಲಿನ ಇತಿಹಾಸ, ಶ್ರೀಮಂತ ಸಂಸ್ಕøತಿ ಮತ್ತು ಭವ್ಯ ಪರಂಪರೆಯನ್ನು ಜಗತ್ತಿಗೆ ಸಾರಿದ ಮಹನೀಯ ಸ್ವಾಮಿ ವಿವೇಕಾನಂದರು ಎಂದು ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್.ಅರುಣ್ ಅವರು
ಅವರು ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರೂ ಯುವಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ರಾಷ್ಟ್ರೀಯ ಯುವ ದಿನ ಹಾಗೂ ವಿವೇಕಾನಂದರ 158ನೇ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮನುಕುಲದ ಏಳಿಗೆಗಾಗಿ ಶ್ರಮಿಸಿದ ಪ್ರಬುದ್ಧ ವ್ಯಕ್ತಿ ವಿವೇಕಾನಂದರು ಇಲ್ಲಿನ ಜನರ ಉದ್ಧಾರಕ್ಕಾಗಿ ದುಡಿಯುವ ಅದಮ್ಯ ತುಡಿತ ಹೊಂದಿದ್ದರು. ಈ ನೆಲದಿಂದ ಎಲ್ಲವನ್ನು ಪಡೆದÀ ಯುವ ಜನರು ಈ ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡಬೇಕಾದ, ವಿಶಾಲ ಮನೋಭಾವ ಪ್ರದರ್ಶಿಸಬೇಕಾದ ದಿನ ಇದಾಗಿದೆ ಎಂದರು.
ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಯುವಜನರನ್ನು ಹೊಂದಿದ ದೇಶ ಭಾರತ. ಮುಂದಿನ ಕೆಲವು ದಶಕಗಳಲ್ಲಿ ಭಾರತ ವಿಶ್ವಗುರುವಾಗಿ ವಿಶ್ವದ ಗಮನ ಸೆಳೆಯಲಿದೆ. ವಿವೇಕಾನಂದರ ಜೀವನಾದರ್ಶದಿಂದ ಜನಸಾಮಾನ್ಯರಲ್ಲಿ ಆತ್ಮಸ್ಥೈರ್ಯ, ಆತ್ಮಾಭಿಮಾನ, ಮತ್ತು ಸ್ವಾಭಿಮಾನದಿಂದ ಬದುಕುವ ಭರವಸೆ ಮೂಡಲಿದೆ ಎಂದರು.
ಇಂದಿನ ಯುವ ಪೀಳಿಗೆ ನಾಡಿನ ಏಳಿಗೆಗಾಗಿ ಶ್ರಮಿಸಿದ ಮಹನೀಯರ ತತ್ತ್ವಾದರ್ಶಗಳನ್ನು ಅನುಸರಿಸಬೇಕಾದ ಅಗತ್ಯವಿದೆ ಎಂದ ಅವರು ವಿವೇಕಾನಂದರು ಎಲ್ಲರ ನೆಮ್ಮದಿಯ, ಸಂತಸದ ಬದುಕಿಗೆ ಪ್ರೇರಣೆಯಾಗಲಿದ್ದಾರೆ. ಭಾರತ ಕಂಡ ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಸ್ವಾಮಿ ವಿವೇಕಾನಂದರು ಅಗ್ರರಣ್ಯರು. ಅವರ ಆಧ್ಯಾತ್ಮಿಕ ಸಾಧನೆ ಕೇವಲ ವೈಯಕ್ತಿಕ ನೆಲೆಗಟ್ಟಿಗೆ ಸೀಮಿತವಾಗಿರದೆ ಸಮಾಜದ ಅಭ್ಯುದಯಕ್ಕೆ ಮಾರ್ಗದರ್ಶಿಯಾಗಿತ್ತು. ಅವರ ಸ್ಫೂರ್ತಿದಾಯಕ ಚಿಂತನೆಗಳು ಯುವಚೇತನವನ್ನು ಜಾಗೃತಗೊಳಿಸಿದ್ದವು. ಸತ್ವಯುತ ವ್ಯಕ್ತಿತ್ವ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದ ಅವರ ವಿಚಾರಧಾರೆಗಳು ಯುವ ಜನರಿಗೆ ಸ್ಫೂರ್ತಿಯ ಸೆಲೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡಿಯನ್ ಮನಿ ಡಾಟ್‍ಕಾಮ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಸುಧೀರ್ ಅವರು ಮಾತನಾಡಿ, ವಿವೇಕರ ಸಾರ್ವತ್ರಿಕ ಭ್ರಾತೃತ್ವ ಮತ್ತು ಸ್ವಯಂ ಜಾಗೃತಿಯ ಸಂದೇಶ, ಅವರ ಬೋಧನೆಗಳು ಅನೇಕರಿಗೆ ಸ್ಫೂರ್ತಿಯಾಗಿವೆ. ವಿಶೇಷವಾಗಿ ದೇಶದ ಯುವ ಜನರಿಗೆ ಸ್ವಯಂ ಸುಧಾರಣೆಗೆ ಪ್ರೇರಕಶಕ್ತಿಯಾಗಿದೆ ಎಂದರು.
ತಮ್ಮ ಗುರುಗಳ ಉದಾತ್ತ ಚಿಂತನೆಯ ಆದರ್ಶಗಳನ್ನು ಹೊಸ ರೀತಿಯಲ್ಲಿ ಬಣ್ಣಿಸಿ ಪ್ರಚುರಪಡಿಸಿದರು. ಬಡವರ, ನಿರ್ಗತಿಕರ ದಾಸ್ಯದಲ್ಲಿದ್ದ ಸಮಾಜ ಸುಧಾರಣೆಗೆ ದಣಿವರಿಯದೇ ಕಾರ್ಯನಿರ್ವಹಿಸಿ ದೇಶ ಸೇವೆಗಾಗಿ ಸರ್ವಸ್ವವನ್ನೆ ಅರ್ಪಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ
ಮಹಾನಗರಪಾಲಿಕೆ ಮೇಯರ್ ಶ್ರೀಮತಿ ಸುವರ್ಣಶಂಕರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಮಹಾನಗರಪಾಲಿಕೆ ಉಪಮೇಯರ್ ಶ್ರೀಮತಿ ಸುರೇಖಾ ಮುರಳೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಮಹಾನಗರಪಾಲಿಕೆ ಸದಸ್ಯರಾದ ಚನ್ನಬಸಪ್ಪ, ಜ್ಞಾನೇಶ್ವರ್, ಪ್ರಭಾಕರ್, ವಿಶ್ವಾಸ್, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!