ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ), ಕೃಷಿ ಇಲಾಖೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ, ದಿನಾಂಕ 26-04-2022 ರಂದು “ರೈತರ ಸಹಭಾಗಿತ್ವ, ನಮ್ಮ ಆದ್ಯತೆ” ಕುರಿತ ಅಭಿಯಾನವನ್ನು ಕೃಷಿ ಮಹಾವಿದ್ಯಾಲಯ, ಶಿವಮೊಗ್ಗದ ಆವರಣದಲ್ಲಿ ಆಯೋಜಿಸಲಾಗಿತ್ತು.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ವತಿಯಿಂದ ಆಯೋಜಿಸಲಾಗಿದ್ದ ‘ಕಿಸಾನ್ ಭಾಗಿದಾರಿ ಪ್ರಾಥಮಿಕ್ತಾ ಹಮಾರಿ ಅಭಿಯಾನದ ಕಿಸಾನ್ ಮೇಳ’ದ ಉದ್ಘಾಟನೆಯನ್ನು ನೆರವೇರಿಸಿ, ನೇರಕಾರ್ಯಕ್ರಮದ ಪ್ರಸಾರದಲ್ಲಿ ಶ್ರೀ ನರೇಂದ್ರಸಿಂಗ್ ಥೋಮರ್, ಮಾನ್ಯ ಕೃಷಿ ಮಂತ್ರಿಗಳು, ಭಾರತ ಸರ್ಕಾರ ಇವರು ದೇಶದಾದ್ಯಂತ ರೈತನ್ನು ಉದ್ದೇಶಿಸಿ, ಭಾರತೀಯ ಪ್ರಾಕೃತಿಕ ಕೃಷಿ ಪದ್ಧತಿಯ ಅಡಿಯಲ್ಲಿ ನೈಸರ್ಗಿಕ ಕೃಷಿ ಅಳವಡಿಕೆಗೆ ರೈತರನ್ನು ಪ್ರೋತ್ಸಾಹಿಸಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಬಿ. ಹೇಮ್ಲಾನಾಯ್ಕ್, ವಿಸ್ತರಣಾ ನಿರ್ದೇಶಕರು, ಕೆ.ಶಿ.ನಾ.ಕೃ. ತೋ.ವಿ.ವಿ., ಶಿವಮೊಗ್ಗ ಇವರು ನೆರವೇರಿಸಿ ರೈತರನ್ನು ಕುರಿತು ಮಾತನಾಡುತ್ತಾ, ‘ಬೇರಾವುದೇ ಕಸುಬಿಗೆ ಹೋಲಿಸಿದರೆ, ಕೃಷಿ ಕಸುಬು ತೃಪ್ತಿದಾಯಕ’ ಎಂದು ತಿಳಿಸುತ್ತಾ, ಸಾವಯವ ಮತ್ತು ನೈಸರ್ಗಿಕ ಕೃಷಿಯ ಪ್ರಾಮುಖ್ಯತೆ ಮತ್ತು ಉತ್ತಮ ಜೀವನೋಪಾಯಕ್ಕಾಗಿ ಕೃಷಿಯಲ್ಲಿ ಹೊಸ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೇರೇಪಿಸಿದರು. ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿ, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಮತ್ತು ಸುಸ್ಥಿರತೆಯ ಮೂಲಕ ಇಳುವರಿಯನ್ನು ಹೆಚ್ಚಿಸಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಡಾ. ಎಂ. ಕಿರಣ್‍ಕುಮಾರ್, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ ಇವರು ಮಾತನಾಡುತ್ತಾ, ಸಾಂಪ್ರದಾಯಿಕ ಕೃಷಿ, ಆಧುನಿಕ ಕೃಷಿ, ಸಾವಯವ ಕೃಷಿ, ಸಮಗ್ರ ಕೃಷಿ, ನೈಸರ್ಗಿಕ ಕೃಷಿ ಹೀಗೆ ಯಾವುದೇ ಕೃಷಿ ಪದ್ಧತಿ ಇದ್ದರು ಅದು ಲಾಭದಾಯಕವಾಗಿ ಹೆಚ್ಚು ಕಾಲ ಉಳಿಯಬೇಕು. ರೈತ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಯಾವ ರೀತಿ ಗಳಿಸಬಹುದೆಂಬ ಚಿಂತನೆ ನಡೆಸಿ, ಕೃಷಿ ಮಾಡಬೇಕು ಎಂದರು. ಫಸಲ್ ಭೀಮಾ ಯೋಜನೆ ಮತ್ತು ಕಿಸಾನ್ ಕಾರ್ಡ್‍ನ ಮಹತ್ವದ ಬಗ್ಗೆ ರೈತರಿಗೆ ತಿಳಿಸಿದರು.
ತಾಂತ್ರಿಕ ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಟಿ.ಎಂ.ಸೌಮ್ಯ, ಸಹ ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರ, ಮತ್ತು ಡಾ. ಸಿ. ಎಂ. ಕಲ್ಲೇಶ್ವರಸ್ವಾಮಿ, ಸಹ ಪ್ರಾಧ್ಯಾಪಕರು, ಕೀಟಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ಇವರು ವಿವಿಧ ಬೆಳೆಗಳಲ್ಲಿ ನೈಸರ್ಗಿಕ ಕೃಷಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಸ್. ಯು. ಪಾಟೀಲ್, ಸಹ ವಿಸ್ತರಣಾ ನಿರ್ದೇಶಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಶಿವಮೊಗ್ಗ, ಶ್ರೀ ಮಂಜುನಾಥ್ , ಉಪನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ, ಶ್ರೀ ಡಿ. ಎಂ. ಬಸವರಾಜ್ , ಉಪನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ, ಶ್ರೀ ಮುರಳೀಧರ್, ಎಂ.ಆರ್., ಉಪ ನಿರ್ದೇಶಕರು, ರೇಷ್ಮೆ ಇಲಾಖೆ, ಶಿವಮೊಗ್ಗ ಇವರು ಭಾಗವಹಿಸಿದ್ದರು.
ಡಾ. ಬಿ.ಸಿ.ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆ.ವಿ.ಕೆ., ಶಿವಮೊಗ್ಗ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿ ಎಲ್ಲರನ್ನೂ ಸ್ವಾಗತಿಸಿದರು. ಡಾ. ಬಸವರಾಜ ಎಂ., ವಿಜ್ಞಾನಿ (ಬೇಸಾಯಶಾಸ್ತ್ರ) ಇವರು ವಂದಿಸಿದರು, ಡಾ. ಅಶೋಕ್ ಎಂ., ವಿಜ್ಞಾನಿ (ಪಶುವಿಜ್ಞಾನ) ಇವರು ಕಾರ್ಯಕ್ರಮ ನಿರೂಪಿಸಿದರು.
ಈ ಅಭಿಯಾನದ ಅಂಗವಾಗಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಲ್ಲದೆ, ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿನ ಒಟ್ಟು 278 ಜನ ರೈತ ಮತ್ತು ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

error: Content is protected !!