ಶಿವಮೊಗ್ಗ, ನವೆಂಬರ್ 25 : ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕುರಿತು ಕಾಳಜಿ ಹೊಂದಿರಬೇಕೆಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಾಪೂಜಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೇಂಗ್ಯೂ, ಚಿಕೂನ್‍ಗುನ್ಯಾ, ಸೊಳ್ಳೆಗಳಿಂದ ಹರಡುವ ರೋಗಗಳ ಜಾಗೃತಿ ಮತ್ತು ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡುತ್ತಿದ್ದರು.
ಯಾವುದೇ ಖಾಯಿಲೆ ಬರುವುದಕ್ಕೆ ಪೂರ್ವದಲ್ಲಿ ಕಾಯಿಲೆ ಬರದಂತೆ ಗಮನಹರಿಸುವುದು ಜಾಣತನ. ಜನಸಾಮಾನ್ಯರಲ್ಲಿ ಬರುವ ಯಾವುದೇ ಕಾಯಿಲೆ ನಿವಾರಣೆ ಮಾಡುವುದು ಕೇವಲ ಆರೋಗ್ಯ ಇಲಾಖೆಯ ಕಾರ್ಯಕ್ರಮವಲ್ಲ. ಬದಲಾಗಿ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅರಿಯುವುದು ಹಾಗೂ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕಾರ್ಯವಾಗಿದೆ ಎಂದ ಅವರು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದವರು ನುಡಿದರು.
ಈಗಾಗಲೇ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗವು ನವೆಂಬರ್ 01ರಿಂದ ಜನವರಿ 31ರವರೆಗೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಸಹಾಯಕರು ಜಿಲ್ಲೆಯಲ್ಲಿ ನಿಗಧಿಪಡಿಸಿದ ಪ್ರದೇಶಕ್ಕೆ ತೆರಳಿ ಮನೆಮನೆ ಭೇಟಿ ಮಾಡಿ ಸಮೀಕ್ಷೆ ನಡೆಸಲಿದ್ದಾರೆ. ಈ ಸಮೀಕ್ಷೆಯ ಜೊತೆಜೊತೆಗೆ ಅಲ್ಲಿನ ವಾರ್ತಾವರಣವನ್ನು ಗಮನಿಸಲಿರುವುದು ವಿಶೇಷ ಎಂದವರು ನುಡಿದರು.
ಈ ಸಂದರ್ಭದಲ್ಲಿ ಡೇಂಗ್ಯೂ ಜ್ವರ, ಡೇಂಗ್ಯೂ ರಕ್ತ ಸ್ರಾವ ಜ್ವರ ಮತ್ತು ಢೆಂಗ್ಯೂ ಶಾಕ್ ಸಿಂಡ್ರೋಮ್‍ನಂತಹ ಕಾಯಿಲೆಗಳ ಕುರಿತು ಹಾಗೂ ಪರಿಸರ ಸ್ವಚ್ಚತೆಯ ಕುರಿತು ಆರೋಗ್ಯ ಕಾರ್ಯಕರ್ತರು ಮಾಹಿತಿ ನೀಡಲಿದ್ದಾರೆ ಎಂದರು.
ಅಲ್ಲದೇ ನವೆಂಬರ್ 25ರೀಮದ ಡಿಸೆಂಬರ್ 10ರವರೆಗೆ ನಗರದ ಕೊಳಚೆ ಪ್ರದೇಶಗಳು, ವೃದ್ಧಾಶ್ರಮ, ಅನಾಥಾಶ್ರಮ, ಖೈದಿಗಳು, ಕಲ್ಲುಕ್ವಾರಿಗಳು, ಗಾರ್ಮೆಂಟ್ಸ್‍ಗಳು, ಹೊಗೆ ತುಂಬುವಂತಹ ಕಾರ್ಖಾನೆಗಳು, ಕ್ಷಯರೋಗಿಗಳು ಇರುವಂತಹ ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಸಕ್ರಿಯ ಕ್ಷಯ ರೋಗ ಪತ್ತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮೀಕ್ಷೆಗಾಗಿ ತೆರಳುವ ಪ್ರತಿನಿಧಿಗಳು ಶಿಸ್ತು ಹಾಗೂ ಬದ್ದತೆಯಿಂದ ಪ್ರಾಮಾಣಿಕವಾಗಿ ಮಾಹಿತಿ ದಾಖಲಿಸುವಂತೆ ಅವರು ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಸೂಚಿಸಿದರು.
