ಶುಂಠಿಯಲ್ಲಿ ಒಂದು ಬಹುವಾರ್ಷಿಕ ಬೆಳೆಯಾಗಿದ್ದು, ಜಿಂಜಿಬೆರೇಸಿಯ ಕುಟುಂಬಕ್ಕೆ ಸೇರಿದೆ. ಶುಂಠಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಗಗಳೆಂದರೆ, ಕೊಳೆ ರೋಗ, ದುಂಡಾಣು ಸೊರಗು ರೋಗ, ಎಲೆ ಚುಕ್ಕೆ ರೋಗ ಮತ್ತು ಜಂತು ಹುಳುಗಳ ಬಾಧೆ.
ಕೊಳೆ ರೋಗ : ಕೊಳೆ ರೋಗವು ಶುಂಠಿ ಬೆಳೆಯ ಪ್ರಮುಖ ಮಾರಕ ರೋಗವಾಗಿದ್ದು ಬೆಳೆಯ ಸಂಪೂರ್ಣ ನಾಶಕ್ಕೆ ಕಾರಣವಾಗುತ್ತದೆ. ಈ ರೋಗವು ಪಿಥಿಯಂ ಎಂಬ ಶಿಲೀಂದ್ರದಿಂದ ಉಂಟಾಗುತ್ತದೆ. ಮಣ್ಣಿನ ಹೆಚ್ಚಾದ ತೇವಾಂಶ, ಅತಿಯಾದ ಆದ್ರ್ರತೆ ಮತ್ತು ನೈರುತ್ಯ ಮುಂಗಾರು ಈ ರೋಗಾಣು ಉಲ್ಬಣಗೊಳ್ಳಲು ಪೂರಕ ಅಂಶಗಳಾಗಿವೆ. ಶುಂಠಿಯು ಮೊಳಕೆ ಹಂತದಲ್ಲಿ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತದೆ.

ಲಕ್ಷಣಗಳು :
• ರೊಗವು ಕಾಂಡದ ಮೇಲೆ ನೀರಿನ ಚುಕ್ಕೆಗಳಂತೆ ಶುರುವಾಗಿ ನಂತರ ಕೆಳಗಿನ ಭಾಗಕ್ಕೆ ಹರಡುತ್ತದೆ. ರೋಗವು ಬೇರು ಕಾಂಡಕ್ಕೆ ಹರಡಿ ಕೊನೆಯ ಹಂತದಲ್ಲಿ ಬೇರುಗಳು ಕೊಳೆಯುತ್ತವೆ.
• ರೋಗಕ್ಕೆ ತುತ್ತಾದ ಗಿಡದ ಕೆಳಗಿನ ಎಲೆಯ ತುದಿಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಮಧ್ಯಭಾಗಕ್ಕೆ ಮತ್ತು ಮೇಲಿನ ಭಾಗಕ್ಕೆ ಹರಡುತ್ತದೆ. ನಂತರ ಎಲೆಗಳು ಒಣಗಿ ಉದುರುತ್ತವೆ.
• ಬೆಳೆಯ ಬೆಳವಣಿಗೆ ಸ್ಥಗಿತವಾಗಿ ಎಲೆಗಳು ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಬಾಧಿತ ಗಿಡವನ್ನು ಜಗ್ಗಿದಾಗ ಸುಲಭವಾಗಿ ಕಿತ್ತು ಬರುತ್ತದೆ.
ನಿರ್ವಹಣೆ :
• ಬೀಜಕ್ಕೆ ಉಪಯೋಗಿಸುವ ಬೇರು ಕಾಂಡವನ್ನು ರೋಗಮುಕ್ತ ಹೊಲದಿಂದ ಆಯ್ದುಕೊಳ್ಳುವುದರಿಂದ ರೋಗವನ್ನು ತಡೆಗಟ್ಟಬಹುದು.
• ಭೂಮಿಯಲ್ಲಿ ನೀರು ನಿಂತುಕೊಳ್ಳುವುದರಿಂದ ರೋಗಾಣುವು ಉಲ್ಬಣಗೊಳ್ಳುವುದು. ಆದ್ದರಿಂದ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಅಥವಾ ನೀರು ಬಸಿಯುವ ಮಣ್ಣಿನಲ್ಲಿ ಶುಂಠಿಯನ್ನು ಬೆಳೆಯುವುದು ಸೂಕ್ತ.
• ಬೆಳೆ ಪರಿವರ್ತನೆ ಮಾಡಬೇಕು.
