ಶಿವಮೊಗ್ಗ, ಫೆಬ್ರವರಿ 27, :
ಪ್ರಕೃತಿ, ಸಂಸ್ಕøತಿ ಮತ್ತು ಕೃಷಿಯನ್ನು ಮೇಳೈಸಿಕೊಂಡಿರುವ ಶಿವಮೊಗ್ಗದಲ್ಲಿ ವಿಕಾಸದ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಿರುವ ವಿಮಾನ ನಿಲ್ದಾಣ ಉದ್ಘಾಟಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ, ಶಿಲಾನ್ಯಾಸವನ್ನು ಇಂದು ನೆರವೇರಿಸಿ ಅವರು ಮಾತನಾಡಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಪ್ರಾರಂಭವಾಗುವ ಮೂಲಕ ಇಲ್ಲಿನ ಧೀರ್ಘ ಕಾಲದ ಬೇಡಿಕೆ ಈಡೇರಿದೆ. ವಿಮಾನ ನಿಲ್ದಾಣ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದ್ದು ಇದು ಜಿಲ್ಲೆಯ ಜನರ ಕನಸಿನ ಅಭಿಯಾನವಾಗಿದೆ. ರೈಲ್ವೇ-ಹೇರ್‍ವೇ-ಹೈವೇ ಮತ್ತು ಡಿಜಿಟಲ್ ಸಂಪರ್ಕದಲ್ಲಿ ದಾಪುಗಾಲು ಇರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬಿ.ಎಸ್ ಯಡಿಯೂರಪ್ಪ ಅವರ ಜನ್ಮ ದಿನದಂದೇ ಸಾವಿರಾರು ಕೋಟಿ ರೂಪಾಯಿ ವೆಚ್ವದಲ್ಲಿ ಕೈಗೊಂಡಿರುವ ಹತ್ತಾರು ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನಡೆಸಿರುವುದು ಹೆಮ್ಮೆಯ ವಿಚಾರ. ಅವರು ಬಡವರ ಪರ ಮತ್ತು ಜನಪರ ಕಾರ್ಯಗಳ ಮೂಲಕ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳಾಗುತ್ತಿದ್ದು ವಿಕಾಸದ ಹಾದಿಯನ್ನು ಚುರುಕಾಗಿಸಿದೆ. ಗ್ರಾಮೀಣ ಭಾಗಗಳಲ್ಲಿಯೂ ಉತ್ತಮ ಅಭಿವೃದ್ದಿ ಆಗುತ್ತಿದೆ ಎಂದರು.
ಏರ್ ಇಂಡಿಯಾದ ಸಾರ್ಮಥ್ರ್ಯ ಇಡೀ ವಿಶ್ವವೇ ಮಾತನಾಡಿ, ಮೆಚ್ಚುವಂತೆ ಬೆಳಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. 2014 ರ ಹಿಂದೆ ದೊಡ್ಡ ನಗರಗಳಲ್ಲಿ ಮಾತ್ರ ವಿಮಾನ ನಿಲ್ದಾಣ ಇತ್ತು. ಈಗ ಎಲ್ಲೆಡೆ ಅಭಿವೃದ್ದಿ ಆಗುತ್ತಿದ್ದು, 74 ಹೊಸ ವಿಮಾನ ನಿಲ್ದಾಣ ಸ್ಥಾಪನೆಗೆ ಚಾಲನೆ ನೀಡಲಾಗಿದ್ದು ಸಾಮಾನ್ಯರೂ ವಿಮಾನಯಾನ ಮಾಡುವ ಅವಕಾಶ ಒದಗಿಸಲಾಗುತ್ತಿದೆ. ಬಡತನ ನಿರ್ಮೂಲನೆ ಜೊತೆಗೆ ಎಲ್ಲಾ ರೀತಿಯ ಸುಸ್ಥಿರ ಅಭಿವೃದ್ಧಿಗೆ ಕ್ರಮ ವಹಿಸಿದೆ ಎಂದು ಅವರು ಹೇಳಿದರು.
ಶಿವಮೊಗ್ಗವು ಪ್ರಕೃತಿ-ಸಂಸ್ಕøತಿ ಮತ್ತು ಕೃಷಿಯ ರಹದಾರಿಯಾಗಿದೆ. ರಾಷ್ಟ್ರಕವಿ ಕುವೆಂಪು ಜನಿಸಿದ ಈ ನೆಲ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಇಲ್ಲಿನ ವನ್ಯಜೀವ ವೈವಿಧ್ಯತೆ, ಆಗುಂಬೆಯ ಅದ್ಭುತ ರಮಣೀಯತೆ, ಸಿಂಹಧಾಮ ಸಫಾರಿ, ಪರ್ವತಗಳು, ನದಿ ಬೆಟ್ಟಗಳು, ಸಂಸ್ಕøತಿ ಗ್ರಾಮ ಮತ್ತೂರು, ಸ್ವಾತಂತ್ರ್ಯ ಹೋರಾಟಗಾರರ ಈಸೂರು, ಸಿಂಗಂದೂರು ಚೌಡೇಶ್ವರಿ, ಶ್ರೀಧರಾಶ್ರಮ ಹೀಗೆ ಅನೇಕ ಪುರಾಣ ಪ್ರಸಿದ್ದ ಸ್ಥಳಗಳನ್ನು ಹೊಂದಿದೆ.
