ಕೃಷ್ಣ ಸರಣಿ ಖ್ಯಾತಿಯ ಯಶಸ್ವೀ ನಾಯಕ ನಟ ಕೃಷ್ಣ ಅಜಯ್‍ರಾವ್ ನಾಯಕರಾಗಿ ಅಭಿನಯಿಸಿರುವ 26ನೇ ಸಿನಿಮಾ ‘ಕೃಷ್ಣ ಟಾಕೀಸ್ ‘ ಮುಂದಿನ ವಾರ – ಏಪ್ರಿಲ್ 16 ರ ನಾಳೆ ರಾಜ್ಯದಾದ್ಯಂತ ತೆರೆಗೆ ಬರಲಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಶಿವಮೊಗ್ಗೆಯ ಮೂವರು ರಂಗಭೂಮಿ ಕಲಾವಿದರು, ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


ಶಿವಮೊಗ್ಗೆಯ ಭಾರತ್ ಸಿನಿಮಾಸ್ ನಲ್ಲಿ 7 ಪ್ರದರ್ಶನ ಹಾಗೂ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ.
ಹಿರಿಯ ಪತ್ರಕರ್ತ – ರಂಗಕರ್ಮಿ ವೈದ್ಯ, ವಿಶ್ರಾಂತ ಪ್ರಾಚಾರ್ಯೆ-ರಂಗ ಕಲಾವಿದೆ ವಿಜಯಲಕ್ಷ್ಮಿ ಹಾಗೂ ಚಲನಚಿತ್ರ ಸಂಘಟಕ – ಕಲಾವಿದ ಶಿವಮೊಗ್ಗ ರಾಮಣ್ಣ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾನದಲ್ಲಿ ಭಾರೀ ಸಂಚಲನ ಮೂಡಿಸಿವೆ. ಚಿತ್ರ ಬಿಡುಗಡೆಯ ಪೂರ್ವಭಾವೀ ಸಮಾರಂಭ ಬೆಂಗಳೂರಿನ ಡಾ. ರಾಜ್‍ಕುಮಾರ್ ರಸ್ತೆಯ ಪ್ರತಿಷ್ಟಿತ ಶಟ್ಲಾನ್ ಹೊಟೇಲ್‍ನಲ್ಲಿ ಅದ್ದೂರಿಯಾಗಿ ನಡೆಯಿತು. ಚಿತ್ರದ ಕಲಾವಿದರು, ತಂತ್ರಜ್ಞರು ಈ ವರ್ಣರಂಜಿತ ಸಮಾರಂಭದಲ್ಲಿ ಹಾಜರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಬಾಲ್ಕನಿ ಸೀಟ್ ನಂ. 13 ಎಂಬ ಅಡಿ ಬರಹ ಕೂಡಾ ಇದೆ. ಈ ಸಿನಿಮಾ ಲಖನೌನಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಅಜಯ್ ರಾವ್ ಈ ಸಿನಿಮಾದಲ್ಲಿ ಪತ್ರಕರ್ತರಾಗಿ ಕಾಣಿಸಿಕೊಂಡಿರುವುದು ಗಮನಾರ್ಹ.
ಈ ಕೃಷ್ಣ ಟಾಕೀಸ್‍ಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ವಿಜಯಾನಂದ್‍ರವರು, ಈ ಹಿಂದೆ ತಮ್ಮ ಮೂಲ ಹೆಸರಾದ ಆನಂದ್ ಪ್ರಿಯ ಹೆಸರಿನಲ್ಲಿ ಕಾಶಿನಾಥ್ ಮುಖ್ಯಭೂಮಿಕೆಯ ‘ಓಳ್ ಮುನ್ಸಾಮಿ’ ಚಿತ್ರವನ್ನು ನಿರ್ದೇಶಿಸಿದ್ದರು.
ಈ ಸಿನಿಮಾ ನನ್ನ ಕನಸು. 20 ವರ್ಷದ ಸಿನಿಮಾ ರಂಗದ ಅನುಭವ 3 ವರ್ಷದ ಶ್ರಮ ಈ ಸಿನಿಮಾ ಮೇಲೆ ಇದೆ. ನಿರ್ಮಾಪಕರಿಗೆ ಕಥೆ ಹೇಳಿದಂತೆ ಸಿನಿಮಾ ಮೂಡಿ ಬಂದಿದೆ. ಇದೇ ಏಪ್ರಿಲ್ 16 ರಂದು ಬಿಡುಗಡೆಯಾಗಲಿದ್ದು, ಇದು ನನ್ನ ಮಹತ್ವಾಕಾಂಕ್ಷೆಯ ಸಿನಿಮಾ ಎನ್ನುತ್ತಾರೆ ವಿಜಯಾನಂದ್.
ನಿರ್ಮಾಪಕ – ನಟ ಗೋವಿಂದ್‍ರಾಜ್ ಆಲೂರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿನ ಮೂರು ಹಾಡುಗಳಿದ್ದು, ಅವುಗಳಿಗೆ ಪ್ರಮೋದ್ ಹಾಗೂ ಆನಂದ ಪ್ರಿಯರವರ ಸಾಹಿತ್ಯವಿದೆ.
ಅಭಿಷೇಕ ಕಾಸರಗೋಡುರವರ ಛಾಯಾಗ್ರಹಣವಿರುವ ಈ ಚಿತ್ರದ ನಾಯಕಿಯರಾಗಿ ಅಪೂರ್ವ – ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಚಿಕ್ಕಣ್ಣ , ಯಶ್ ಶೆಟ್ಟಿ , ಶಿವಮೊಗ್ಗ ವೈದ್ಯ, ಪ್ರಮೋದ್ ಶೆಟ್ಟಿ, ಶಿವಮೊಗ್ಗ ರಾಮಣ್ಣ, ಶ್ರೀನಿವಾಸ ಪ್ರಭು, ವಿಜಯಲಕ್ಷ್ಮಿಮೊದಲಾದವರ ಅಭಿನಯವಿದೆ.
