ಶಿವಮೊಗ್ಗ, ಮಾರ್ಚ್ 12 : ಗ್ರಾಮೀಣ ಪ್ರದೇಶದ ರೈತರಿಗೆ ಕಂದಾಯ ಇಲಾಖೆಯಿಂದ ನೀಡಲಾಗುತ್ತಿರುವ ಪಹಣಿ, ಅಟ್ಲಾಸ್ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತಿತರ ಮೂಲದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಸರ್ಕಾರದ ಯೋಜನೆ ಜನಸ್ನೇಹಿಯಾಗಿದೆ ಎಂದರು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ಸಮೀಪದ ಹೊಳಲೂರಿನ ಶ್ರೀ ಮೈಲಾರೇಶ್ವರ ದತ್ತಾಶಿಬಿರ ಆಶ್ರಮದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ವಿನೂತನ ಹಾಗೂ ಮಹತ್ವಾಕಾಂಕ್ಷಿ ಯೋಜನೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಎಂಬ ಯೋಜನೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು. ಇಂದು ರಾಜ್ಯ ಮಟ್ಟದ ಈ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಚಿಕ್ಕಬಳ್ಳಾಪುರದಲ್ಲಿ ಉದ್ಘಾಟಿಸಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಂತೆಯೇ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿಯೂ ಈ ಕಾರ್ಯಕ್ರಮವನ್ನು ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿಗಳ ಉಪಸ್ಥಿತಿಯಲ್ಲಿ ಏಕಕಾಲದಲ್ಲಿ ಉದ್ಘಾಟನೆಗೊಳ್ಳುತ್ತಿರುವುದು ಹರ್ಷದ ಸಂಗತಿಯಾಗಿದೆ ಎಂದರು.
ಕೃಷಿ ದಾಖಲೆಗಳಲ್ಲಿ ರೈತರು ಬೆಳೆದಿರುವ ಹಾಗೂ ವಾಸ್ತವದಲ್ಲಿರುವ ಬೆಳೆಯನ್ನು ಖಚಿತಪಡಿಸಿಕೊಂಡು ಅಧಿಕಾರಿಗಳು ದಾಖಲಿಸಬೇಕು. ಇದರಿಂದಾಗಿ ರೈತರು ಬ್ಯಾಂಕುಗಳಿಂದ ಪಡೆಯುವ ಸಾಲಸೌಲಭ್ಯ ಮತ್ತಿತರ ಯೋಜನೆಗಳ ಲಾಭ ಪಡೆಯಲು ಅನುಕೂಲವಾಗಲಿದೆ ಎಂದರು.
ಮುಂದಿನ ತಿಂಗಳಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಈ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಲು ಉದ್ದೇಶಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಗ್ರಾಮದ ಸರ್ವರೂ ಭಾಗ್ಯವಂತರು. ಪ್ರಧಾನಿಯವರು ಗ್ರಾಮಕ್ಕೆ ಭೇಟಿ ನೀಡುವ ದಿನದಂದು ಗ್ರಾಮವನ್ನು ಸಿಂಗರಿಸಿ, ಗೌರವಪೂರ್ವಕವಾಗಿ ಸ್ವಾಗತಿಸಲು ಸಜ್ಜಾಗುವಂತೆ ಕರೆನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅವರು ಮಾತನಾಡಿ, ಕಂದಾಯ ಇಲಾಖೆಯಿಂದ ದಾಖಲೆಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿಲ್ಲ. ಬದಲಾಗಿದೆ ತಾವಿರುವಲ್ಲಿಯೇ ದಾಖಲೆಗಳು ಲಭ್ಯವಾಗಲಿವೆ. ಈ ಯೋಜನೆಯ ಅನುಷ್ಠಾನದಿಂದಾಗಿ ರೈತರ ಸಮಯ, ಹಣ, ಅಲೆದಾಟ ತಪ್ಪಲಿದೆ ಎಂದರು.
