ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತ ದೇಶದ ಐದನೇ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಚೌಧರಿ ಚರಣ್ ಸಿಂಗ್‍ರವರ ಜನ್ಮದಿನದ ಪ್ರಯುಕ್ತ ರೈತ ದಿನಾಚರಣೆಯನ್ನು ಎಂ.ಎಸ್.ಸ್ವಾಮಿನಾಥನ್ ಸಭಾಂಗಣ, ನವಿಲೆ ಆವರಣ, ಶಿವಮೊಗ್ಗದಲ್ಲಿ ಏರ್ಪಡಿಸಲಾಗಿತ್ತು.


ಡಾ. ಬಿ.ಸಿ.ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆ.ವಿ.ಕೆ., ಶಿವಮೊಗ್ಗ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ವರ್ಷಪೂರ್ತಿ ಅನೇಕ ತರಬೇತಿಗಳು, ಪದ್ಧತಿ ಪ್ರಾತ್ಯಕ್ಷಿಕೆಗಳು, ಕ್ಷೇತ್ರೋತ್ಸವ, ವಿಚಾರ ಸಂಕಿರಣಗಳು, ನೂತನ ತಂತ್ರಜ್ಞಾನಗಳ ಬಗ್ಗೆ ಕಾರ್ಯಾಗಾರ ಹಾಗೂ ವಿಶೇಷ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಈ ದಿನ ಶ್ರೀ ಚೌಧರಿ ಚರಣ್ ಸಿಂಗ್‍ರವರ ಜನ್ಮದಿನದ ಅಂಗವಾಗಿ ರೈತ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದರು. ಶ್ರೀ ಚೌಧರಿ ಚರಣ್ ಸಿಂಗ್‍ರವರು ರೈತ ಸಮೂಹಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಸದರಿಯವರು ಎರಡು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಗೃಹ ಸಚಿವರಾಗಿ, ಉಪ ಪ್ರಧಾನಿ ನಂತರದಲ್ಲಿ ದೇಶದ 5ನೇ ಪ್ರಧಾನ ಮಂತ್ರಿಗಳಾಗಿ ಸೇವೆಸಲ್ಲಿಸಿ ಅದರಲ್ಲೂ ರೈತರಿಗೆ ಬೆಂಬಲ ಬೆಲೆ, ಮನೆ ಕಂದಾಯ ಹಾಗೂ ಜಮೀನ್ದಾರಿ ಪದ್ಧತಿ ನಿರ್ಮೂಲನಾ ಕಾಯ್ದೆಯನ್ನು ಜಾರಿಗೆ ತಂದು ರೈತ ಸಮೂಹಕ್ಕೆ ಉಪಯೋಗ ಆಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಂ. ಕೆ. ನಾಯ್ಕ್, ಗೌರವಾನ್ವಿತ ಕುಲಪತಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ನೆರವೇರಿಸಿ ಮಾತನಾಡುತ್ತಾ, ವರ್ಷಪೂರ್ತಿ ವಿವಿಧ ದಿನಾಚರಣೆಗಳನ್ನು ನಾವುಗಳು ಆಚರಿಸುತ್ತಾ ಬಂದಿದ್ದೇವೆ. ಆದರೆ, ಸಮಯೋಚಿತ, ಸೂಕ್ತ, ಆಚರಿಸಲೇಬೇಕಾದ ದಿನಾಚರಣೆ ಈ ‘ರೈತ ದಿನಾಚರಣೆ’ ಎಂದು ಈ ದಿನದ ಆಚರಣೆಯ ಪ್ರಾಮುಖ್ಯತೆ ವಿವರಿಸುತ್ತಾ, ಶ್ರೀ ಚೌಧರಿ ಚರಣ್ ಸಿಂಗ್‍ರವರು ಭಾರತದ ಪ್ರಧಾನಿಯಾಗಿದ್ದಾಗ ರೈತ ಸಮುದಾಯಕ್ಕೆ ತಂದ ಅನೇಕ ಬದಲಾವಣೆಗಳು ರೈತ ವರ್ಗಕ್ಕೆ ಬಹುಉಪಯೋಗವಾಗಿದೆ ಎಂದರು. ಅವರ ಈ ಒಂದು ಚಿಂತನೆಗೆ ಹಾಗೂ ಅವರು ರೈತ ಸಮುದಾಯಕ್ಕೆ ಕೊಟ್ಟಂತ ಕೊಡುಗೆಗೆ ನಾವುಗಳು ಅಭಾರಿಯಾಗಬೇಕಿದೆ ಎಂದು ಅಭಿಪ್ರಾಯಿಸಿದರು.