ಮಕ್ಕಳಲ್ಲಿ ಭೇದಿಗೆ ಕಾರಣವಾಗುವ ರೋಟಾ ವೈರಸ್ ತಡೆಗೆ ಹೊಸ ಲಸಿಕೆಯನ್ನು ನೀಡಲಾಗುತ್ತಿದ್ದು, ಅದನ್ನು ಪ್ರತಿಯೊಂದು ಮಗುವಿಗೆ ಹಾಕಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಅನುಷ್ಟಾನ ಕುರಿತು ಸಭೆ ನಡೆಸಿದರು.
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಟಾ ವೈರಸ್ ಲಸಿಕೆಯನ್ನು ನೀಡಲಾಗುತ್ತಿದ್ದು, ಮಗುವಿಗೆ 6, 10 ಮತ್ತು 14ನೇ ವಾರದಲ್ಲಿ ಈ ಲಸಿಕೆಯನ್ನು ಹಾಕಬೇಕು. ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಮಕ್ಕಳು ರೋಟಾ ವೈರಸ್ ಲಸಿಕೆ ಹಾಕಿರುವುದನ್ನು ಖಾತ್ರಿಪಡಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಕೋಟ್ಪಾ ಕಾಯ್ದೆ ಕಟ್ಟುನಿಟ್ಟಿನಿಂದ ಜಾರಿ: ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸುವ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು. ಶಾಲೆಗಳ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಬಾರದು. ಜಿಲ್ಲೆಯಲ್ಲಿ ಕಳೆದ ಎಪ್ರಿಲ್‍ನಿಂದ ಈವರೆಗೆ 589ಕೊಟ್ಪಾ ದಾಳಿಗಳನ್ನು ನಡೆಸಲಾಗಿದೆ. ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಈ ಕಾರ್ಯದಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು.
ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಯಂತ್ರಣಕ್ಕೆ ಸ್ಥಳೀಯ ಪಿಡಿಒ ಸಹಕಾರ ನೀಡದಿರುವ ಬಗ್ಗೆ ದೂರುಗಳು ಬಂದಿವೆ. ಅಂತಹ ಪಿಡಿಒಗಳಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿ ಇಲಾಖಾ ವಿಚಾರಣೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ನೀರಿನ ಪರೀಕ್ಷೆ ಮಾಡಬೇಕು: ಈ ಬಾರಿ ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿವೆ. ಮುಂಜಾಗರೂಕತಾ ಕ್ರಮಗಳಿಂದಾಗಿ ಇದುವರೆಗೆ ಸಾಂಕ್ರಾಮಿಕ ರೋಗಗಳು ಹರಡಿಲ್ಲ. ಇನ್ನು ಮುಂದೆ ಸಹ ಜಾಗರೂಕತೆಯಿಂದಿದ್ದು, ಕುಡಿಯುವ ನೀರಿನ ಗುಣಮಟ್ಟವನ್ನು ನಿರಂತರವಾಗಿ ಪರೀಕ್ಷೆ ಮಾಡಬೇಕು ಎಂದು ಅವರು ಸೂಚಿಸಿದರು.
ಆಹಾರ ಗುಣಮಟ್ಟ ಪರೀಕ್ಷೆ ಹೆಚ್ಚಿಸಿ: ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಲು ಆಹಾರ ಮತ್ತು ಪಾನೀಯಗಳ ಗುಣಮಟ್ಟವನ್ನು ನಿರಂತರವಾಗಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಕೇವಲ ದೂರು ಬಂದ ಪ್ರಕರಣಗಳಲ್ಲಿ ಮಾತ್ರ ಈ ಕ್ರಮ ಕೈಗೊಳ್ಳಬಾರದು. ಜಿಲ್ಲೆಯಲ್ಲಿ 298 ಹಾಲು ನೋಂದಣಿ ಕೇಂದ್ರಗಳಿದ್ದು, ಕೇವಲ 4 ಮಾದರಿಗಳನ್ನು ಮಾತ್ರ ಪರೀಕ್ಷೆ ಮಾಡಲಾಗಿದೆ. ಇದೇ ರೀತಿ ಕುಡಿಯುವ ನೀರಿನ ಘಟಕಗಳ ಮೇಲೆ ಸಹ ನಿಗಾ ಇರಿಸಬೇಕು ಎಂದು ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಚ್.ಟಿ.ಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿನಹಳ್ಳಿ, ಆರ್‍ಸಿಎಚ್ ಡಾ.ನಾಗರಾಜ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಂಕರಪ್ಪ, ಡಾ.ಕಿರಣ ಕುಮಾರ್ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!