• 1 ಕೆ.ಜಿ. ಟ್ರೈಕೋಡರ್ಮಾ ಹಾರ್ಜಿಯಾನಮ್‍ನ್ನು 90 ಕೆ.ಜಿ. ಕೊಟ್ಟಿಗೆ ಗೊಬ್ಬರ ಮತ್ತು 10 ಕೆ.ಜಿ. ಬೇವಿನ ಹಿಂಡಿಯಲ್ಲಿ ಬೆರೆಸಿ ಮಣ್ಣಿಗೆ ಹಾಕುವುದರಿಂದ ರೋಗವನ್ನು ನಿರ್ವಹಣೆ ಮಾಡಬಹುದು.
• ಬೀಜಕ್ಕೆ ಉಪಯೋಗಿಸುವ ಬೇರು ಕಾಂಡವನ್ನು, ರಿಡೋಮಿಲ್ ಎಂ. ಝೆಡ್ ಅಥವಾ ಕರ್ಜೆಟ್ 3 ಗ್ರಾಂ./ಲೀ. ದ್ರಾವಣದಲ್ಲಿ 40 ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಒಣಗಿಸಿ ನಾಟಿ ಮಾಡಬೇಕು.
• ರೋಗದ ಲಕ್ಷಣ ಕಂಡ ಕೂಡಲೇ 3 ಗ್ರಾಂ./ಲೀ. ನಂತೆ ರಿಡೋಮಿಲ್ ಎಂ. ಝೆಡ್ ಅಥವಾ ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಬಾಧಿತ ಗಿಡದ ಬುಡಕ್ಕೆ ಸುರಿಯಬೇಕು.
ಸೊರಗು ರೋಗ :
ರೊಲ್ಸೋನಿಯಾ ಸೊಲಾನೇಸಿಯಾರಮ್ ಎಂಬ ದುಂಡಾಣುವಿನಿಂದ ಈ ರೋಗವು ಉಂಟಾಗುತ್ತದೆ. ಈ ರೋಗಾಣುವು ಮಣ್ಣಿನಲ್ಲಿ ಮತ್ತು ಬೀಜದಲ್ಲಿ ಜೀವಿಸುತ್ತದೆ. ನೈರುತ್ಯ ಮುಂಗಾರಿನಲ್ಲಿ ರೋಗವು ಹೆಚ್ಚಾಗಿರುತ್ತದೆ. ಅಲ್ಲದೇ ಎಳೆಯ ಬೆಳೆಯು ಹೆಚ್ಚಾಗಿ ರೋಗ ಬಾಧೆಗೊಳಗಾಗುತ್ತದೆ.
ಲಕ್ಷಣಗಳು :
• ನೀರಿನಿಂದ ಕೂಡಿದ ಚುಕ್ಕೆಗಳು ಬುಡದ ಭಾಗದಲ್ಲಿ ಕಾಣಿಸಿಕೊಂಡು ನಂತರ ಮೇಲ್ಭಾಗಕ್ಕೆ ಮತ್ತು ಬೇರು ಕಾಂಡಕ್ಕೆ ಹರಡುತ್ತದೆ. ಮೊದಲು ಗಿಡದ ಕೆಳಭಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣವಾಗಿ ಮೇಲ್ಭಾಗದ ಎಲೆಗಳೂ ಹಳದಿಯಾಗುತ್ತವೆ. ನಂತರ ಗಿಡವು ಸೊರಗುತ್ತದೆ.
• ರೋಗಕ್ಕೆ ತುತ್ತಾದ ಗಿಡದ ಕಾಂಡವನ್ನು ಮತ್ತು ಬೇರು ಕಾಂಡವನ್ನು ಹಿಸುಕಿದರೆ ಹಾಲಿನಂತಹ ನೊರೆ ದ್ರಾವಣವು ಹೊರ ಬರುತ್ತದೆ.
ನಿರ್ವಹಣೆ :
• ಬೀಜಕ್ಕೆ ಉಪಯೋಗಿಸುವ ಬೇರು ಕಾಂಡವನ್ನು ರೋಗಮುಕ್ತ ಹೊಲದಿಂದ ಆಯ್ದುಕೊಳ್ಳುವುದರಿಂದ ರೋಗವನ್ನು ತಡೆಗಟ್ಟಬಹುದು.
• ಮಣ್ಣಿನಲ್ಲಿ ನೀರು ನಿಂತುಕೊಳ್ಳುವುದರಿಂದ ರೋಗಾಣುವು ಉಲ್ಬಣಗೊಳ್ಳುವುದು. ಆದ್ದರಿಂದ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಅಥವಾ ನೀರು ಬಸಿಯುವ ಮಣ್ಣನಲ್ಲಿ ಶುಂಠಿಯನ್ನು ಬೆಳೆಯುವುದು ಸೂಕ್ತ.
