ಶಿವಮೊಗ್ಗ: ಶಿವಮೊಗ್ಗದಲ್ಲಿ ಜುಲೈ 17ರಿಂದ 22ರವರೆಗೆ ನಡೆಯಲಿರುವ ವಾಯುಸೇನೆಯ ನೇಮಕಾತಿ ರ್ಯಾಲಿಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಅಭ್ಯರ್ಥಿಗಳಿಗೆ ತಂಗಲು ಎರಡು ಸಮುದಾಯ ಭವನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಕುರಿತು ವಿವರ ನೀಡಿದ ಅವರು, ಪ್ರತಿ ದಿನ 2ಸಾವಿರ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಲು ಅನುಕೂಲವಾಗುವಂತೆ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಜುಲೈ 17 ಮತ್ತು 18ರಂದು ಇಂಡಿಯನ್ ಏರ್‍ಫೋರ್ಸ್ ಪೋಲಿಸ್ ಮತ್ತು ಅಟೋಮೊಬೈಲ್ ಮತ್ತು ತಂತ್ರಜ್ಞ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ದಿನಗಳಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಯ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಜುಲೈ 21 ಮತ್ತು 22ರಂದು ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗಹಿಸಬಹುದಾಗಿದೆ. ಜುಲೈ 19ಮತ್ತು 20ರಂದು ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಆಯ್ಕೆ ನಡೆಯಲಿದ್ದು, ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಭಾಗಹಿಸಬಹುದಾಗಿದೆ. ಆಯ್ಕೆಯ ಹುದ್ದೆಗಳಿಗೆ ಯಾವುದೇ ಮಿತಿ ನಿಗದಿಪಡಿಸಲಾಗಿಲ್ಲ ಎಂದು ಹೇಳಿದರು.
ಬೇರೆ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ವಾಸ್ತವ್ಯಕ್ಕಾಗಿ ನ್ಯಾಯಾಲಯ ಸಂಕೀರ್ಣದ ಎದುರಿನ ಒಕ್ಕಲಿಗರ ಸಮುದಾಯ ಭವನ ಹಾಗೂ ರೈಲ್ವೇ ನಿಲ್ದಾಣದ ಬಳಿ ಇರುವ ಕೆಇಬಿ ಸಮುದಾಯ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಬೆಳಿಗ್ಗೆ ಸಿದ್ಧರಾಗಿ ಆಗಮಿಸಲು ಅಭ್ಯರ್ಥಿಗಳು ಈ ಸೌಲಭ್ಯ ಬಳಸಿಕೊಳ್ಳಬಹುದು. ಬೇರೆ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳು ರಸ್ತೆ ಬದಿಗಳಲ್ಲಿ ಮಲಗದೆ ಸಮುದಾಯ ಭವನವನ್ನು ಬಳಸಿಕೊಳ್ಳಬೇಕು. ಇದೇ ರೀತಿ ನೇಮಕಾತಿ ರ್ಯಾಲಿ ನಡೆಯುವ ನೆಹರು ಕ್ರೀಡಾಂಣದ ಬಳಿ ಸಾಕಷ್ಟು ಪ್ರಮಾಣದಲ್ಲಿ ಸಂಚಾರಿ ಟಾಯ್ಲೆಟ್ ಘಟಕಗಳನ್ನು ಇರಿಸಲಾಗುತ್ತಿದ್ದು, ಅದನ್ನು ಕಡ್ಡಾಯವಾಗಿ ಬಳಸಬೇಕು ಎಂದು ಅವರು ಮನವಿ ಮಾಡಿದರು.
ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನೇಮಕಾತಿ ರ್ಯಾಲಿ ಸ್ಥಳದಲ್ಲಿ ಜೆರಾಕ್ಸ್ ಅಂಗಡಿ, ಛಾಯಾಚಿತ್ರ ತೆಗೆಯಿಸಿಕೊಳ್ಳಲು ವ್ಯವಸ್ಥೆ, ಪಾವತಿ ಕ್ಯಾಂಟೀನ್ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ನೇರವಾಗಿ ನೇಮಕಾತಿ ದಿನದಂದು ಎಲ್ಲಾ ದಾಖಲೆಗಳೊಂದಿಗೆ ಹಾಜರಾಗಿ ತಮ್ಮ ಹೆಸರು ನೊಂದಾಯಿಸಬಹುದು. ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರತಿ ದಿನ ಸುಮಾರು 5ಸಾವಿರ ಅಭ್ಯರ್ಥಿಗಳನ್ನು ಪರೀಕ್ಷಿಸಲು ಬೇಕಾದ ಸಿಬ್ಬಂದಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು 7 ಎಎಸ್‍ಸಿ ಬೆಂಗಳೂರು ಘಟಕದ ಅಧಿಕಾರಿ ಜೆ.ಪಿ.ಮಿಶ್ರ ಅವರು ಮಾಹಿತಿ ನೀಡಿದರು.
ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಚಂದ್ರಪ್ಪ, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್ ಅವರು ಉಪಸ್ಥಿತರಿದ್ದರು.

error: Content is protected !!