ಶಿವಮೊಗ್ಗ, ಮಾರ್ಚ್ 21, :
“ಹೌದು ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು” ಎಂಬ ಘೋಷವಾಕ್ಯದೊಂದಿಗೆ ಮಾರ್ಚ್ 24 ರಂದು ಜಿಲ್ಲೆಯಲ್ಲಿ ವಿಶ್ವ ಕ್ಷಯರೋಗ ನಿವಾರಣೆ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
1882 ರ ಮಾರ್ಚ್ 24 ರಂದು ‘ರಾಬರ್ಟ್ ಕಾಕ್’ ಎಂಬ ಪ್ರಸಿದ್ಧ ವಿಜ್ಞಾನಿಯು ಕ್ಷಯರೋಗವು ಮೈಕೋ ಬ್ಯಾಕ್ಟಿರಿಯಂ ಟ್ಯೂಬಕ್ರ್ಯುಲ್ಯೆ ಎಂಬ ಬ್ಯಾಕ್ಟಿರಿಯದಿಂದ ಬರುತ್ತದೆ ಎಂಬ ಅಂಶವನ್ನು ಕಂಡು ಹಿಡಿದರು. ಅವರ ನೆನಪಿಗಾಗಿ 1982 ರಿಂದ ವಿಶ್ವ ಕ್ಲಯರೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಭಾರತದಲ್ಲಿ ಪ್ರತಿ ದಿನ ಸುಮಾರು 6000 ಜನರಿಗೆ ಕ್ಷಯರೋಗ ಕಂಡುಬರುತ್ತಿದ್ದು ಸುಮಾರು 600 ಜನ (5 ನಿಮಿಷಕ್ಕೆ 2 ರೋಗಿಗಳು) ಸಾವನ್ನಪ್ಪುತ್ತಿದ್ದಾರೆ. ಸತತ 2 ವಾರಗಳ ಕೆಮ್ಮು ಮತ್ತು ಕಫ ಸಂಜೆ ಜ್ವರ, ಎದೆನೋವು, ರಾತ್ರಿವೇಳೆ ಬೆವರುವುದು, ತೂಕ ಕಡಿಮೆಯಾಗುವುದು ಹಾಗೂ ಕೆಲವೊಮ್ಮೆ ಕಫದಲ್ಲಿ ರಕ್ತ ಬೀಳುವುದು ಕ್ಷಯರೋಗದ ಮುಖ್ಯ ಲಕ್ಷಣಗಳಾಗಿರುತ್ತವೆ. ಕ್ಷಯರೋಗವು ಕೆಮ್ಮುವಾಗ ಮತ್ತು ಸೀನುವಾಗ ತುಂತುರ ಹನಿಗಳಿಂದ ಗಾಳಿಯ ಮೂಲಕ ಒಬ್ಬರಿಂದ ಮೊತ್ತಬ್ಬರಿಗೆ ಹರಡುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 2022 ರಲ್ಲಿ 37271 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ 1835 ಕ್ಷಯರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿರುತ್ತದೆ. ಹಾಗೆಯೇ 51 ಎಂ.ಡಿ.ಆರ್ ರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಪ್ರಾರಂಭಿಸಲಾಗಿರುತ್ತದೆ.
ಎಂ.ಡಿ.ಆರ್ ರೋಗಿಗಳ ಶೀಘ್ರ ಪತ್ತೆಗಾಗಿ ಸಿಬಿಎನ್‍ಎಎಟಿ ಪ್ರಯೋಗಾಲಯವನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆ ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಭದ್ರಾವತಿ ಇಲ್ಲಿ ಟ್ರ್ಯೂನ್ಯಾಟ್ ಪ್ರಾರಂಭಿಸಲಾಗಿದ್ದು, ಇದರಿಂದ ಟಿ.ಬಿ ಮತ್ತು ಎಂ.ಡಿ.ಆರ್ ರೋಗಿಗಳ ಶೀಘ್ರ ಪತ್ತೆ ಮತ್ತು ಚಿಕಿತ್ಸೆಗೆ ಅನುಕೂಲವಾಗಿರುತ್ತದೆ.
ಟಿ.ಬಿ-ನೋಟಫಿಕೇಷನ್ ಅಡಿಯಲ್ಲಿ ಈಗಾಗಲೇ ಖಾಸಗಿ ಸಂಸ್ಥೆಗಳಿಂದ ಪ್ರತಿ ಮಾಹೆ ವರದಿಗಳನ್ನು ತರಸಿಕೊಳ್ಳುತ್ತಿದ್ದು, 2022 ರಲ್ಲಿ ಒಟ್ಟು 476 ರೋಗಿಗಳ ವಿವರವು ಖಾಸಗಿ ಸಂಸ್ಥೆಯಿಂದ ಬಂದಿರುತ್ತದೆ.
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಮತ್ತು ಸಮುದಾಯಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಹೈ ರಿಸ್ಕ್ ಏರಿಯಾಗಳಲ್ಲಿ, ಗಣಿಗಾರಿಕೆ ಪ್ರದೇಶಗಳಲ್ಲಿ, ಕಾರ್ಖಾನೆಗಳಲ್ಲಿ, ಹೆಚ್.ಐ.ವಿ ಬಾಧಿತರಲ್ಲಿ, ಮಧುಮೇಹಿಗಳಿರುವ, ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಇರುವ ಪ್ರದೇಶಗಳಲ್ಲಿ, ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.
