ತೀರ್ಥಮತ್ತೂರು ಅಂಚೆ ವ್ಯಾಪ್ತಿಯ ಕೊಡಿಗೆ ಬೈಲು ದೇವಾಲೆಕೊಪ್ಪದಲ್ಲಿರುವ ದೇವಸ್ಥಾನ
ತೀರ್ಥಹಳ್ಳಿ: ದೇವಸ್ಥಾನಗಳ ಸಂರಕ್ಷಣೆ ಮಾಡುವುದು ಹಾಗೂ ಪೂಜಾ ವಿಧಿ ವಿಧಾನಗಳು ನಿರಂತರವಾಗಿ ನಡೆಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಭಗವಂತ ಪ್ರಸನ್ನವಾಗಿದ್ದರೆ ನಮ್ಮೆಲ್ಲರ ಶ್ರೇಯಸ್ಸು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ತೀರ್ಥಮತ್ತೂರು ಅಂಚೆ ವ್ಯಾಪ್ತಿಯ ಕೊಡಿಗೆಬೈಲು ದೇವಾಲೇಕೊಪ್ಪದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಪುನರ್ ಪ್ರತಿಷ್ಠಾಪನಾ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಳ್ಳೆಯ ಕೆಲಸಗಳು ಮಾಡುವುದೇ ಧರ್ಮ, ಪಾಪದ ಕೆಲಸಗಳನ್ನು ಮಾಡಿದರೆ ಅಧರ್ಮ ಅನುಸರಿಸಿದಂತೆ ಆಗುತ್ತದೆ. ಧರ್ಮ ಅಧರ್ಮದ ಫಲಗಳು ನಮ್ಮ ಬದುಕಿನಲ್ಲಿ ಎದುರಾಗುತ್ತವೆ. ನಾವು ಮಾಡಿದ ಒಳ್ಳೆಯ ಕೆಲಸಗಳೇ ನಮಗೆ ಉತ್ತಮ ಫಲವನ್ನು ಸಿಗುವಂತೆ ಮಾಡುತ್ತವೆ. ಜೀವನದಲ್ಲಿ ಕಷ್ಟಕರ ಸನ್ನಿವೇಶದಿಂದ ಪಾರಾದ ಸಂದರ್ಭದಲ್ಲಿ ಅನುಭವಿಸುವ ಆಶ್ಚರ್ಯಕರ ಸಂಗತಿಯೇ ನಾವು ಮಾಡಿದ ಧರ್ಮಕಾರ್ಯಗಳ ಫಲ ಎಂದು ತಿಳಿಸಿದರು.
ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಇಂದು ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದ್ದು, ಭಕ್ತರ ಫಲ ಸಿದ್ಧಿಸುವ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ನಿರಂತರ ಪೂಜಾ ವಿಧಿ ವಿಧಾನಗಳು ನಡೆಯುವಂತೆ ಆಗಬೇಕು ಎಂದರು.
ಪುನರ್ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಧಾರ್ಮಿಕ ಪೂಜಾ ವಿಧಿ ವಿಧಾನ ಆರಂಭಗೊಂಡಿದ್ದು, ಮೂರು ದಿನಗಳ ಕಾರ್ಯಕ್ರಮಗಳು ನಡೆಯಲಿವೆ. ಎರಡನೇ ದಿನವಾದ ಗುರುವಾರ ಶೃಂಗೇರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಭಕ್ತಾಧಿಗಳಿಗೆ ಮೂರು ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಜೀಣೋದ್ಧಾರ ಸಮಿತಿ ಹಾಗೂ ದೇವಾಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಶೃಂಗೇರಿ ಶ್ರೀಗಳಿಂದ ಫಲಮಂತ್ರಾಕ್ಷತೆ
ಗುರುವಾರ ಬೆಳಗಿನ ಜಾವದಿಂದಲೇ ಶ್ರೀ ಮಲ್ಲಿಕಾರ್ಜುನ ಸ್ವಾಮಿ, ಮತ್ತು ಪರಿವಾರ ದೇವರುಗಳ ಪುನಃ ಪ್ರತಿಷ್ಠಾಪನಾ, ಅಷ್ಟಬಂಧ ಸಂಯೋಜನೆ, ಪ್ರತಿಷ್ಠಾ ಹೋಮ, ಜೀವಕುಂಭ ಸ್ಥಾಪನಾ, ಪ್ರಾಣಪ್ರತಿಷ್ಠೆ, ತತ್ವಕಲಶಾಭಿಷೇಕ, ಪಂಚವಿಂಶತಿ, ದ್ರವ್ಯಕಲಶಾಧಿವಾಸ ಪೂಜೆ ಹೋಮ ನಡೆಯಿತು. ಬೆಳಗ್ಗೆ 11ಕ್ಕೆ ಶೃಂಗೇರಿ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ವಿವಿಧ ವಾದ್ಯ ತಂಡಗಳು ಪಾಲ್ಗೊಂಡಿದ್ದವು. ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಅಮೃತಹಸ್ತದಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನಾ, ಮಹಾಕುಂಭಾಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆದವು. ನಂತರ ಸಭಾ ಕಾರ್ಯಕ್ರಮದಲ್ಲಿ ಜಗದ್ಗುರುಗಳಿಗೆ ಫಲ ಸಮರ್ಪಣೆ ಹಾಗೂ ಶ್ರೀಗಳು ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿದರು.
ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಅಂಚೆ ವ್ಯಾಪ್ತಿಯ ಕೊಡಿಗೆಬೈಲು ದೇವಾಲೇಕೊಪ್ಪದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿಯ ಪುನರ್ ಪ್ರತಿಷ್ಠಾಪನಾ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ಮಾ. 10ರ ಬೆಳಗ್ಗೆ 9.45ಕ್ಕೆ ಮೇಷ ಲಗ್ನದಲ್ಲಿ ನಾಗ ಪ್ರತಿಷ್ಠಾಪನೆ ಕಲಶಾಭಿಷೇಕ, ಮಲ್ಲಿಕಾರ್ಜುನ ದೇವರಿಗೆ ಶತರುದ್ರಾಭಿಷೇಕ, ಮಹಾಪೂಜೆ ಹಾಗೂ ಮಹಾಪ್ರಸಾದ ವಿನಿಯೋಗ ಇರಲಿದೆ. ಮಾ. 10ರ ಸಂಜೆ 7ಕ್ಕೆ ರೂಪಕಲಾ ಕುಂದಾಪುರ ಬಾಲಕೃಷ್ಣ ಪೈ ( ಕುಳ್ಳಪ್ಪು ) ಅರ್ಪಿಸುವ “ಮೂರು ಮುತ್ತು” ಕಲಾವಿದರಿಂದ ಹಾಸ್ಯ ನಗೆ ನಾಟಕ ನಡೆಯಲಿದೆ.