ಶಿವಮೊಗ್ಗ : ಸಂಸ್ಕಾರಯುತ ಜೀವನ ನಡೆಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಆದಿ ಚುಂಚನಗಿರಿ ವಿದ್ಯಾ ಸಂಸ್ಥೆಯ ನಿರ್ದೇಶಕ ಡಿ.ವಿ.ಸತೀಶ್ ಬೇಸರ ವ್ಯಕ್ತಪಡಿಸಿದರು.
ಶ್ರೀ ಆದಿ ಚುಂಚನಗಿರಿ ಶಾಖಾ ಮಠದ ವತಿಯಿಂದ ನಗರದ ಶ್ರೀ ಕಾಲಭೈರವೇಶ್ವರ ದೇವಸ್ಥಾನದಲ್ಲಿ ೧೨ದಿನಗಳ ಕಾಲ ೧೨ರಿಂದ ೧೫ ವಯೋಮಾನದ ಬಾಲಕರಿಗೆ ಏರ್ಪಡಿಸಲಾಗಿದ್ದ ಉಚಿತ ಪೂಜಾ ವಿಧಾನ ಅಭ್ಯಾಸ ತರಬೇತಿ ಕಾರ‍್ಯಾಗರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಂಸ್ಕಾರಯುತ ಜೀವನವನ್ನು ಸಾಗಿಸಿದರೆ ನಮ್ಮ ಸಮಾಜ ಉತ್ತಮ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಸಂಸ್ಕಾರವು ಮಾನವ ಜೀವನದ ವಿವಿಧ ಘಟ್ಟಗಳನ್ನು ಗುರುತು ಮಾಡುತ್ತದೆ. ಧರ್ಮ ಮಾರ್ಗಗಳಲ್ಲಿ ನಡೆಯಲು ಅರ್ಹತೆಯನ್ನು ನೀಡುತ್ತದೆ. ಉತ್ತಮ ಜೀವನ ನಡೆಸಲು ಕೆಲವೊಂದು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವುದರಿಂದ ಸಾಧ್ಯವಾಗುತ್ತದೆ. ಸಂಸ್ಕಾರಗಳನ್ನು ಯಾವುದೋ ಒಂದು ವರ್ಗಕ್ಕೆ ಮೀಸಲಿಡದೆ ಸರ್ವಜನಾಂಗಕ್ಕೂ ಲಭಿಸಬೇಕು ಎಂಬ ಆಶಯದಿಂದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಕನಸಿನಂತೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು, ಪುಟ್ಟ ಮಕ್ಕಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಬಿತ್ತಿದಾಗ ಆ ಮಕ್ಕಳು ಮನೆಯವರಿಗೆಲ್ಲಾ ಮಾದರಿಯಾಗುತ್ತಾರೆ. ಪ್ರಾತಃ ಕಾಲದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಮನೆಗಳಲ್ಲಿ ಆರಂಭಿಸಿದರೆ ಆ ಮನೆಯ ಎಲ್ಲಾ ಕೆಲಸ ಕಾರ್ಯಗಳು ಕುಟುಂಬದ ಸದಸ್ಯರ ಕನಸಿನಂತೆ ಈಡೇರಲು ಭಗವಂತನ ಪ್ರೇರಣೆಯಾಗುತ್ತದೆ, ಅಲ್ಲದೇ ಭಗವಂತನ ರಕ್ಷಣೆಯೂ ಕೂಡ ಕುಟುಂಬದ ಸದಸ್ಯರ ಮೇಲೆ ಇರುತ್ತದೆ ಎಂದ ಅವರು, ನಮ್ಮ ಹೃದಯಾಂತರಾಳದಲ್ಲಿ ಇವುಗಳ ಬಗ್ಗೆ ಆಸಕ್ತಿಯ ಬೀಜ ಮೊಳಕೆಯೊಡೆಯುವಂತಾಗಬೇಕು ಎಂದರು.
ಪ್ರತಿಯೊಂದು ಕುಟುಂಬದಲ್ಲಿ ಓರ್ವ ಸದಸ್ಯ ಸಂಸ್ಕಾರವನ್ನು ಕಲಿತರೆ ಇಡೀ ಕುಟುಂಬ ಸಂಸ್ಕಾರವಂತ ಕುಟುಂಬವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಖಾ ಮಠ ಮತ್ತು ಶ್ರೀಗಳ ಕೃಪಾಶೀರ್ವಾದದೊಂದಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಈ ಸುವರ್ಣಾವಕಾಶವನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಧಾರ್ಮಿಕ ಹಾಗೂ ಸಂಸ್ಕಾರಯುತ ಜೀವನಕ್ಕೆ ನಾಂದಿ ಹಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಹೇಮಾ ಎಸ್.ಆರ್, ಆಡಳಿತಾಧಿಕಾರಿ ಅಮಿಷ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
೧೨ ರಿಂದ ೧೫ ವಯಸ್ಸಿನ ಬಾಲಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಮೊದಲು ಬಂದವರಿಗೆ ಆದ್ಯತೆ . ಈ ಕೂಡಲೇ ಹೆಸರನ್ನು ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ದೂರವಾಣಿ ಸಂಖ್ಯೆ- ೯೬೮೬೩೪೯೫೩೪, ೯೭೩೯೭೪೪೪೩೦, ೯೯೦೨೪೧೦೧೧೨