ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯ ಗಿಣಸೆ ಗ್ರಾಮದ ರಮೇಶ್ ಜಿ ಡಿ ಇವರ ಎಮ್ಮೆಗಳು ಒಂದು ವಾರದ ಹಿಂದೆ ಕಾಡಿನಲ್ಲಿ ಮೇಯಲು ಹೋದವು ಬರುವಾಗ ನಿಗೂಢ ಕಾಯಿಲೆಯ ಲಕ್ಷಣಗಳಾದ ಹಿಂಬಾಗ, ಎದೆ ಗುಂಡಿಗೆ ಬೀಗುವಿಕೆ, ಮೇವು ತಿನ್ನದಿರುವುದು, ಇತ್ಯಾದಿಗಳನ್ನು ತೋರಿ ತೊಂದರೆಗೊಳಗಾದಾಗ, ರಿಪ್ಪನ್‍ಪೇಟೆಯ ಹಿರಿಯ ಪಶುವೈದ್ಯಾಧಿಕಾರಿ ಡಾ:ಟಿ.ವಿ.ಗಿರೀಶ್ ಇವರು ಈ ವಿಷಯವನ್ನು ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿನ ನಿಗೂಢ ಕಾಯಿಲೆಗಳ ಸಂಶೋಧನಾ ಸಂಸ್ಥೆಯ ಪ್ರಧಾನ ಸಂಶೋಧಕರು ಮುಖ್ಯಸ್ಥರಾದ ಮತ್ತು ಸಸ್ಯಜನ್ಯ ವಿಷಬಾಧೆಯ ಬಗ್ಗೆ ಕಳೆದ 20 ವರ್ಷಗಳಿಂದ ಸಂಶೋಧನೆ ಮಾಡಿದ ಡಾ:ಎನ್.ಬಿ ಶ್ರೀಧರ ಇವರಿಗೆ ತಿಳಿಸಿದಾಗ ಅವರು ರೋಗ ಪತ್ತೆಗೆ ಗ್ರಾಮಕ್ಕೆ ಬಂದು ಜಾನುವಾರುಗಳನ್ನು ತಪಾಸಣೆಗೆ ಒಳಪಡಿಸಿ, ಜಾನುವಾರುಗಳು ವಾಯುವಿಳಂಗ ಗಿಡವನ್ನು ತಿಂದು ತೊಂದರೆಗೊಳಗಾಗಿರುವ ಬಗ್ಗೆ ಖಚಿತಪಡಿಸಿದರು. ಮರಣ ಹೊಂದಿದ ಎಮ್ಮೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಮತ್ತು ತೀರಿಕೊಂಡ ಎಮ್ಮೆಗಳು ಮೇಯುವ ಸ್ಥಳ ಪರಿಶೀಲನೆ ಮಾಡಿದಾಗ ಇದು ಖಚಿತವಾಯ್ತು. ವಾಯುವಿಳಂಗ ವಿಷಬಾಧೆಯಲ್ಲಿ ಬಹು ಅಂಗ ವೈಫಲ್ಯವಾಗುವುದರಿಂದ ಅದರಲ್ಲೂ ಮುಖ್ಯವಾಗಿ ಮೂತ್ರಜನಕಾಂಗದ ವೈಫಲ್ಯದಿಂದ ಮತ್ತು ವಿಷ ಬಾಧೆಯು ಉಲ್ಬಣವಾದ ಮೇಲೆ ಮಾತ್ರ ಗೊತ್ತಾಗುವುದರಿಂದ ಚಿಕಿತ್ಸೆ ಕಷ್ಟಕರ. ರೈತರು ಅವರ ಜಾನುವಾರುಗಳು ಈ ಗಿಡವನ್ನು ಮೇಯದಂತೆ ನೋಡಿಕೊಳ್ಳುವುದು ಉತ್ತಮ ಎಂದು ಮತ್ತು ಈ ಕುರಿತು ರೈತರಲ್ಲಿ ಈ ಸಮಯದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು. ಪಶುವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ:ಪ್ರೀತಮ್, ಡಾ: ಭರತ್, ಶ್ರೀ ರವಿ ಹುಂಚದಕಟ್ಟೆ ಮತ್ತು ಶ್ರೀ ತ್ಯಾಗರಾಜ್ ಇವರು ರೋಗಪತ್ತೆಯಲ್ಲಿ ಸಹಕರಿಸಿದರು.

ಡಾ: ಕೆ ಎಮ್ ನಾಗರಾಜ್, ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶುವೈದ್ಯ ಆಸ್ಪತ್ರೆ, ಹೊಸನಗರ ಇವರು ಈ ಕುರಿತು ಶೀಘ್ರವೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು. ಕಳೆದ ವರ್ಷವೂ ಇದೇ ಸಮಯದಲ್ಲಿ ಕೊಳವಳ್ಳಿ ಗ್ರಾಮದ ಪ್ರಸನ್ನ ಮತ್ತು ಪ್ರಶಾಂತ್ ಇವರ ಎಮ್ಮೆಗಳು ಇದೇ ವಿಷಬಾಧೆಯಿಂದ ತೀರಿಕೊಂಡಿದ್ದನ್ನು ಈ ಸಮಯದಲ್ಲಿ ಸ್ಮರಿಸಬಹುದಾಗಿದೆ.

error: Content is protected !!