ಶಿವಮೊಗ್ಗ, ಜುಲೈ 29 : ಶರಾವತಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಮಳೆಯಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏಕಪ್ರಕಾರವಾಗಿ ಏರುತ್ತಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡುವ ಸಂಭವ ಇರುವುದರಿಂದ ಅಣೆಕಟ್ಟೆಯ ಕೆಳದಂಡೆ ಹಾಗೂ ನದಿ ಪಾತ್ರದುದ್ದಕ್ಕೂ ಇರುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕೋರಲಾಗಿದೆ.
ಲಿಂಗನಮಕ್ಕಿ ಜಲಾಶಯದ ಗರಿಷ್ಟ ಮಟ್ಟ 1819.00 ಅಡಿಗಳು ಮತ್ತು ಈಗಿನ ಅಂದರೆ ಜುಲೈ 29 ರ ಬೆಳಿಗ್ಗೆ 8 ಗಂಟೆಗೆ ನೀರಿನ ಮಟ್ಟ 1806.20 ಅಡಿಗಳಾಗಿದ್ದು, ಈ ದಿನದ ಲಿಂಗನಮಕ್ಕಿ ಜಲಾಶಯದ ಒಳಹರಿವು 18,552 ಕ್ಯೂಸೆಕ್ಸ್ ಆಗಿರುತ್ತದೆ. ಇದೇ ರೀತಿ ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಗರಿಷ್ಟ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ. ಲಿಂಗನಮಕ್ಕಿ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಯಾವುದೇ ಸಮದಯಲ್ಲಿ ಹೆಚ್ಚಾದ ನೀರನ್ನು ಹೊರಬಿಡಲಾಗುವುದು. ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ಎಲ್ಲ ನೀರು ಗೇರುಸೊಪ್ಪ ಜಲಾಶಯಕ್ಕೆ ಹರಿದುಬರುತ್ತದೆ. ಗೇರುಸೊಪ್ಪ ಜಲಾಶಯವು ನೀರಿನ ಸಂಗ್ರಹವನ್ನು ಗರಿಷ್ಟ ಮಟ್ಟದಲ್ಲಿ ಕಾಪಾಡುವ ಜಲಾಶಯವಾದ್ದರಿಂದ(ಬ್ಯಾಲೆನ್ಸಿಂಗ್ ಜಲಾಶಯ)ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟ ನೀರನ್ನು ಸಂಗ್ರಹಿಸುವ ಅವಕಾಶ ಇರುವುದಿಲ್ಲ.
ಅಣೆಕಟ್ಟೆಯ ಕೆಳದಂಡೆ ಹಾಗೂ ನದಿ ಪಾತ್ರದ ಉದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಈ ಮೂಲಕ ಎಚ್ಚರಿಸಲಾಗಿದೆ. ಜಲಾಶಯದ ಪ್ರತಿದಿನದ ನೀರಿನ ಮಟ್ಟ ಮತ್ತು ಒಳಹರಿವಿನ ಪ್ರಮಾಣದ ವಿವರವನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಪ್ರಕಟಣೆ ತಿಳಿಸಿದೆ.