ಶಿವಮೊಗ್ಗ : ಡಿಸೆಂಬರ್ 12 : ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು 2023ರ ಜನವರಿ 7, 08 ಮತ್ತು 09ರಂದು ನಗರದ ಕುವೆಂಪು ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು.
ಈ ಸಂಬಂಧ ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರತಿಭಾ ಕಾರಂಜಿಯ ಲಾಂಛನ ಹಾಗೂ ಜಾಲತಾಣ ಲೋಕಾರ್ಪಣೆಗೊಳಿಸಿ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ, ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಇದೊಂದು ಉತ್ತಮ ವೇದಿಕೆ ಇದಾಗಿರಲಿದೆ ಎಂದರು.
ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ನಡೆಸಲಾದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವದಲ್ಲಿ ಸ್ಥಾನ ಪಡೆದ 1375ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ರೀತಿಯ 23 ವೈಯಕ್ತಿಕ ವಿಭಾಗಗಳಲ್ಲಿ ಹಾಗೂ 03 ಸಾಮೂಹಿಕ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಎಂದ ಅವರು ಪ್ರತಿಭಾ ಕಾರಂಜಿಯ ಉದ್ಘಾಟನಾ ಕಾರ್ಯಕ್ರಮವು ಜನವರಿ 07ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಉಳಿದಂತೆ ಪ್ರತಿಭಾಕಾರಂಜಿಯ ಏಕರೀತಿಯ ಸಾಂಸ್ಕøತಿಕ ಸ್ಪರ್ಧೆಗಳು ಡಿ.ವಿ.ಎಸ್.ಕಾಲೇಜಿನ ವಿವಿಧ ಕೊಠಡಿಗಳಲ್ಲಿ ನಡೆಯಲಿವೆ ಎಂದರು.
ಸ್ಪರ್ಧೆಗಳಿಗೆ ತಜ್ಞ ಹಾಗೂ ಪರಿಣಿತಿ ಹೊಂದಿರುವ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಿಂದ 150ಕ್ಕೂ ಹೆಚ್ಚಿನ ತೀರ್ಪುಗಾರರನ್ನು ನಿಯೋಜಿಸಲಾಗಿದೆ ಅದರ ಯಶಸ್ಸಿಗಾಗಿ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ವಿವಿಧ 19ಸಮಿತಿಗಳನ್ನು ರಚಿಸಲಾಗಿದ್ದು, ಅದರ ಮೇಲ್ವಿಚಾರಣೆಗಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನ ರೂ.6,000/, ದ್ವಿತೀಯ ಸ್ಥಾನ ರೂ.4,000/- ಹಾಗೂ ತೃತೀಯ ಸ್ಥಾನ ರೂ.2,000/-ಗಳ ನಗದು ಪುರಸ್ಕಾರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಆಗಮಿಸಿದ ಕ್ರೀಡಾಪಟುಗಳಿಗೆ ಉತ್ತಮ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಸುಮಾರು 13ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಶಿಷ್ಟಾಚಾರದಂತೆ ಈ ಕಾರ್ಯಕ್ರಮದ ಉದ್ಘಾಟನೆಗೆ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ.ಪ್ರಕಾಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಲೋಕೇಶ್ವರಪ್ಪ, ರಾಮಪ್ಪಗೌಡ ಸೇರಿದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
- ಮಾಂಡೋಸ್ ಚಂಡಮಾರುತದಿಂದ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಇದರಿಂದಾಗಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾನಿಗೊಳಗಾಗಿರುವ ಬಗ್ಗೆ ಮಾಹಿತಿ ಇದ್ದು, ಆಯಾ ತಾಲೂಕಿನ ತಹಶೀಲ್ದಾರರಿಗೆ ಖುದ್ದಾಗಿ ಬಾದಿತ ಸ್ಥಳಕ್ಕೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ವಾಸ್ತವ ವರದಿ ನೀಡುವಂತೆ ಸೂಚಿಸಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ವತಿಯಿಂದ ಜಂಟಿ ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ಹೇಳಿದರು. –ಡಿ.ಸಿ.