ಕ್ಷಯರೋಗ ನಿರ್ಮೂಲನೆಗೆ ಜಿಲ್ಲೆಯು ಆಯ್ಕೆ ಆಗಿರುವುದರಿಂದ ಟಿ.ಬಿ ಪ್ರಕರಣಗಳಿರುವ ಮನೆಗಳಲ್ಲಿ ಸಂಪರ್ಕದಲ್ಲಿರುವವರಿಗೆ ಐ.ಜಿ.ಆರ್.ಎ ರಕ್ತ ಪರೀಕ್ಷೆ ಮುಖಾಂತರ ಟಿ.ಬಿ ಸೋಂಕನ್ನು ಕಂಡು ಹಿಡಿಯುವ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 1051 ಸಂಪರ್ಕಿತರಿಗೆ ಪರೀಕ್ಷಿಸಿ ಇದರಲ್ಲಿ ಪಾಸಿಟಿವ್ ಬಂದ 319 ಸಂಪರ್ಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.
2020 ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು 2025 ರೊಳಗೆ ಕ್ಷಯರೋಗ ಮುಕ್ತ ಭಾರತವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿರುತ್ತಾರೆ. ಹಾಗೆಯೇ ಸಾರ್ವಜನಿಕರು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಚಿಕಿತ್ಸೆಯಲ್ಲಿರುವ ಕ್ಷಯ ರೋಗಿಗಳನ್ನು ಪೌಷ್ಠಿಕ ಆಹಾರ ನೀಡುವ ಮುಖಾಂತರ ದತ್ತು ಪಡೆದುಕೊಳ್ಳಲು ಸೂಚಿಸಿರುತ್ತಾರೆ.
ಜಿಲ್ಲೆಯಲ್ಲಿ 2015 ರಲ್ಲಿ 1 ಲಕ್ಷ ಜನಸಂಖ್ಯೆಗೆ 160 ಕ್ಷಯದೊಗಿಗಳು ಪತ್ತೆಯಾಗುತ್ತಿದ್ದು ಹಾಲಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಕ್ಷಯರೋಗ ಪ್ರಕರಣಗಳು ಗಣನೀಯವಾಗಿ ಇಳಕೆಯಾಗಿದ್ದು, ಲಕ್ಷಕ್ಕೆ 115 ರೋಗಿಗಳು ಪತ್ತೆಯಾಗುತ್ತಿದ್ದಾರೆ. ಹಾಲಿ ಜಿಲ್ಲೆಯಲ್ಲಿ 741 ರೋಗಿಗಳು ಚಿಕಿತ್ಸೆಯಲ್ಲಿ ಇದ್ದು ಇವರಲ್ಲಿ ಸಾರ್ವಜನಿಕರಿಂದ ಪೌಷ್ಠಿಕ ಆಹಾರ ಪಡೆಯಲು 522 ರೋಗಿಗಳು ಅನುಮತಿ ನೀಡಿದ್ದು, ಇವರಲ್ಲಿ ಈಗಾಗಲೇ 414 ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ ಮಾಡಿ ನಿಕ್ಷಯ್ ಮಿತ್ರ 02 ನಲ್ಲಿ ದಾಖಲಿಸಲಾಗಿರುತ್ತದೆ. ಇನ್ನು ಉಳಿದ ರೋಗಿಗಳಿಗೂ ಸಹಿತಾ ಸಾರ್ವಜನಿಕರು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಕ್ಷಯ ರೋಗಿಗಳನ್ನು ದತ್ತುಪಡೆದು 2025 ರೊಳಗೆ ಕ್ಷಯರೋಗ ನಿರ್ಮೂಲನೆ ಮಾಡಲು ಸಹಕಾರ ನೀಡಲು ಕೋರಲಾಗಿದೆ. ಹಾಗೂ ಎನ್.ಪಿ.ವೈ ಯೋಜನೆಯಡಿಯಲ್ಲಿ ರೋಗಿಗಳಿಗೆ ಡಿ.ಬಿ.ಟಿ ಮುಖಾಂತರ ಪ್ರತಿ ಮಾಹೆ ರೂ. 500 ಅನ್ನು ಪೌಷ್ಠಿಕ ಆಹಾರಕ್ಕಾಗಿ ನೀಡಲಾಗುತ್ತದೆ.
ಅರಿವು ಜಾಥಾ: ಮಾರ್ಚ್ 24 ರಂದು ಸಾರ್ವಜನಿಕರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೆಳಗ್ಗೆ 09 ಗಂಟೆಗೆ ಜಾಥಾ ಏರ್ಪಡಿಸಿದ್ದು, ಈ ಜಾಥವು ಮೆಡಿಕಲ್ ಕಾಲೇಜು ಆವರಣದಿಂದ ಆರಂಭಗೊಂಡು ಸವರ್ಲೈನ್ ರಸ್ತೆ ಮುಖಾಂತರ, ಗೋಪಿ ಸರ್ಕಲ್, ಮೂಲಕ ಬಂದು ಐ.ಎಂ.ಎ ಸಭಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ. ಈ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಹಾಗೂ ಸಂಘ ಸಂಸ್ಥೆಗಳು ಭಾಗವಹಿಸಲಿದ್ದಾರೆ.