ಶಿವಮೊಗ್ಗ, ಜುಲೈ. 12 ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ಗಳಲ್ಲಿ ಸ್ವಚ್ಛತೆ ಮತ್ತು ಕುಡಿಯುವ ನೀರಿನಂತಹ ಮೂಲಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಆಯುಕ್ತೆ ಚಾರುಲತಾ ಸೋಮಲ್ ಅವರು ಹೇಳಿದರು.
ಅವರು ಮಂಗಳವಾರ ವಿದ್ಯಾನಗರ ವಾರ್ಡ್ ಹಾಗೂ ಹೊಸಮನೆ ವಾರ್ಡ್ಗೆ ಅಧಿಕಾರಿಗಳು ಹಾಗೂ ಸ್ಥಳೀಯ ಕೌನ್ಸಿಲರ್ ಜತೆ ಭೇಟಿ ನೀಡಿ ಸಮಸ್ಯೆಗಳ ಪರಿಶೀಲನೆ ನಡೆಸಿದರು.
ಹೊಸಮನೆ ವಾರ್ಡ್ನಲ್ಲಿ ಯಾವುದೇ ಉದ್ಯಾನವನ ಇರುವುದಿಲ್ಲ. ಯುಜಿಡಿ ಸಂಪರ್ಕ ಇಲ್ಲದ ಕಾರಣ ತೊಂದರೆಯಾಗುತ್ತಿದ್ದು, ಸೊಳ್ಳೆ ಕಾಟ ವಿಪರೀತವಾಗಿದೆ. ಕೆಲವರು ಮಹಾನಗರ ಪಾಲಿಕೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದರು. ಇಲ್ಲಿರುವ ಚಾನೆಲ್ಗೆ ಸ್ಥಳೀಯರು ಕಸವನ್ನು ತಂದು ಹಾಕುತ್ತಿರುವ ಕಾರಣ ತೊಂದರೆ ಉಂಟಾಗುತ್ತಿದ್ದು, ಈ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದರೂ ಮುಂದುವರೆಸಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಕಸ ಹಾಕುವುದರ ಬಗ್ಗೆ ನೊಟೀಸ್ ಜಾರಿಗೊಳಿಸಬೇಕು ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಜಾಗದ ಕುರಿತು ಪರಿಶೀಲನೆ ನಡೆಸಲು ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ಹೊಸಮನೆ ವಾರ್ಡ್ನಲ್ಲಿ ಮೂಲಸೌಲಭ್ಯ ಕಾಮಗಾರಿಗಳನ್ನು ಕೈಗೊಳ್ಳಲು 30ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಕಾರ್ಪೊರೇಟರ್ಗಳು ಅಗತ್ಯ ಕಾಮಗಾರಿಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದರು.
ವಿದ್ಯಾನಗರ ವಾರ್ಡ್ ವ್ಯಾಪ್ತಿಯಲ್ಲಿ ಒಳಚರಂಡಿ ಸಮಸ್ಯೆ ಇದ್ದು, ಇದನ್ನು ಅಮೃತ ಯೋಜನೆಯಡಿ ಸೇರಿಸಿ ಶೀಘ್ರ ಸರಿಪಡಿಸಬೇಕು. ಎರಡು ದಿನಕ್ಕೆ ಒಮ್ಮೆ ಮಾತ್ರ ಕಸದ ಗಾಡಿ ಇಲ್ಲಿಗೆ ಬರುತ್ತಿದ್ದು, ಇನ್ನೊಂದು ಕಸ ಸಂಗ್ರಹ ವಾಹನದ ವ್ಯವಸ್ಥೆ ಮಾಡಬೇಕು. ಇಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಪಾಲಿಕೆಯ ನಿವೇಶನ ಲಭ್ಯವಿದ್ದು, ಅಲ್ಲಿ ಅಂಗನವಾಡಿ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ರೇಖಾ ರಂಗನಾಥ ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.