ಶಿವಮೊಗ್ಗ ಉತ್ತಮವಾದ ಕೃಷಿ ಕೇಂದ್ರ ಆಗಿದ್ದು ಭತ್ತ, ಅಡಿಕೆ, ಟೀ, ಮಸಾಲ ಪದಾರ್ಥ, ವಿವಿಧ ಧಾನ್ಯಗಳು ಹೀಗೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಒದಗಿಸಲು ಸಂಪರ್ಕದ ಅವಶ್ಯಕತೆ ಇದ್ದು ಸರ್ಕಾರ ಇದನ್ನು ಒದಗಿಸುತ್ತಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಮಾರ್ಗದಿಂದ ಹೊಸ ಸಂಪರ್ಕ ಸಾಧ್ಯವಾಗಿ ಕೃಷಿ ಮಾರುಕಟ್ಟೆಗೆ ಉತ್ತೇಜನ ದೊರೆಯಲಿದೆ. ಹಾಗೆಯೇ ಕೋಟೆಗಂಗೂರು ಕೋಚ್ ಟರ್ಮಿನಲ್ ನಿರ್ಮಾಣದಿಂದ ಸಂಪರ್ಕ ಸಾಮಥ್ರ್ಯ ಹೆಚ್ಚಲಿದೆ ಎಂದರು.
ಶಿವಮೊಗ್ಗ ಉತ್ತಮ ಶಿಕ್ಷಣ ಕೇಂದ್ರವೂ ಆಗಿದ್ದು ಸಂಪರ್ಕ ಮತ್ತು ಮೂಲಭೂತ ಸೌಕರ್ಯದ ಅಭಿವೃದ್ದಿಯಿಂದ ಉದ್ಯೋಗಾವಕಾಶ ಹೆಚ್ಚಲಿದೆ. ಪ್ರತಿ ಮನೆಗೆ ಕುಡಿಯುವ ನೀರು ಸಂಪರ್ಕ ನೀಡಲು ಜಲ ಜೀವನ ಮಿಷನ್ ಅಡಿಯಲ್ಲಿ ನೀರಿನ ಸಂಪರ್ಕ ನೀಡಲಾಗತ್ತಿದೆ ಎಂದರು.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದಲ್ಲಿ ಕರ್ನಾಟಕ ನಂ.1 ರಾಜ್ಯವಾಗುವ ನಿಟ್ಟಿನಲ್ಲಿ ಬೆಳೆಯುತ್ತಿದೆ. ತಾಂತ್ರಿಕತೆ, ನಾವೀನ್ಯತೆ ಕ್ಷೇತ್ರದಲ್ಲಿ ದಾಪುಗಾಲು ಇರಿಸುತ್ತಿದ್ದು ವಾಣಿಜ್ಯ, ವ್ಯಾಪಾರ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಿದೆ. ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ. ಆರೋಗ್ಯ, ವಸತಿ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ವಿಮಾನ ನಿಲ್ದಾಣಗಳ ಸ್ಥಾಪನೆಯಿಂದ ದೇಶದ ಮೂಲೆ ಮೂಲೆಗೆ ಸಂಪರ್ಕ ಸಾಧ್ಯವಾಗುತ್ತಿದೆ ಎಂದ ಅವರು ಶಿವಮೊಗ್ಗ ವಿಮಾನ ನಿಲ್ದಾಣ ಇನ್ನೊಂದೆರಡು ವರ್ಷದಲ್ಲಿ ಅಂತರಾಷ್ಟ್ರೀಯ ನಿಲ್ದಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರದ ಸಂಸದೀಯ ವ್ಯವಹಾರ ಸಚಿವರಾದ ಪ್ರಹ್ಲಾದ ಜೋಷಿ, ಸಂಸದರಾದ ಬಿ.ವೈ.ರಾಘವೇಂದ್ರ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿನಾರಾಯಣಗೌಡ, ನಗರಾಭಿವೃದ್ದಿ ಸಚಿವರಾದ ಬಿ.ಎ.ಬಸವರಾಜ, ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟಿಲ್, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ವಸತಿ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಕೆ.ಎಸ್.ಈಶ್ವರಪ್ಪ, ಕೆ.ಬಿ.ಅಶೋಕನಾಯ್ಕ, ಹರತಾಳು ಹಾಲಪ್ಪ ಆಯನೂರು ಮಂಜುನಾಥ್, ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ ಪಾಲ್ಗೊಂಡಿದ್ದರು.

error: Content is protected !!