ಶಿವಮೊಗ್ಗ, ಜೂನ್ 21 : ಇದುವರೆಗೆ ನೋಂದಣಿಯಾಗದೆ ವಾಣಿಜ್ಯ ಪರವಾನಿಗೆ ಪಡೆಯದೇ ಇರುವ ಅಂಗಡಿ ಮಳಿಗೆಗಳಿಗೆ ನೊಟೀಸ್ ಜಾರಿಗೊಳಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಅವರು ಗುರುವಾರ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಕಾರ್ಯಕ್ರಮಗಳ ಅನುಷ್ಟಾನದ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರತಿ ಅಂಗಡಿ ಮಳಿಗೆಗಳು ಟ್ರೇಡ್ ಲೈಸೆನ್ಸ್ ಕಡ್ಡಾಯವಾಗಿ ಪಡೆಯಬೇಕು. ಪರವಾನಿಗೆ ಪಡೆಯದೇ ಇರುವ ಅಂಗಡಿಗಳನ್ನು ಪರಿಶೀಲಿಸಿ, ವಾರ್ಡ್ವಾರು ಮಾಹಿತಿಯನ್ನು ಒಂದು ತಿಂಗಳ ಒಳಗಾಗಿ ಸಲ್ಲಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳ ಪರವಾನಿಗೆಯನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು. ಈಗಾಗಲೇ ಪರವಾನಿಗೆ ಪಡೆಯದೇ ಇರುವವರು ತಕ್ಷಣ ಪರವಾನಿಗೆ ಪಡೆಯುವಂತೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಪ್ರತಿ ವಾರ್ಡಿನ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ತಮ್ಮ ವಾರ್ಡಿನ ಸ್ವಚ್ಛತೆಯನ್ನು ಖಾತ್ರಿಪಡಿಸಬೇಕು. ಪ್ರತಿದಿನ ಪೌರಕಾರ್ಮಿಕರ ಸ್ವಚ್ಛತಾ ಕಾರ್ಯವನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು. ಸ್ಥಳೀಯವಾಗಿ ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಸೂಚಿಸಿದರು.
ಗಂಟೆ ಗಾಡಿಗಳ ಕೆಲಸಗಾರರಿಗೆ ಸರಿಯಾಗಿ ಸಂಬಂಳ ನೀಡಲಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. 15ದಿನಗಳ ಒಳಗಾಗಿ ಇದನ್ನು ಸರಿಪಡಿಸಿ, ನಿಗದಿತ ಸಮಯದ ಒಳಗಾಗಿ ಸಂಬಳ ಪಾವತಿಸಬೇಕು. ಮನೆ ಮನೆ ಕಸ ಸಂಗ್ರಹದ ಶುಲ್ಕ ವಸೂಲಿ ಪುಸ್ತಕವನ್ನು ಆರೋಗ್ಯ ಅಧಿಕಾರಿಗಳು ಪ್ರತಿ ತಿಂಗಳು ಪರಿಶೀಲಿಸಬೇಕು. ಪಶು ಸಂರಕ್ಷಣೆಗಾಗಿ ಪ್ರತ್ಯೇಕ ಸ್ಥಳಗಳನ್ನು ಗುರುತಿಸಬೇಕು. ಜಾನುವಾರುಗಳ ಸಂರಕ್ಷಣೆಗಾಗಿ ಕನಿಷ್ಟ ಮೂರು ಎಕ್ರೆ ಜಮೀನು ಗುರುತಿಸುವಂತೆ ಆಯುಕ್ತರು ಸೂಚನೆ ನೀಡಿದರು.
ಆರೋಗ್ಯ ವಿಭಾಗದಲ್ಲಿ ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿದ್ದು, ಎಲ್ಲಾ ವಾಹನಗಳ ಸ್ಥಿತಿಗತಿ ಬಗ್ಗೆ ವಾರದ ಒಳಗಾಗಿ ಮಾಹಿತಿ ಒದಗಿಸಬೇಕು. ಸ್ವಚ್ಛತಾ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಹಾಗೂ ಪೌರಕಾರ್ಮಿಕರಿಗೆ ದಂಡನೆ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಆರೋಗ್ಯ ಅಧಿಕಾರಿಗಳಾದ ಡಾ.ಶಿವಯೋಗಿ ಎಲಿ, ಡಾ.ರೇಖಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.