ಶಿವಮೊಗ್ಗ ಸೆಪ್ಟೆಂಬರ್ 17: ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುವಂತೆ ಇತಿಹಾಸದ ಕುರುಹುಗಳನ್ನು ನಮ್ಮ ನಾಡಿಗೆ, ದೇಶಕ್ಕೆಮತ್ತು ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದವರು ವಿಶ್ವ ಕರ್ಮ ಸಮಾಜದವರು ಎಂದು ಸಂಸದ ಬಿ.ವೈ ರಾಘವೇಂದ್ರ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಸಂಜೆ ಏರ್ಪಡಿಸಲಾಗಿದ್ದ ಶ್ರೀ ವಿಶ್ವಕರ್ಮ ಜಯಂತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುಶಲ ಕರ್ಮಿಗಳು ಸ್ವಾವವಲಂಬಿ ಬದುಕು ಕಟ್ಟಿಕೊಳ್ಳಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ವಿಶ್ವಕರ್ಮ ಹಾಸ್ಟೆಲ್ ಗಳ ನಿರ್ಮಾಣಕ್ಕೆ ಬಿ.ಸಿ.ಎಂ ಇಲಾಖೆಯಿಂದ ಒಂದು ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು .
ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಮಾತನಾಡಿ ವಿಶ್ವ ಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ ಎಲ್ಲ ಕ್ಷೇತ್ರಗಳಲ್ಲೂ ಕರಕುಶಲತೆಯುಳ್ಳ ಪ್ರತಿಯೊಬ್ಬ ಕಾರ್ಮಿಕರ ಆರಾಧ್ಯ ದೈವ ಶ್ರೀ ವಿಶ್ವಕರ್ಮರು ಎಂದು ಹೇಳಿದರು.
ದೇವತೆಗಳಿಗೆ ಕಂಟಕವಾಗಿದ್ದ ತನ್ನ ಮಗನನ್ನು ಸಂಹಾರ ಮಾಡಲು ಆಯುಧವನ್ನು ನೀಡಿ, ಸಮಾಜದ ರಕ್ಷಣೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧರಿರಬೇಕು ಎಂಬ ಸಂದೇಶವನ್ನು ಜಗತ್ತಿಗೆ ನೀಡಿದವರು ವಿಶ್ವ ಕರ್ಮರು ಎಂದು ನುಡಿದರು.
ಭಾರತೀಯರ ದೃಷ್ಟಿಯಲ್ಲಿ ವಿಶ್ವ ಕರ್ಮರ ಜಯಂತಿ ಕಾರ್ಮಿಕರ ದಿವಸ ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳನ್ನು ಕರೆದು ವಿಶ್ವಕರ್ಮ ಜಯಂತಿಯನ್ನು ಆಚರಿಸಲು ಸಲಹೆ ನೀಡಿದರು.
ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನ ಪ್ರಾಂಶುಪಾಲರದ ಡಾ. ಭಾಗ್ಯಲಕ್ಷ್ಮಿ ಕೃಷ್ಣಮೂರ್ತಿ ಆಚಾರ್ ಅವರು ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ ಮತ್ತು ಬ್ರಹ್ಮನ್ ಹಾಗೂ ಮೂಲ ಪುರುಷರೆಂದು ಕರೆಯಲ್ಪಡುವ ಶ್ರೀವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಿಧಾನ ಪರಿಷತ್ ಶಾಸಕ ಡಿ. ಎಸ್.ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರಾ ರಾಮಯ್ಯ, ಮಹಾನಗರ ಪಾಲಿಕೆ ಸದಸ್ಯೆ ಕಲ್ಪನಾ ರಮೇಶ್, ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ, ಚನ್ನಪ್ಪ ಜಿಲ್ಲಾಧಿಕಾರಿಗಳ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್, ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ಅಗರದಹಳ್ಳಿ ನಿರಂಜನಮೂರ್ತಿ ಹಾಗೂ ಸಮಾಜದ ಮುಖಂಡರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.