• ಬೀಜಕ್ಕೆ ಉಪಯೋಗಿಸುವ ಬೇರು ಕಾಂಡವನ್ನು ಸ್ಪ್ರೆಪ್ಟೋಸೈಕ್ಲಿನ್ (0.3 ಗ್ರಾಂ./ಲೀ) ದ್ರಾವಣದಲ್ಲಿ ಅಥವಾ ತಾಮ್ರದ ಆಕ್ಸಿಕ್ಲೋರೈಡ್ (2.5 ಗ್ರಾಂ./ಲೀ.) ದ್ರಾವಣದಲ್ಲಿ 30 ನಿಮಿಷಗಳ ಕಾಲ ಉಪಚರಿಸಿ ನಂತರ ನೆರಳಿನಲ್ಲಿ ಒಣಗಿಸಬೇಕು.
• ಗಿಡದಲ್ಲಿ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ 2 ಗ್ರಾಂ./ಲೀ. ನಂತೆ ತಾಮ್ರದ ಆಕ್ಸಿಕ್ಲೋರೈಡ್ ಅಥವಾ 2 ಗ್ರಾಂ./ಲೀ. ನಂತೆ ಕೂಸೈಡ್ ಅಥವಾ 1% ಬೋರ್ಡೊ ದ್ರಾವಣವನ್ನು ಗಿಡಗಳು ತೊಯ್ಯುವಂತೆ ಹಾಕಬೇಕು.
ಎಲೆ ಚುಕ್ಕೆ ರೋಗ :
ಎಲೆ ಚುಕ್ಕೆ ರೋಗದ ಸೋಂಕು ಫಿಲ್ಲೊಸ್ಟಿಕ್ಟ್ ಜಿಂಜಿಬೆರಿ ಎಂಬ ರೋಗಾಣುವಿನಿಂದ ತಗಲುತ್ತದೆ ಹಾಗೂ ಜುಲೈನಿಂದ ಅಕ್ಟೋಬರ್ ವರೆಗೆ ಎಲೆಚುಕ್ಕೆ ರೋಗವು ಕಂಡು ಬರುತ್ತದೆ. ಈ ರೋಗವು ಅತಿಯಾದ ಆದ್ರ್ರತೆ, ಕಡಿಮೆ ತಾಪಮಾನ ಮತ್ತು ಸಣ್ಣ ಮಳೆ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಲಕ್ಷಣಗಳು :
• ಎಲೆಗಳ ಮೇಲೆ ನೀರಿನಿಂದ ಕೂಡಿದ ಚುಕ್ಕೆಗಳು ಕಾಣಿಸಿಕೊಂಡು ನಂತರ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಕೊನೆಯ ಹಂತದಲ್ಲಿ ಚುಕ್ಕೆಗಳ ಅಂಚುಗಳು ಕಂದು ಬಣ್ಣಕ್ಕೆ ತಿರುಗಿ ಮಧ್ಯಭಾಗವು ಹಳದಿಯಾಗಿ ಕ್ರಮೇಣ ಎಲೆಗಳು ಉದುರುತ್ತವೆ.
ನಿರ್ವಹಣೆ :
• ನಾಟಿ ಮಾಡಲು ರೋಗ ರಹಿತ ಬೇರು ಕಾಂಡವನ್ನು ಬಳಸಬೇಕು.
• ಬೀಜಕ್ಕೆ ಉಪಯೋಗಿಸುವ ಬೇರುಕಾಂಡವನ್ನು ರಿಡೋಮಿಲ್ ಎಂ. ಝೆಡ್ ಅಥವಾ ಮ್ಯಾಂಕೋಜೆಬ್ 2 ಗ್ರಾಂ./ಲೀ. ದ್ರಾವಣದಲ್ಲಿ 30 ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಒಣಗಿಸಿ ನಾಟಿ ಮಾಡಬೇಕು.
• ಒಣಗಿದ ಮತ್ತು ಭಾದಿತ ಎಲೆಗಳನ್ನು ತೆಗೆದು 1 ಗ್ರಾಂ. ಕಾರ್ಬನ್‍ಡೈಜಿಮ್ ಅಥವಾ 2.5 ಗ್ರಾಂ. ಮ್ಯಾಂಕೋಜೆಬ್ ಮತ್ತು 0.5 ಮಿ.ಲೀ. ಸಾಬೂನಿನ ದ್ರಾವಣವನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು.

ಜಹೀರ ಅಹಮದ್ ಬಿ.,& ವಾಸುದೇವ ನಾಯ್ಕ, ಕೆ.ವಿ.ಕೆ. ವಿಜ್ಞಾನಿಗಳು,

mobile no : 98453 00326

error: Content is protected !!