ಶಿವಮೊಗ್ಗ, ನ.೧೧: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಛಲವಾದಿ ಮಹಾ ಸಭಾ ಶಿವಮೊಗ್ಗ , ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉದ್ಘಾಟನೆ ನಡೆಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ , ಮಾತನಾಡಿ ವೀರ ವನಿತೆ ಓಬವ್ವನ ಸಾಧನೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಓಬವ್ವ ಜಯಂತಿಯನ್ನು ಆಚರಿಸಲು ಸರ್ಕಾರ ಎರಡು ವರ್ಷದ ಹಿಂದೆ ನಿರ್ಧರಿಸಿತ್ತು. ಆದರೆ ಕರೋನಾ ಕಾರಣದಿಂದ ಸ್ಥಗಿತಗೊಂಡಿತ್ತು. ಈ ವರ್ಷ ಸರ್ಕಾರದ ಆದೇಶದಂತೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ವಿಶೇಷ ಉನ್ಯಾಸವನ್ನು ನೀಡಿದ ಹನುಮಂತಪ್ಪ ಸಿ. ಜಿ. ಕನ್ನಡ ಸಂಶೋಧಕರು , ದಾವಣಗೆರೆ ವಿಶ್ವವಿದ್ಯಾಲಯ, ಇವರು ಮಾತನಾಡಿ, ವೀರ ವನಿತೆ ಓಬವ್ವ ಕೇವಲ ಛಲಾವಾದಿ ಸಮುದಾಯಕ್ಕೆ ಸೀಮಿತವಲ್ಲ ಇಡೀ ರಾಜ್ಯಕ್ಕೆ ಸೇರಿದವರು. ಚಿತ್ರ ದುರ್ಗ ಕೋಟೆಯ ಕಾವಲುಗಾರ ಮುದ್ದಲೆ ಹನುಮಂತಪ್ಪನ ಹೆಂಡತಿಯಾದ ಓಬವ್ವ ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ಕೋಟೆಯ ಮೇಲೆ ಆಕ್ರಮಣ ಮಾಡುತ್ತಿದ್ದ ಶತ್ರು ಸೈನ್ಯದ ಮೇಲೆ ಕೇವಲ ಒನಕೆಯನ್ನು ಹಿಡಿದು ಸಾವಿರಾರು ಶತ್ರು ಸೈನಿಕರ ಕೊಂದು ಕೋಟೆಯ ರಕ್ಷಣೆ ಮಾಡಿದಳು. ಸಿನಿಮಾದ ದೃಶ್ಯದಲ್ಲಿ ತೋರಿಸಿರುವಂತೆ ಓಬವ್ವಳ ಇತಿಹಾಸ ಅಷ್ಟಕ್ಕೇ ಸೀಮಿತವಲ್ಲ. ಚರಿತ್ರೆಯ ಪುಟಗಳನ್ನು ತೆಗೆಯುತ್ತಾ ಹೋದಂತೆ ಓಬವ್ವ ಯಾರು, ಅವರ ಜಯಂತಿಯನ್ನು ಇಂದು ಏಕೆ ಆಚರಿಸಬೇಕು ಎನ್ನುವುದು ಅರಿವಾಗುತ್ತದೆ.
ಒಬ್ಬ ಸಾಮಾನ್ಯ ಹೆಣ್ಣುಮಗಳು ಯಾವುದೇ ಯುದ್ದ ಕಲೆ ತಿಳಿಯದಿದ್ದರೂ, ವೀರಾವೇಶದಿಂದ ಹೋರಾಡಿ ಶತ್ರುಗಳಿಂದ ತನ್ನ ನಾಡನ್ನು ಕಾಪಾಡಿದ ವೀರ ವನಿತೆಯ ಚರಿತ್ರೆ ಇಂದು ಎಲ್ಲರು ಸ್ಮರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಸೂಡಾ ಆಯುಕ್ತರಾದ ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಸಿದ್ದಪ್ಪ ಹಾಗೂ ಸಮುದಾಯದ ಮುಖಂಡರು ಹಾಜರಿದ್ದರು.

error: Content is protected !!