ರೈತರ ಮಕ್ಕಳ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ “ರೈತ ವಿದ್ಯಾನಿಧಿ” ಯೋಜನೆ ಅತ್ಯಂತ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವ ಮೂಲಕ ಕಡಿಮೆ ಅವಧಿಯಲ್ಲಿ ಅತ್ಯಂತ ಜನಪರ ಯೋಜನೆಯಾಗಿ ಎಲ್ಲರ ಮನೆಮಾತಾಗಿದೆ.
ಈ ಯಶಸ್ಸಿನ ಅಂಕಿ ಅಂಶಗಳಿಂದ ಮಾನ್ಯ ಮುಖ್ಯಮಂತ್ರಿಗಳು ಪ್ರಭಾವಿತರಾಗಿ ಕಳೆದ ತಿಂಗಳು ಮಂಡಿಸಿದ 2023/24ನೇ ಸಾಲಿನ ಆಯವ್ಯಯದಲ್ಲಿ ವಿದ್ಯಾನಿಧಿ ಯೋಜನೆಯನ್ನು ಆಟೊ ಮತ್ತು ಕ್ಯಾಬ್ ವಾಹನ ಚಾಲಕರ ಮಕ್ಕಳಿಗೆ ವಿಸ್ತರಿಸಿರುವುದು ಕೂಡ ಸ್ವಾಗತಾರ್ಹ ನಡೆಯಾಗಿದೆ.
ಆದರೆ ದಿನ ಬಳಕೆಯ ವಸ್ತುಗಳಿಂದ ಹಿಡಿದು ಕಾರ್ಖಾನೆ ಸೇರಿದಂತೆ ಎಲ್ಲಾ ವಲಯಗಳ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಹಗಲು ರಾತ್ರಿ ಎನ್ನದೇ ತಮ್ಮ ಜೀವದ ಹಂಗನ್ನು ತೊರೆದು ಸಾಗಿಸುವ ಲಾರಿ ಚಾಲಕರ ಮತ್ತು ಲಾರಿ ಸಹಾಯಕರ ಮಕ್ಕಳಿಗೆ ಯಾವುದೇ ಸರ್ಕಾರದ ಯೋಜನೆಗಳು ಇಲ್ಲದಿರುವುದು ಈಗಾಗಲೇ ತಮಗೆ ಗೊತ್ತಿರುವ ವಿಚಾರವಾಗಿದೆ.
ಒಬ್ಬ ಲಾರಿ ಚಾಲಕ ಕೇವಲ ತನ್ನ ಹಾಗೂ ತನ್ನ ಅವಲ೦ಬಿತರ ತುತ್ತಿನ ಚೀಲ ತುಂಬಿಸಿಕೊಳ್ಳಲು ಮಾತ್ರ ಕೆಲಸ ಮಾಡದೆ ಜಿ.ಎಸ್.ಟಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಂದಾಯವಾಗುವ ಲಕ್ಷಾಂತರ ಕೋಟಿ ತೆರಿಗೆ ಹಣಕ್ಕೆ ವಸ್ತುಗಳನ್ನು ಸಾಗಿಸುವ ಮೂಲಕ ಮೂಲ ಕೊಂಡಿಯಾಗಿರುವುದು ಗಮನಿಸಬೇಕಾದ ಪ್ರಮುಖ ಅಂಶವಾಗಿದೆ.
ಈ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಶ್ರಮಿಕ ವರ್ಗದ ಲಾರಿ ಚಾಲಕರ ಮತ್ತು ಲಾರಿ ಸಹಾಯಕರ ಮಕ್ಕಳಿಗೆ ಐತಿಹಾಸಿಕ “ವಿದ್ಯಾನಿಧಿ” ಯೋಜನೆ ವಿಸ್ತರಣೆ ಮಾಡುವಂತೆ ಈ ಮೂಲಕ ಬಡತನದ ಬೇಗುದಿಯಿಂದ ಸಾವಿರಾರು ಲಾರಿ ಚಾಲಕರ ಮಕ್ಕಳು ವಿದ್ಯಾಭ್ಯಾಸ ತೊರೆಯುತ್ತಿರುವುದನ್ನು ತಪ್ಪಿಸಬೇಕೆಂದು ಅವರ ಉನ್ನತಿಗೆ ಸಹಕರಿಸಬೇಕೆಂದು ಶಿವಮೊಗ್ಗ ಬಿಜೆಪಿ ಮುಖಂಡರು ಹಾಗೂ ಶಿವಮೊಗ್ಗ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಮಾನ್ಯ ಮುಖ್ಯಮಂತ್ರಿಗಳನ್ನು ಈ ಮೂಲಕ ಒತ್ತಾಯಿಸಿದ್ದಾರೆ.