ಈ ಹಿಂದೆ ಇದ್ದ ಆಹಾರದ ಕೊರತೆ ಇಂದು ಇಲ್ಲ. ಆಹಾರ ವಿತರಣೆಯುಲ್ಲಿ ಆಗುತ್ತಿರುವ ಲೋಪದೋಷಗಳಿಂದ ಇನ್ನೂ ದೇಶದ ಜನತೆ ಅರೆಹೊಟ್ಟೆ, ಪೌಷ್ಠಿಕಾಂಶದ ಕೊರತೆಯನ್ನು ಎದುರಿಸುವಂತಾಗಿದೆ. ಕೃಷಿಯನ್ನು ಕೈಬಿಟ್ಟು ಪಟ್ಟಣದೆಡೆಗೆ ವಲಸೆ ಹೋಗುತ್ತಿರುವ ಯುವ ರೈತರಲ್ಲಿ ಭರವಸೆ ಹುಟ್ಟಿಸಬೇಕೆಂದರು. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ಮಾರಾಟ ಮಾಡದೆ, ಮೌಲ್ಯವರ್ಧನೆ ಮಾಡಿ ಮಾರುವುದರ ಮುಖಾಂತರ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ರೈತರು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕಿದೆ. ತಮ್ಮ ತಮ್ಮ ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳ ಪ್ರವೇಶಕ್ಕೆ ಅವಕಾಶ ಕೊಡದೆ ತಾವೇ ನೇರವಾಗಿ ಮಾರುಕಟ್ಟೆ ಮಾಡುವುದರ ಮುಖಾಂತರ ಹೆಚ್ಚಿನ ಲಾಭ ಪಡೆಯಬೇಕೆಂದು ತಿಳಿಸಿದರು. ಮುಂದುವರೆದು, ಇಂದು ಕೃಷಿ ಇಲಾಖೆಯು ಆತ್ಮ ಯೊಜನೆಯಡಿ ಉತ್ತಮ ರೈತರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ರೈತರಲ್ಲಿ ಹೊಸ ಹುಮ್ಮಸ್ಸನ್ನು ಕಾಣಲು ಸಹಾಯವಾಗಿದೆ ಎಂದು ಅಭಿಪ್ರಾಯಿಸಿದರು.

ಡಾ. ಎಂ. ಕಿರಣ್‍ಕುಮಾರ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ ಇವರು ಮಾತನಾಡುತ್ತಾ ರೈತರು ವಿವಿಧ ಬೆಳೆಗಳ ಒಕ್ಕೂಟಗಳನ್ನು ಸ್ಥಾಪಿಸಿಕೊಂಡು, ಮಧ್ಯವರ್ತಿಗಳಿಗೆ ಅವಕಾಶ ಕೊಡದೆ ತಾವೇ ಬೀಜ, ಗೊಬ್ಬರ, ಔಷಧಿ, ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದರಿಂದ ಅಧಿಕ ಲಾಭ ಪಡೆಯಬಹುದೆಂದು ತಿಳಿಸಿದರು. ರೈತರು ಕೃಷಿಯಲ್ಲಿ ಲಾಭವನ್ನು ಕಾಣಲು ಸಮಗ್ರ ಕೃಷಿ ಪದ್ಧತಿಗಳನ್ನು ಅನುಸರಿಸಬೇಕು, ರೈತರೂ ಸಹ ಅತೀವ ಜಾಗರೂಕತೆಯಿಂದ ಆಯಾ ಕಾಲಕ್ಕೆ ತಕ್ಕಂತ ಬೆಳೆಗಳನ್ನು ಅಂದರೆ, ಹೂವು-ಹಣ್ಣು, ತರಕಾರಿ ಬೆಳೆಗಳನ್ನು ಬೆಳೆದಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ತಿಳಿಸಿದರು. ಅಲ್ಲದೆ, ಎಲ್ಲಾ ರೈತರು ಒಂದೇ ಕಾಲಕ್ಕೆ ಒಂದೇ ತರವಾದ ಬೆಳೆ ಬೆಳೆಯುವುದರಿಂದಲೂ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು. ಇವೆಲ್ಲವಕ್ಕೂ ಉತ್ತರವೆಂಬಂತೆ ರೈತರು ಸಂಘಟಿತರಾಗಿ ಇಂತಹ ರೈತ ಉತ್ಪಾದಕ ಕಂಪನಿಗಳಿಗೆ ತಮ್ಮ ಕೈಜೋಡಿಸುವಂತೆ ಕರೆ ನೀಡಿದರು.