ಕುಷ್ಟರೋಗಕ್ಕೆ ಉಚಿತ ಚಿಕಿತ್ಸೆ ಲಭ್ಯವಿದೆ. ಸ್ಪರ್ಶರಹಿತ ಮಚ್ಚೆ, ಕೈಕಾಲುಗಳಲ್ಲಿ ಜೋಮು ಕಂಡಬಂದಲ್ಲಿ ಕುಷ್ಟರೋಗದ ಸೂಚನೆ ಇದಾಗಿರಬಹುದು. ಅಂತಹ ರೋಗಿಗಳು ಆತಂಕಪಡದೆ ಬಹುವಿಧ ಔಷಧಿ ಚಿಕಿತ್ಸೆ ಪಡೆದು ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದರು.
ಸಮೀಕ್ಷೆಯಲ್ಲಿ ಗುರುತಿಸಲಾಗುವ ಕುಷ್ಟರೋಗಿಗಳಿಗೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಸಲಹೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಕಾರ್ಯಕರ್ತರು ಭಾರತವನ್ನು ಕುಷ್ಟರೋಗ ಮುಕ್ತವನ್ನಾಗಿಸಲು ಶ್ರಮಿಸುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ನವೆಂಬರ್ ಮತ್ತು ಡಿಸೆಂಬರ್ ಮಾಹೆಯಲ್ಲಿ ನಡೆಯಲಿರುವ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನದಲ್ಲಿ ಸುಮಾರು 54,476ಮನೆಗಳ 2,76,269ಜನರನ್ನು ತಪಾಸಣೆ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ 599 ತಜ್ಞ ವೈದ್ಯರನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದರು.
ಸಮೀಕ್ಷೆ ಸಂದರ್ಭದಲ್ಲಿ ಕ್ಷಯರೋಗದ ಲಕ್ಷಣಗಳು ಕಂಡುಬಂದಲ್ಲಿ ಸ್ಥಳದಲ್ಲಿಯೇ ಕಫ ಸಂಗ್ರಹಣೆ ಮಾಡಿ ತಪಾಸಣೆಗೆ ಕಳುಹಿಸಲಾಗುವುದು. ಇನ್ನೂ ಕೆಲ ಶಂಕಿತರಿಗೆ ಎಕ್ಸ್‍ರೇ ಮತ್ತು ಸಿ.ಬಿ.ನ್ಯಾಟ್ ಪರೀಕ್ಷೆಗೆ ಕಳುಹಿಸಲಾಗುವುದು. ಕ್ಷಯ ಎಂದು ದೃಢಪಟ್ಟ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.
ಸಾರ್ವಜನಿಕರು ಯಾವುದೇ ಕಾಯಿಲೆಯ ಕುರಿತು ಸಾಮಾನ್ಯ ಅರಿವು ಹೊಂದಿರಬೇಕು ಎಂದ ಅವರು, ಕ್ಷಯರೋಗಿಗಳು ಕೆಮ್ಮುವಾಗ ಹಾಗೂ ಸೀನುವಾಗ ಬಾಯಿ ಮತ್ತು ಮೂಗಿನ ಹತ್ತಿರ ಕರವಸ್ತ್ರ ಇಟ್ಟುಕೊಳ್ಳಬೇಕು. ರೋಗಿಯು ಕಫವನ್ನು ಎಲ್ಲೆಂದರಲ್ಲಿ ಉಗಿಯಬಾರದು. ಸಾಧ್ಯವಾದಷ್ಟು ಕಫವನ್ನು ಡಬ್ಬಿಯಲ್ಲಿ ಶೇಖರಿಸಿ ಗುಂಡಿ ತೋಡಿ ಮುಚ್ಚುವುದು ಸರಿಯಾದ ಕ್ರಮ ಎಂದವರು ನುಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾನಗರಪಾಲಿಕೆ ಸದಸ್ಯೆ ಶ್ರೀಮತಿ ಸುರೇಖಾ ಮುರಳೀಧರ್ ಅವರು ಮಾತನಾಡಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಯ ನಿಷ್ಕಳಂಕ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿದರು. ಹಿರಿಯ ವೈದ್ಯಾಧಿಕಾರಿ ಡಾ||ಶಂಕರಪ್ಪ, ಡಾ|| ಶಮಾ, ಡಾ|| ಮಂಜುನಾಥ ನಾಗಲೀಕರ್, ಡಾ||ದಿನೇಶ್, ಡಾ||ವೀರೇಂದ್ರಕುಮಾರ್, ಡಾ||ರೇಣುಕಾ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

error: Content is protected !!