ಶಿವಮೊಗ್ಗ : ಉತ್ತರಾಧಿಮಠದ ಪರಂಪರೆಯಲ್ಲಿ ಮಧ್ವಶಾಸ್ತ್ರವನ್ನು ಅತ್ಯಂತ ವ್ಯವಸ್ಥಿತವಾಗಿ ಅನುಷ್ಠಾನ, ಪ್ರತಿಪಾದನೆ ಮಾಡಿದವರು ಸತ್ಯಧ್ಯಾನರು ಎಂದು ಪಂಡಿತ ನವರತ್ನ ಶ್ರೀನಿವಾಸಾಚಾರ್ ಹೇಳಿದರು. ಶಿವಮೊಗ್ಗದ ಅಶ್ವತ್ಥನಗರದಲ್ಲಿ ಅದ್ಯಾಪಿ ಗುಂಡಾಚಾರ್ ಮನೆತನವರು ಮಂಗಳವಾರ ಅಯೋಜಿಸಿದ್ದ ಸತ್ಯಧ್ಯಾನರ 79ನೇ ಆರಾಧನಾ ಮಹೋತ್ಸವದಲ್ಲಿ ಉಪನ್ಯಾಸ ಮಾಡುತ್ತಿದ್ದರು.
ಸತ್ಯಧ್ಯಾನರು ಭಗವದ್ಗೀತೆಯ ಮೇಲೆ ಸಭಾ ಸಾರಸಂಗ್ರಹ ಎಂಬ ಗ್ರಂಥವನ್ನು ರಚಿಸಿ ಪ್ರತಿಯೊಬ್ಬರಿಗೂ ಗೀತೆಯ ಅರ್ಥ ಪರಿಚಯವಾಗುವ ಹಾಗೆ ಕೃತಿಯ ಮೂಲಕ ಸಾರಿದ್ದಾರೆ. ಅಲ್ಲದೆ ಪ್ರಸ್ತುತ ಮಠಗಳನ್ನು ಮುನ್ನಡೆಸುತ್ತಿರುವ ಮಧ್ವ ಯತಿಗಳಿಗೆ ಸನ್ಯಾಸಾಶ್ರಮವನ್ನು ಎಷ್ಟು ವ್ಯವಸ್ಥಿತವಾಗಿ ಮುನ್ನಡೆಸಬೇಕು ಎನ್ನುವ ಬಗ್ಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಮಧ್ವಶಾಸ್ತ್ರವನ್ನು ಅಧ್ಯಯನ ಮಾಡುವವರಿಗೆ ಆ ಕಾಲದಲ್ಲಿಯೇ ಎಲ್ಲ ಸೌಕರ್ಯಗಳನ್ನೂ ಒದಗಿಸಿಕೊಟ್ಟು ಶಾಸ್ತ್ರಾಭ್ಯಾಸ ಮತ್ತು ಗ್ರಂಥ ರಚನೆಗೆ ಪ್ರಾಮುಖ್ಯತೆಯನ್ನು ನೀಡಿದರು. ಇಂದಿಗೂ ಮಧ್ವಶಾಸ್ತ್ರದ ಬಹುಮುಖ್ಯವಾದ ವಿಚಾರಗಳನ್ನು ಅಧ್ಯಯನ ಮಾಡಬೇಕು ಮತ್ತು ಆಚಾರ್ಯ ಮಧ್ವರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಸತ್ಯಧ್ಯಾನರು ಮಾಡಿರುವ ಕೃತಿ ಮತ್ತು ಕೆಲಸದ ಮೊರೆ ಹೋಗಬೇಕು ಎಂದರು.