ತಾಂತ್ರಿಕ ಸಮಾವೇಶದಲ್ಲಿ ಶ್ರೀ ನೆಲ್ಸನ್ ಜಡೇಜಾ, ವ್ಯವಸ್ಥಾಪಕರು, ಲೀಡ್ ಬ್ಯಾಂಕ್, ಶಿವಮೊಗ್ಗ ಇವರು ಮಾತನಾಡುತ್ತಾ ತಮ್ಮ ಬ್ಯಾಂಕಿನಿಂದ ರೈತರಿಗೆ ಸಿಗಬಹುದಾದ ಸವಲತ್ತುಗಳನ್ನು ವಿವರಿಸಿ ರೈತರಿಗೆ ಯಾವಾಗಲೂ ನಿಮ್ಮೊಂದಿಗೆ ನಾವು ಸದಾ ಇರುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಮೃತ್ಯುಂಜಯ ವಾಲಿ, ಸಂಶೋಧನಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ, ಡಾ. ಡಾ. ಆರ್. ಸಿ. ಜಗದೀಶ, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ, ಡಾ. ಎಸ್. ಯು. ಪಾಟೀಲ್, ಸಹ ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ.ತೋ.ವಿ.ವಿ., ಶಿವಮೊಗ್ಗ ಮತ್ತು ಡಾ. ಮಂಜುನಾಥ್, ಉಪನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ ಇವರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜಿ. ಕೆ. ಗಿರಿಜೇಶ್,ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ಮತ್ತು ಡಾ. ಪ್ರದೀಪ್ ಗೋಪಾಕ್ಕಳಿ ತಾಂತ್ರಿಕ ಅಧಿಕಾರಿ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಇವರು ಭಾಗವಹಿಸಿ ಸಮಗ್ರ ಕೃಷಿ ಪದ್ದತಿ ಮತ್ತು ಕೃಷಿಯಲ್ಲಿ ಹವಾನಾನದ ಪಾತ್ರದ ಕುರಿತ ತಾಂತ್ರಿಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಶಿವಮೊಗ್ಗ ಜಿಲ್ಲೆಯ, ವಿವಿಧ ತಾಲ್ಲೂಕಿನ 42 ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಡಾ.ಡಿ.ಎಂ.ಬಸವರಾಜ್, ಉಪನಿರ್ದೇಶಕರು, ಕಾರ್ಯಕ್ರಮಕ್ಕೆ ಬಂದ ಎಲ್ಲರನ್ನೂ ಸ್ವಾಗತಿಸಿದರು
ಡಾ|| ಅಶೋಕ್ ಎಂ., ವಿಜ್ಞಾನಿ (ಪಶು ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ ನಿರೂಪಿಸಿದರು, ಶ್ರೀ ಕೆ. ಜಿ. ಕುಮಾರ್, ಸಹಾಯಕ ಕೃಷಿ ನಿರ್ದೇಶಕರು, ಸೊರಬ ಇವರು ವಂದಿಸಿದರು. ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಸಿಬ್ಬಂದಿಗಳು, ಕೃಷಿ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಒಟ್ಟು 185 ಕ್ಕೂ ಅಧಿಕ ರೈತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

error: Content is protected !!