* ನಿರ್ದೇಶಕರ ಬಗ್ಗೆ
ಆನಂದ ಪ್ರಿಯರವರು, ಈ ಕೃಷ್ಣಾ ಟಾಕೀಸ್ ಮೂಲಕ ವಿಜಯಾನಂದ್ ಆಗಿ ಬದಲಾಗಿದ್ದಾರೆ. ವಿಜಯ ಮತ್ತು ಆನಂದ ಎರಡನ್ನೂ ಹೆಸರಲ್ಲಿಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕಚಗುಳಿಯಿಡುವ ಸಂಭಾಷಣೆ, ಪ್ರಾಸ ಬದ್ಧ ಹಾಡುಗಳ ರಚನೆ ಇವರ ವಿಶೇಷತೆ. ಹಾಗೆಯೇ ನವಿರಾದ ನಿರೂಪಣೆಯ ಮೂಲಕ ದೃಶ್ಯವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲ ಸಾಮರ್ಥ್ಯ ಹೊಂದಿರುವವರು. ಮುಖ್ಯವಾಗಿ ಹೊಸಬರಿಂದ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುವ ಹಾಗೂ ಆ ಕಲಾವಿದರಲ್ಲಿನ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕ್ರಿಯಾಶೀಲ ಮನಸ್ಸುಳ್ಳ ಅಪರೂಪದ ನಿರ್ದೇಶಕ ಈ ವಿಜಯಾನಂದ್ (ಆನಂದಪ್ರಿಯ ).
ಕಳೆದ 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಥೆಗಾರರಾಗಿ, ಚಿತ್ರಕಥೆಗಾರರಾಗಿ, ಚಿತ್ರ ಸಾಹಿತಿಯಾಗಿ ಗುರುತಿಸಿಕೊಂಡಿರುವ ಆನಂದ ಪ್ರಿಯ ಮೂಲತಃ ರಂಗಭೂಮಿಯಿಂದ ಬಂದವರು. ಬೀದಿ ನಾಟಕಗಳ ಮೂಲಕ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಇವರು, ಸುಪ್ತ ರಂಗ ತಂಡದಲ್ಲಿ ಈಗಲೂ ಸಕ್ರಿಯರಾಗಿದ್ದಾರೆ.
ತೆಲುಗಿನ ಖ್ಯಾತ ನಿರ್ದೇಶಕ ಏ. ರಾಘವೇಂದ್ರ ರಾವ್ ರ ರೇಖೆಗಳು, ಶ್ರೀಕೃಷ್ಣ ಕಲ್ಯಾಣ ಲೀಲೆ ಯ ಚಿತ್ರಗಳಿಗೆ ಕೆಲಸ ಮಾಡುವುದರೊಂದಿಗೆ ಚಿತ್ರರಂಗವನ್ನು ಪ್ರವೇಶಿಸಿದ ಇವರು, ಸಾವಿತ್ರಿ, ಶರದೃತು, ತುಳಸಿ, ಧರ್ಮ ವೀರ ಕೆಂಪೇಗೌಡ, ವಾತ್ಸಲ್ಯ, ಫೆÇೀಟೋ ಗ್ರಾಪರ್ ಪರಮೇಶಿ, ಸೇರಿದಂತೆ 10ಕ್ಕೂ ಹೆಚ್ಚು ಮೆಗಾ ಧಾರಾವಾಹಿ ಗಳಿಗೆ ಸಂಭಾಷಣೆ ಬರೆದಿದ್ದಾರೆ. ಸುಮಾರು 45ಕ್ಕೂ ಹೆಚ್ಚು ಚಿತ್ರ ಗಳಿಗೆ ಸಾಹಿತ್ಯ, ಸಂಭಾಷಣೆ,
25ಕ್ಕೂ ಹೆಚ್ಚು ಚಿತ್ರಗಳಿಗೆ ಸಹನಿರ್ದೇಶನ ಮಾಡಿರುವ ಇವರು, ಪ್ರೇಮ್ (ಜೋಗಿ ) ರವರ “ಪ್ರೀತಿ ಏಕೆ ಭೂಮಿ ಮೇಲಿದೆ?, ಪುನೀತ್ ರಾಜ್ ಕುಮಾರ್ ಅಭಿನಯದ”ರಾಜ್ “ಚಿತ್ರ ಗಳಿಗೆ ಚಿತ್ರ ಕಥೆ ಸಂಭಾಷಣೆ ಸಹ ನಿರ್ದೇಶಕರಾಗಿ ಗಮನ ಸೆಳೆದಿದ್ದಾರೆ. ಕಾಶೀನಾಥ್ ರ ಕೊನೆಯ ಚಿತ್ರ “ಓಳ್ ಮುನ್ಸಮಿ “ಚಿತ್ರ ದ ಮೂಲಕ ಸ್ವತಂತ್ರ ನಿರ್ದೇಶಕ ರಾದ ಆನಂದಪ್ರಿಯ ಇದೀಗ ವಿಜಯಾನಂದ್ ಹೆಸರಿನಲ್ಲಿ ಕೃಷ್ಣ ಟಾಕೀಸ್ ನಿರ್ದೇಶಿಸಿದ್ದಾರೆ.

error: Content is protected !!