- ಈಗಾಗಲೇ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳಿಂದ ಮಾಹಿತಿ ಪಡೆದು ಸರ್ಕಾರದ ಸೂಚನೆಯಂತೆ ಡಿಸೆಂಬರ್ 20ರೊಳಗಾಗಿ ಶರಾವತಿ ಸಂತ್ರಸ್ಥರ ಸಮಸ್ಯೆಗಳ ಕುರಿತ ಸಮಗ್ರ ವರದಿ ನೀಡಲಾಗುವುದು. ಈ ಹಿಂದಿನ ಸಮೀಕ್ಷೆಯ ಮಾಹಿತಿ, ಸರ್ವೇ ನಂ. ಹಾಗೂ ಗ್ರಾಮಾವಾರು ಮಾಹಿತಿ ಸಂಗ್ರಹಿಸಲಾಗಿದೆ. –ಡಿ.ಸಿ.
- ಶಿವಮೊಗ್ಗ ನಗರದಲ್ಲಿ ಆಟೋ ದರ ನಿಗಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ಕೊನೆಯವರೆಗೆ ಸಮಯ ನಿಗಧಿಪಡಿಸಲಾಗಿದೆ. ಈ ಅವಧಿಯೊಳಗಾಗಿ ನಗರದ ಎಲ್ಲಾ ಆಟೋಗಳ ಚಾಲಕರು ತಮ್ಮ ವಾಹನಕ್ಕೆ ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳಬೇಕು. ಹಾಗೂ ಸಮವಸ್ತ್ರ ಧರಿಸುವುದು ಕಡ್ಡಾಯವಾಗಲಿದೆ. ತಪ್ಪಿದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ. ರೈಲ್ವೇ ನಿಲ್ದಾಣದಿಂದ ನಗರದ ಬೇರೆ-ಬೇರೆ ಪ್ರದೇಶಗಳಿಗೆ ಹೊರಡುವ ಪ್ರವಾಸಿಗರ ಅನುಕೂಲಕ್ಕಾಗಿ ಸಾರಿಗೆ ನಿಗಮದ ಬಸ್ಸುಗಳನ್ನು ನಿಯೋಜಿಸಲಾಗುವುದು. –ಡಿ.ಸಿ.
——————————————
ಜನವರಿ 01ರಿಂದ ಬೆಂಬಲಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಕಾರ್ಯಾರಂಭ : ಡಾ|| ಆರ್.ಸೆಲ್ವಮಣಿ
ಶಿವಮೊಗ್ಗ : ಡಿಸೆಂಬರ್ 12 : (ಕರ್ನಾಟಕ ವಾರ್ತೆ) : ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ರಾಜ್ಯದ ರೈತರಿಂದ ಕನಿಷ್ಟ ಬೆಂಬಲಬೆಲೆ ಯೋಜನೆಯಡಿಯಲ್ಲಿ ಭತ್ತವನ್ನು ಖರೀದಿಸಲು ಉದ್ದೇಶಿಸಿದ್ದು, ಜನವರಿ 01ರಿಂದ ಮಾರ್ಚ್ 31ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಗಳ ಭತ್ತ ಖರೀದಿ ಕೇಂದ್ರಗಳಲ್ಲಿ ಭತ್ತ ಖರೀದಿಸಲಿದೆ ಎಂದು ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತಾಲೂಕಿಗೊಂದರಂತೆ ಪ್ರತಿ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಗೊಳ್ಳಲಿದೆ. ಅಗತ್ಯವಿರುವಲ್ಲಿ ರೈತರ ನೋಂದಣಿಯನ್ನಾಧರಿಸಿ, ಶಿರಾಳಕೊಪ್ಪ ಮತ್ತು ಆನವಟ್ಟಿಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸೂಚಿಸಲಾಗುವುದು ಎಂದರು.
