ಜೆ.ಎನ್.ಎನ್ ಕಾಲೇಜಿಗೆ ಮೂರು ವರ್ಷಗಳ ಅವಧಿಗೆ ಎನ್.ಬಿ.ಎ ಮಾನ್ಯತೆ ನವೀಕರಣ

ಶಿವಮೊಗ್ಗ : ನಗರದ ಪ್ರತಿಷ್ಟಿತ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಇನ್ಫಾರ್ಮೇಶನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗಗಳಿಗೆ 2025ರ ಮೂರು ವರ್ಷಗಳ ಅವಧಿಗೆ ಎನ್.ಬಿ‌.ಎ ಮಾನ್ಯತೆ ನವೀಕರಿಸಿದೆ.

ಜು.09 ರಂದು ಕಾಲೇಜಿಗೆ ಆಗಮಿಸಿದ್ದ ರಾಷ್ಟ್ರೀಯ ಮಾನ್ಯತಾ ಮಂಡಳಿಯ ತಜ್ಞರ ತಂಡ ನೀಡಿದ್ದ ವರದಿಯ ಆಧಾರದ ಮೇರೆಗೆ ಮಂಡಳಿಯು ಮೂರು ವರ್ಷಗಳ ಅವಧಿಗೆ ಮಾನ್ಯತೆಯನ್ನು ವಿಸ್ತರಿಸಿ ಸೋಮವಾರ ಸಂಜೆ ಅಧಿಕೃತವಾಗಿ ಘೋಷಿಸಿದೆ.

ವಾಷಿಂಗ್ಟನ್ ಅಕಾರ್ಡ್ ಒಪ್ಪಂದದ ಅನ್ವಯ ವಿದೇಶಗಳಲ್ಲಿ ಎಂಎಸ್ ಸೇರಿದಂತೆ ಉನ್ನತ ವಿದ್ಯಾಭ್ಯಾಸ ನಡೆಸಲು ಎನ್.ಬಿ.ಎ ಪಡೆದ ವಿದ್ಯಾಸಂಸ್ಥೆಗಳಿಂದ ಪದವಿ ಪಡೆಯುವುದು ಕಡ್ಡಾಯವಾಗಿದ್ದು, ಈ ಹಿನ್ನಲೆಯಲ್ಲಿ ಜೆ.ಎನ್.ಎನ್.ಕಾಲೇಜಿನ ಎನ್.ಬಿ.ಎ ಮಾನ್ಯತೆ ಪಡೆದ ವಿವಿಧ ವಿಭಾಗಗಳಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ನಡೆಸಲು ಉತ್ತಮ ಅವಕಾಶ ಲಭಿಸಿದಂತಾಗಿದೆ.

ಜೊತೆಯಲ್ಲಿ ಎನ್.ಬಿ‌.ಎ ಮಾನ್ಯತೆಯಿಂದಾಗಿ ಅಂತರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಕಾಲೇಜಿನ ಪ್ರತಿಯೊಂದು ತಾಂತ್ರಿಕ ಶಿಕ್ಷಣ ಅಧ್ಯಯನದಲ್ಲಿ ಉತ್ತೇಜಿಸಲು ಸಹಕಾರಿಯಾಗಲಿದೆ. ಕಂಪನಿಗಳು ತಮ್ಮ ಸಂದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಿದೆ.  ಇದರೊಂದಿಗೆ ನಾವಿನ್ಯತೆ, ಉದ್ಯಮಶೀಲತೆ ಮತ್ತು ಸಂಶೋಧನಾ ಪ್ರಕ್ರಿಯೆಗಳಿಗೆ ಕೇಂದ್ರದ ಎಂ.ಹೆಚ್.ಆರ್.ಡಿ, ಡಿ.ಎಸ್.ಟಿ ಹಾಗೂ ರಾಜ್ಯ ಸರ್ಕಾರದ ವಿವಿಧ ಅನುದಾನಗಳನ್ನು ಪಡೆಯಲು ಅನುವು ಮಾಡಿಕೊಡಲಿದೆ. ನಿರಂತರ ಕಲಿಕೆ, ಗುಣಮಟ್ಟದ ಸುಧಾರಣೆ, ನಾವಿನ್ಯ ಯೋಚನೆಗಳ ಮೂಲಕ ಸಾರ್ವಜನಿಕವಾಗಿ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸಲು ಸಹಕಾರಿಯಾಗಿದೆ.

ಇಂತಹ ಅಭೂತಪೂರ್ವ ಸಾಧನೆಗಾಗಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಮಂಡಳಿ ಅಭಿನಂದನೆಯನ್ನು ಸಲ್ಲಿಸಿದೆ‌.


ಏನಿದು ಎನ್.ಬಿ.ಎ ಮಾನ್ಯತೆ ? :ಭಾರತ ಸರ್ಕಾರದ ಎಐಸಿಟಿ ಸ್ಥಾಪಿಸಿದ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಸ್ವಾತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ತಾಂತ್ರಿಕ ಶಿಕ್ಷಣ, ಫಾರ್ಮಸಿ, ಆರ್ಕಿಟೆಕ್ಚರ್, ಹೋಟೆಲ್ ಮ್ಯಾನೇಜ್ಮೆಂಟ್ ವಿಷಯಗಳನ್ನು ನಡೆಸುತ್ತಿರುವ ವಿದ್ಯಾಸಂಸ್ಥೆಗಳ ಧ್ಯೇಯ ಉದ್ದೇಶಗಳು, ಆಡಳಿತ, ಮೂಲಸೌಕರ್ಯ, ಬೋಧನೆ ಮತ್ತು ಕಲಿಕಾ ಗುಣಮಟ್ಟ, ಪಠ್ಯಕ್ರಮ ವಿನ್ಯಾಸ, ನಾವಿನ್ಯತೆ ಮತ್ತು ಸಂಶೋಧನಾ ಕಾರ್ಯಚಟುವಟಿಕೆಗಳ ಮೌಲ್ಯಮಾಪನ ನಡೆಸಿ ಮಂಡಳಿಯು ಮಾನ್ಯತೆಯನ್ನು ನೀಡುತ್ತದೆ. ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಯು ಅಂತರಾಷ್ಟ್ರೀಯ ಮಾನದಂಡಗಳೊಂದಿಗೆ ಉನ್ನತ ಗುಣಮಟ್ಟದ ಶಿಕ್ಷಣ ‌ನೀಡುತ್ತದೆ. ಅಂತಹ ಸಂಸ್ಥೆಗಳಿಂದ ಪದವಿ ಪಡೆದ ವಿದ್ಯಾರ್ಥಿಗಳಿಗೆ ಕಂಪನಿಗಳು ಹೆಚ್ಚು ಪ್ರಾಮುಖ್ಯತೆ ನೀಡಲಿದೆ. ಮಾನ್ಯತೆ ಪಡೆದ ಸಂಸ್ಥೆಗಳು ನಿರಂತರ ಕಲಿಕೆ, ಗುಣಮಟ್ಟದ ಸುಧಾರಣೆ, ನಾವಿನ್ಯ ಯೋಚನೆಗಳ ಮೂಲಕ ಸಾರ್ವಜನಿಕವಾಗಿ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತದೆ.

error: Content is protected !!