ಶಿವಮೊಗ್ಗ, ಜುಲೈ 04 : ಜುಲೈ 17ರಿಂದ 22ರವರೆಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ವಾಯುಸೇನಾ ಭರ್ತಿ ರ್ಯಾಲಿಯಲ್ಲಿ ತೇರ್ಗಡೆಗೆ ಪೂರಕವಾಗಿ ಜಿಲ್ಲೆಯ ಅಭ್ಯರ್ಥಿಗಳಿಗೆ ಪೂರ್ವಭಾವಿ ತರಬೇತಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಒಟ್ಟು ಮೂರು ವಿಭಾಗಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಐಎಎಫ್/ಪಿ ಹಾಗೂ ಅಟೋ ಟೆಕ್ ಟ್ರೇಡ್ ವಿಭಾಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಮಾನದಂಡವಾಗಿದ್ದು, ಮೆಡಿಕಲ್ ಅಸಿಸ್ಟೆಂಟ್ ಟ್ರೇಡ್ಗೆ ಪಿಯುಸಿ ವಿಜ್ಞಾನ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಎಲ್ಲಾ ವಿಭಾಗಗಳಿಗೆ ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮಥ್ರ್ಯ ಪರೀಕ್ಷೆ ನಡೆಯಲಿದೆ.
ದೈಹಿಕ ಪರೀಕ್ಷೆಗೆ ಸಿದ್ಧರಾಗಲು ಬಯಸುವ ಅಭ್ಯರ್ಥಿಗಳಿಗೆ ಪ್ರತಿ ದಿನ ನಗರದ ನೆಹರು ಕ್ರೀಡಾಂಗಣದಲ್ಲಿ ಬೆಳಿಗ್ಗೆ ತರಬೇತುದಾರರಿಂದ ತರಬೇತಿಯನ್ನು ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ನೇರವಾಗಿ ಕ್ರೀಡಾಂಗಣಕ್ಕೆ ಬಂದು ಹೆಸರು ನೀಡಬಹುದಾಗಿದೆ. ಲಿಖಿತ ಪರೀಕ್ಷೆಗೆ ಸಿದ್ಧರಾಗಲು ಬಯಸುವ ಅಭ್ಯರ್ಥಿಗಳಿಗೆ ಜುಲೈ 7 ಮತ್ತು 14ರಂದು ಕುವೆಂಪು ರಂಗಮಂದಿರದಲ್ಲಿ ಅರ್ಧ ದಿನದ ತರಬೇತಿಯನ್ನು ನೀಡಲಾಗುವುದು. ತರಬೇತಿ ನೋಂದಣಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8861890899, 081-82255293 ಸಂಪರ್ಕಿಸಬಹುದು. ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಪ್ರತಿ ದಿನ ಕನಿಷ್ಟ 2ಸಾವಿರ ಅಭ್ಯರ್ಥಿಗಳು ಭರ್ತಿ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಅವರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು. ಜಿಲ್ಲೆಯ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದ್ದು, ಈಗಾಗಲೇ ಎಲ್ಲಾ ಪದವಿ ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಸೂಚನೆಗಳನ್ನು ನೀಡಲಾಗಿದೆ ಎಂದರು.
ಸೈನಿಕ ಸ್ಮಾರಕ ಶಿಲ್ಪ ರಚನೆ: ಸೈನಿಕರ ಸ್ಮಾರಕಕ್ಕಾಗಿ ಈಗಾಗಲೇ ತೀರ್ಮಾನಿಸಲಾಗಿರುವಂತೆ ಜಿಲ್ಲಾ ಸೈನಿಕ ಮಂಡಳಿ ಬಳಿಯಿರುವ ಉದ್ಯಾನದಲ್ಲಿ ಸೈನಿಕ ಸ್ಮಾರಕ ಶಿಲ್ಪಗಳನ್ನು ರಚಿಸುವ ಕಾರ್ಯಾಗಾರವನ್ನು ಸಧ್ಯದಲ್ಲಿಯೇ ಆರಂಭಿಸಲಾಗುವುದು. ಈ ಉದ್ಯಾನದಲ್ಲಿ ಸೈನಿಕರ ಬಗ್ಗೆ ಗೌರವ ಹಾಗೂ ಹೆಮ್ಮೆ ಮೂಡಿಸುವಂತಹ ಆಕರ್ಷಕ ಸಿಮೆಂಟ್ ಶಿಲ್ಪಗಳನ್ನು ಶಿಲ್ಪಕಲಾ ಅಕಾಡೆಮಿ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಕಲಾವಿದರು ರೂಪಿಸಲಿದ್ದಾರೆ ಎಂದು ಅವರು ಹೇಳಿದರು.