ಭದ್ರಾವತಿಯ ಪಂಡಿತ ಘಂಟಿ ನಾರಾಯಣಾಚಾರ್ ಮಾತನಾಡಿ, ಫಂಡರಾಪುರದಲ್ಲಿ ಸತ್ಯಧ್ಯಾನರ ಮೂಲ ವೃಂದಾವನವಿದೆ. ಇಂದಿಗೂ ಅಲ್ಲಿಯೂ ಕೂಡ ವಿಜೃಂಭಣೆಯಿಂದ ಆರಾಧನಾ ಮಹೋತ್ಸವ ನಡೆಯುತ್ತದೆ. ಉತ್ತರಾಧಿ ಮಠದ ಪರಂಪರೆಯನ್ನು ಅನೂಚಾನವಾಗಿ ಅನುಸರಿಸಿಕೊಂಡು ಬಂದವರು ದೇಶದಾದ್ಯಂತ ಸತ್ಯಧ್ಯಾನರ ಆರಾಧನಾ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಪಂಡಿತ ಕೃಷ್ಣಾಚಾರ್ ಮಣ್ಣೂರು ಮಾತನಾಡಿ, ಬ್ರಿಟಿಷರ ಕಾಲದಲ್ಲಿ ಶಾಸ್ತ್ರ, ವೇದ ಅಧ್ಯಯನ ಮಾಡುವಂತಹ ಬ್ರಾಹ್ಮಣ ಸಮುದಾಯವನ್ನು ಸರ್ಕಾರದ ಕೆಲಸಕ್ಕೆ ಕರೆಯಲಾಗುತ್ತಿದ್ದ ಸಂದರ್ಭಗಳು ಕಂಡುಬಂದಾಗ ಸತ್ಯಧ್ಯಾನರು ಅಂಥವರೆಲ್ಲರನ್ನೂ ಶಾಸ್ತ್ರದ ಅಧ್ಯಯನಕ್ಕೆ ತೊಡಗಿಸಿ ಅವರ ಬದುಕು ಮುನ್ನಡೆಸಲು ಎಲ್ಲ ರೀತಿಯ ಸಹಕಾರವನ್ನೂ ಶ್ರೀಮಠದಿಂದಲೇ ಮಾಡಿಕೊಟ್ಟರು. ನಮ್ಮ ಶಾಸ್ತ್ರ ಮತ್ತು ಪರಂಪರೆ ನಿರಂತರವಾಗಿ ಉಳಿಯಬೇಕು ಎನ್ನುವುದು ಅವರ ಅಪೇಕ್ಷೆಯಾಗಿತ್ತು. ಧಾರ್ಮಿಕ ಆಚರಣೆ ಮತ್ತು ಆರಾಧನೆಗಳು ನಿರಂತರವಾಗಿ ನಡೆದುಕೊಂಡುಬರಬೇಕು. ಉತ್ತರಾದಿ ಮಠದ ಪರಂಪರೆಯಲ್ಲಿ ತಮ್ಮ ವಿಶಿಷ್ಟ ಕೆಲಸಗಳ ಮೂಲಕ ಸತ್ಯಧ್ಯಾನರು ತಮ್ಮ ಛಾಪು ಮೂಡಿಸಿದರು. ಸತ್ಯಧ್ಯಾನರಿಗೆ ವಾಹನವನ್ನು ಮುನ್ನಡೆಸಿ ಸೇವೆ ಮಾಡಿದ ದಿವಂಗತ ಕಲ್ಯಾಣಿ ರಾಮಾಚಾರ್ರವರ ಕುಟುಂಬ ಇಂದಿಗೂ ಸಾಗರದಲ್ಲಿದೆ ಎಂಬ ವಿಶೇಷತೆಯನ್ನು ಉಪನ್ಯಾಸದಲ್ಲಿ ಪ್ರಸ್ತಾಪಿಸಿದರು.
ಪಂಡಿತರಾದ ಮಣ್ಣೂರು ವೆಂಕಟೇಶಾಚಾರ್, ಆನಂದಾಚಾರ್ ಗುಮಾಸ್ತೆ, ವರದಾಚಾರ್ ಆದ್ಯ, ಅಧ್ಯಾಪಿ ಗುಂಡಾಚಾರ್ ಉಪಸ್ಥಿತರಿದ್ದರು. ಆರಾಧನೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಫೋಟೋ 1: ಶಿವಮೊಗ್ಗದಲ್ಲಿ ಅಯೋಜಿಸಿದ್ದ ಸತ್ಯಧ್ಯಾನರ 79ನೇ ಆರಾಧನಾ ಮಹೋತ್ಸವದಲ್ಲಿ ಭದ್ರಾವತಿಯ ಪಂಡಿತ ಘಂಟಿ ನಾರಾಯಣಾಚಾರ್ ಉಪನ್ಯಾಸ ನೀಡಿದರು.