ಶಿವಮೊಗ್ಗ, ಮಾರ್ಚ್-3 : ಮಕ್ಕಳ ಶ್ರವಣ ಸಾಮಥ್ರ್ಯದ ಮೇಲೆ ನಿರಂತರ ನಿಗಾ ಇರಿಸಿ, ಯಾವುದೇ ದೋಷಗಳು ಕಂಡು ಬಂದರೆ ತಕ್ಷಣ ವೈದ್ಯರ ನೆರವು ಪಡೆಯುವಂತೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್ ನಾಗಲೀಕರ್ ಹೇಳಿದರು.
ಇಂದು ನಗರದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಶ್ರವಣ ದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೋಷಕರು ಮಕ್ಕಳಿಗೆ ಕಿವಿಯೊಳಗೆ ಯಾವುದೇ ವಸ್ತುವನ್ನು ಹಾಕಿಕೊಳ್ಳ ಬಾರದೆಂದು ತಿಳಿಸಿ ಹೇಳಬೇಕು, ನಿಮ್ಮ ಮಗುವಿಗೆ ಕಿವಿ ನೋವು ಅಥವಾ ಕಿವಿ ಸೋರುವುದು ಅಥವಾ ಕಿವಿ ಮುಚ್ಚಿದೆ ಎಂದು ಕಂಡು ಬಂದರೇ ತಕ್ಷಣವೇ ನಿಮ್ಮ ಮಗುವನ್ನು ವೈದ್ಯರ ಬಳಿ ಪರೀಕ್ಷಿಸಿ, ನಿಮ್ಮ ಮಕ್ಕಳನ್ನು ಕೊಳಕು ನೀರಿನಲ್ಲಿ ಈಜಲು ಬಿಡಬೇಡಿ, ಮಗುವಿನ ಕಿವಿಯ ಮೇಲೆ ಹೊಡೆಯಬೇಡಿ, ಜೋರಾದ ಶಬ್ದದಿಂದ ಮಗುವನ್ನು ದೂರವಿಡಿ, ಸುರಕ್ಷಿತವಾದ ಆಡಿಯೋ ಡಿವೈಸ್ ಮೂಲಕ ಕೇಳುವಂತೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಆರೋಗ್ಯವಂತ ವ್ಯಕ್ತಿಯ ಕಾರ್ಯ ಚಟುವಟಿಕೆಗಳಲ್ಲಿ ಶ್ರವಣ ಬಹಳಷ್ಟು ಪ್ರಮುಖವಾಗಿದ್ದು, ಶ್ರವಣದೋಷ ನಿವಾರಣೆ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳನ್ನು ಜಿಲ್ಲೆಯಾದ್ಯಂತ ಕೈಗೊಳ್ಳಲಾಗುತ್ತಿದೆ ಎಂದರು.
ಇಎನ್‍ಟಿ ತಜ್ಞ ಡಾ. ಗಂಗಾಧರ್ ಮಾತನಾಡಿ, ಉತ್ತಮ ಜೀವನ ನಿರ್ವಹಣೆಗೆ ಕಣ್ಣಿನ ಆರೋಗ್ಯದಷ್ಟೇ ಕಿವಿಯ ಆರೋಗ್ಯವೂ ಮುಖ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಹೆಚ್ಚು ಜಾಗೃತಿ ವಹಿಸಿ ಶ್ರವಣ ದೋಷದ ಸಮಸ್ಯೆಗೆ ಆಸ್ಪದ ನೀಡದಂತೆ ಸಮಾಜ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ, ಶ್ರಮಣ ದೋಷದ ಲಕ್ಷಣಗಳು ಶೀಘ್ರ ಪತ್ತೆಯಾದರೆ ಚಿಕಿತ್ಸೆ ಸುಲಭ ಸಾಧ್ಯ. ಒಂದು ವೇಳೆ ಸಂಪೂರ್ಣ ಸರಿಪಡಿಸಲಾಗದಿದ್ದರೂ ದುಷ್ಪರಿಣಾಮ ಕಡಿಮೆಗೊಳಿಸಲು ಅವಕಾಶವಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ತಮ್ಮ ಕಿವಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ ಸಮಸ್ಯೆ ಎದುರಾಗುವ ಅನುಮಾನವಿದ್ದಲ್ಲಿ ಪರೀಕ್ಷಿಸಿಕೊಳ್ಳಬೇಕು. ಹುಟ್ಟುವ ಮಗುವಿನಿಂದ ಹಿಡಿದು ವೃದ್ಧರವರೆಗೂ ಕಿವುಡುತನ ಯಾವುದೇ ವಯಸ್ಸಿನ ಅಂತರವಿಲ್ಲದೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ
ಜಾಥಾದಲ್ಲಿ ಡಾ.ಶ್ರೀಧರ್, ಪ್ರತಿಮಾ ಡಾಕಪ್ಪ ಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇಎನ್‍ಟಿ ಸಿಬ್ಬಂದಿ ಹಾಗೂ ಸಿಮ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಾಥಾ ಮೆಗ್ಗಾನ್ ಆಸ್ಪತ್ರೆಯ ಆವರಣದಿಂದ ಗೋಪಿ ಸರ್ಕಲ್ ಮಾರ್ಗ ಮೂಲಕ ಐ.ಎಂ.ಎ ಆವರಣದಲ್ಲಿ ಸಂಪನ್ನಗೊಂಡಿತ್ತು.

error: Content is protected !!