ಕಳೆದ ಸಾಲಿನಲ್ಲಿ ಪ್ರತಿ ಕ್ವಿಂಟಾಲ್ ಸಾಮಾನ್ಯ ಭತ್ತಕ್ಕೆ ನಿಗಧಿಪಡಿಸಲಾಗಿದ್ದ ದರ ರೂ.1940/-ನ್ನು ರೂ.2,040/-ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಕ್ವಿಂಟಾಲ್ ಗ್ರೇಡ್-ಎ ಭತ್ತಕ್ಕೆ ನಿಗಧಿಪಡಿಸಲಾಗಿದ್ದ ದರ ರೂ.1,960/-ನ್ನು ರೂ.2,060ಕ್ಕೆ ಹೆಚ್ಚಿಸಿ ಆದೇಶಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಭತ್ತ ಖರೀದಿ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಏಜೆನ್ಸಿಗಳನ್ನಾಗಿ ನೇಮಿಸಲಾಗಿದೆ. ಪ್ರತಿ ರೈತರಿಂದ ಪ್ರತಿ ಎಕರೆಗೆ 25ಕ್ವಿಂಟಾಲ್‍ನಂತೆ ಗರಿಷ್ಟ 40ಕ್ವಿಂಟಾಲ್ ಭತ್ತವನ್ನು ಖರೀದಿಸಲಾಗುವುದು. ರೈತರು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಪ್ರೂಟ್ಸ್ ಐಡಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ಭತ್ತ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅರ್ಹ ರೈತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಏಜೆನ್ಸಿಯವರು ಭತ್ತ ಖರೀದಿಸಿದ ನಂತರ ರೈತರ ಬ್ಯಾಂಕ್ ಖಾತೆಗಳಿಗೆ 15ದಿನಗಳೊಳಗಾಗಿ ಹಣವನ್ನು ನೇರ ನಗದು ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಗ್ರಹಣಾ ಏಜೆನ್ಸಿಯ ಭತ್ತ ಖರೀದಿ ಕೇಂದ್ರಕ್ಕೆ ಗ್ರೇಡರ್‍ಗಳ ನೇಮಕ, ತಪಾಸಣೆ, ಮತ್ತಿತರ ವಿಷಯಗಳ ಕುರಿತು ಕೃಷಿ ಇಲಾಖಾ ಅಧಿಕಾರಿಗಳು ಮೇಲ್ವಿಚಾರಣೆ ನೋಡಿಕೊಳ್ಳುವಂತೆ ಸೂಚಿಸಿರುವ ಅವರು, ಏಜೆನ್ಸಿಯವರು ಜಿಲ್ಲೆಯ ರೈತರಿಂದ ಭತ್ತವನ್ನು ಖರೀದಿಸಿ, ಗೋದಾಮುಗಳಲ್ಲಿ ಸಂಗ್ರಹಿಸಿ, ಭತ್ತದ ಹಲ್ಲಿಂಗ್‍ಗಾಗಿ ನೋಂದಾಯಿತ ಅಕ್ಕಿಗಿರಣಿಗಳಿಗೆ ಸಾಗಾಣಿಕೆ ಮಾಡುವಂತೆ ಸೂಚಿಸಿದರು.
ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುವ ಅಕ್ಕಿಯನ್ನು ಕಡ್ಡಾಯವಾಗಿ ಸಾರವರ್ಧಿತಗೊಳಿಸಬೇಕಾಗಿರುವುದರಿಂದ ಅಕ್ಕಿಗಿರಣಿಗಳಲ್ಲಿ ಬ್ಲೆಂಡರ್ ಯಂತ್ರವನ್ನು ಅಳವಡಿಸಿಕೊಂಡಿರುವ ಅಕ್ಕಿಗಿರಣಿಗಳನ್ನು ಮಾತ್ರ ಭತ್ತ ಹಲ್ಲಿಂಗ್ ಮಾಡಲು ನೋಂದಾಯಿಸಿಕೊಂಡು ನಿಯಮಾನುಸಾರ ಮಿಶ್ರಣಗೊಳಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಅವೀನ್ ಆರ್. ಸೇರಿದಂತೆ ಆಹಾರ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ : ಡಿಸೆಂಬರ್ 12 : (ಕರ್ನಾಟಕ ವಾರ್ತೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿವಮೊಗ್ಗ ಹಾಗೂ ಪ್ರಶಾಂತಿ ಸೇವಾ ಟ್ರಸ್ಟ್, ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಭದ್ರಾವತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 13ರಂದು ಬೆಳಿಗ್ಗೆ 10ರಿಂದ ಭದ್ರಾವತಿಯ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮವನ್ನು ರಾಜ್ಯ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಡಾ|| ಕೆ.ಸಿ.ನಾರಾಯಣಗೌಡ ಅವರು ಉದ್ಘಾಟಿಸುವರು. ಗೃಹ ಸಚಿವ ಆರಗಜ್ಞಾನೇಂದ್ರ, ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಡಿ.ನಾಗೇಶ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿರುವರು. ಶಾಸಕ ಬಿ.ಕೆ.ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ನಿಗಮ-ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಮುಂತಾದವರು ಅತಿಥಿಗಳಾಗಿ ಆಗಮಿಸಲಿರುವರು.