ಈ ಯೋಜನೆಯ ಪರಿಕಲ್ಪನೆಯೇ ಅತ್ಯಪರೂಪ ಹಾಗೂ ಐತಿಹಾಸಿಕವಾದುದಾಗಿದೆ ಎಂದ ಅವರು ದೇಶದ ಶೇ.40ರಷ್ಟು ಮಂದಿ ಶೂನ್ಯ ಠೇವಣಿಯೊಂದಿಗೆ ಆರಂಭಿಸಿದ ಜನ್‍ಧನ್ ಖಾತೆಯ ಮಹತ್ವ ಜನರಿಗೆ ಅರ್ಥವಾಗುತ್ತಿದೆ. ಯಾವುದೇ ಮದ್ಯವರ್ತಿಗಳ ಸಹಕಾರವಿಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಹಾಗೂ ಸಹಾಯಧನ ಪಡೆಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ|| ಸೆಲ್ವಮಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತರಿಗೆ ದಾಖಲೆಗಳನ್ನು ಒದಗಿಸುವ ಕಾರ್ಯ ಇಂದಿನಿಂದ ಮುಂದಿನ ಮೂರು ದಿನಗಳೊಳಗಾಗಿ ಪೂರ್ಣಗೊಳ್ಳಲಿದೆ. ಪ್ರಸ್ತುತ ಮುದ್ರಣಗೊಂಡು ಬಂದಿರುವ ದಾಖಲೆಗಳನ್ನು ವಿತರಿಸಲಾಗುವುದು. ಸಮಸ್ಯಾತ್ಮಕ ದಾಖಲೆಗಳನ್ನು ಹಂತಹಂತವಾಗಿ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.
ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ವಿನೂತನ ಯೋಜನೆಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ವಾಸ್ತವ್ಯವಿದ್ದು, ಅಲ್ಲಿನ ಸ್ಥಿತಿಗತಿಗಳನ್ನು ಅರಿತು ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸಲಿದ್ದಾರೆ. 60ವರ್ಷ ಮೇಲ್ಪಟ್ಟ ಅರ್ಹರಿಗೆ ಅರ್ಜಿ ಸಲ್ಲಿಸದೇ ಅಧಿಕಾರಿಗಳೇ ಮನೆ ಬಾಗಿಲಿಗೆ ತೆರಳಿ ದಾಖಲೆ ಪರಿಶೀಲಿಸಿ ನೇರವಾಗಿ ಪಿಂಚಣಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಿದ್ದಾರೆ. ಮದ್ಯಮ ವರ್ಗದವರು ಪ್ಲ್ಯಾಟ್ ಕೊಳ್ಳಲು ಅನುಕೂಲವಾಗುವಂತೆ ಸರ್ಕಾರ ಈ ಹಿಂದೆ ನಿಗಧಿಪಡಿಸಲಾಗಿದ್ದ ಮುದ್ರಾಂಕ ಶುಲ್ಕವನ್ನು ಶೇ.5ರಿಂದ ಶೇ03ಕ್ಕೆ ಇಳಿಸಿ ಆದೇಶ ಹೊರಡಿಸಿದೆ. ಮದ್ಯವರ್ತಿಗಳ ಹಾವಳಿ ತಪ್ಪಿಸಿ, ಕೃಷಿ ಉತ್ಪನ್ನಗಳನ್ನು ಹೆಚ್ಚಿಸುವ ಭಾಗವಾಗಿ 79ಎ ಮತ್ತು 79ಬಿ.ಕಾನೂನಿಗೆ ತಿದ್ದುಪಡಿ ತರಲಾಗಿದೆ ಹಾಗೂ ಸಹಸ್ರಾರು ಹೆಕ್ಟೇರ್ ಡೀಮ್ಡ್ ಭೂಮಿಯನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಿಂಪಡೆಯಲು ಸುಪ್ರಿಂ ಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿ, ಸಹಸ್ರಾರು ಸಂಖ್ಯೆಯ ರೈತರ ಹಿತ ಕಾಪಾಡಲು ಮುಂದಾಗಿದೆ ಎಂದರು.
ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತ ರೈತರಿಗೆ ಜಮೀನನ್ನು ಸಕ್ರಮ ಮಾಡುವುದಕ್ಕೆ ಅರ್ಜಿ ಸಲ್ಲಿಸಲು ಇನ್ನೂ ಒಂದು ವರ್ಷಗಳ ಕಾಲಾವಕಾಶ ನೀಡಲು ಕಾಯ್ದೆಗೆ ತಿದ್ದುಪಡಿ ತರುವ ಕಾರ್ಯ ಪ್ರಗತಿಯಲ್ಲಿದೆ ಎಂದವರು ನುಡಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನ್ಯಾಮತ್‍ಉಲ್ಲಾ, ಗ್ರಾಮದ ಮುಖಂಡರಾದ ಮೈಲಾರಪ್ಪ, ಮಹೇಂದ್ರ, ತಹಶೀಲ್ದಾರ್ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಸಾಂಕೇತಿಕವಾಗಿ ದಾಖಲೆಗಳನ್ನು ವಿತರಿಸಲಾಯಿತು.

error: Content is protected !!