ಮತದಾನ ಅತ್ಯಂತ ಮಹತ್ವವಾದ ಹಕ್ಕು : ನ್ಯಾ.ಮಲ್ಲಿಕಾರ್ಜುನ ಗೌಡ
ಶಿವಮೊಗ್ಗ ಜನವರಿ 25 : ಮತದಾನದ ಹಕ್ಕು ಅತ್ಯಂತ ಮಹತ್ವದ ಹಕ್ಕಾಗಿದ್ದು, ಸೂಕ್ತವಾದ ವ್ಯಕ್ತಿಗೆ ಮತವನ್ನು ದಾನ ಮಾಡುವ ಮೂಲಕ ಉತ್ತಮ ನಾಯಕರನ್ನು ಆರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯಪೂರ್ವದಲ್ಲಿ ಗುಲಾಮರಂತೆ ಇದ್ದ ನಮಗೆ ಸ್ವಾತಂತ್ರ್ಯಾನಂತರ ನಮ್ಮದೇ ಆದ ಸಂವಿಧಾನ ರಚಿಸಿ, ನಮ್ಮ ನಾಯಕರನ್ನು ಆರಿಸಲು ಮತದಾನದ ಹಕ್ಕನ್ನು ನೀಡಲಾಯಿತು. ಈ ಮತದಾನದ ಹಕ್ಕು ಅತ್ಯಂತ ಮಹತ್ವವಾದ ಹಕ್ಕು. ದಾನ ಎಂದರೆ ಯಾವುದೇ ಅಪೇಕ್ಷೆ ಇಲ್ಲದೆ ಪಾತ್ರರಿಗೆ ನೀಡುವುದು. ದಾನ ಅಪಾತ್ರರಿಗೆ ನೀಡಬಾರದು. ಹೀಗೆ ನೀಡಿದರೆ ಪಾಪ ಬರುತ್ತದೆ. ಪಾತ್ರರಿಗೆ ದಾನ ನೀಡಿದಲ್ಲಿ ಮಾತ್ರ ಪುಣ್ಯ ಬರುತ್ತದೆ. ಆದರೆ ಮತವನ್ನು ಮಾರಾಟ ಮಾಡುವ ಸ್ಥಿತಿ ಬಂದಿರುವುದು ದುರಂತ ಎಂದು ಖೇದ ವ್ಯಕ್ತಪಡಿಸಿದರು.
ನಾವು ಎಂತಹ ವ್ಯಕ್ತಿಗೆ ನಮ್ಮ ಅಮೂಲ್ಯವಾದ ಮತವನ್ನು ನೀಡುತ್ತಿದ್ದೇವೆ ಎಂದು ಎಲ್ಲರೂ ಯೋಚಿಸಬೇಕು. ನಮ್ಮನ್ನೆಲ್ಲ ಶಾಂತಿ-ಸುವ್ಯವಸ್ಥೆಯಿಂದ ಒಗ್ಗೂಡಿಸಿಕೊಂಡು ಹೋಗುವ, ದಕ್ಷ ಆಡಳಿತಗಾರನಾಗುವ ಗುಣವುಳ್ಳ ಅಭ್ಯರ್ಥಿಗೆ ನಮ್ಮ ಮತವನ್ನು ನೀಡಬೇಕು. ಯುವಜನತೆ ಈ ಬಗ್ಗೆ ವಿವೇಚನೆಯಿಂದ ಮತ ಚಲಾಯಿಸಬೇಕು. ನಾವು ಉತ್ತಿದ್ದನ್ನೇ ಬೆಳೆಯುತ್ತೇವೆ ಹಾಗೂ ಕೊಟ್ಟ ಮತವನ್ನು ವಾಪಸ್ ಪಡೆಯಲು ಅವಕಾಶವಿಲ್ಲ ಹಾಗಾಗಿ ಉತ್ತಮ ವ್ಯಕ್ತಿಗೆ ಮತ ನೀಡಬೇಕು. ಹಾಗೂ ಎಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಮಾತನಾಡಿ, ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಮೈಲಿಗಲ್ಲಾಗಿದ್ದು, ಎಲ್ಲ ಅರ್ಹ ಮತದಾರರು ಸ್ಥಳೀಯ, ವಿಧಾನಸಭಾ, ಲೋಕಸಭೆ, ಪರಿಷತ್ ಹೀಗೆ ಎಲ್ಲ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ನಾವು ದಕ್ಷ ಆಡಳಿತಗಾರರನ್ನು ಆರಿಸಲು ಸಾಧ್ಯ.
ಸಾಕ್ಷರರೇ ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು ಮತದಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ನಾನು ಎಲ್ಲ ಯುವ ಮತದಾರರಲ್ಲಿ ಕೋರುತ್ತೇನೆ ಏನೆಂದರೆ, 18 ವರ್ಷ ತುಂಬಿದ ಎಲ್ಲ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಈಗ ಸುಲಭವಾಗಿ ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆ ಮಾಡಬಹುದು. ಕೇವಲ ಜನ್ಮದಿನಾಂಕ, ವಿಳಾಸದ ದೃಢೀಕರಣ ಮತ್ತು ಫೋಟೊ ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಲು ನಮೂನೆ-6, ಮರಣ, ಸ್ಥಳಾಂತ, ಪುನರಾವರ್ತನೆಯ ಕಾರಣಕ್ಕೆ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ವಿಳಾಸ, ವರ್ಗಾವಣೆ, ಬದಲಿ ಎಪಿಕ್ ಇತರೆ ತಿದ್ದುಪಡಿಗಾಗಿ ನಮೂನೆ-8 ರಲ್ಲಿ ಅರ್ಜಿ ನೀಡಿ ಆ್ಯಪ್‍ನಲ್ಲೇ ಸರಿಪಡಿಸುವ ಅವಕಾಶ ಇದೆ. ಯುವಜನತೆ ಇದರ ಉಪಯೋಗ ಮಾಡಿಕೊಂಡು ಇತರರಿಗೂ ತಿಳಿಸಿಕೊಡಬೇಕು ಎಂದು ತಿಳಿಸಿದ ಅವರು ಪ್ರತಿ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವ ಹಾಗೂ ಚುನಾವಣೆ ಕುರಿತು ಜಾಗೃತಿ ಮೂಡಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಟಗೊಳಿಸೋಣ ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ರಾಷ್ಟ್ರೀಯ ಮತದಾನ ದಿನಾಚರಣೆ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ಸ್ವಾತಂತ್ರ್ಯ ಲಭಿಸಿದಾಗ ನಮ್ಮ ರಾಷ್ಟ್ರದಲ್ಲಿ ಕೇವಲ ಶೇ.15 ರಿಂದ 20 ಸಾಕ್ಷರತೆ ಇತ್ತು, ಇದೀಗೆ ಶೇ.74 ರಷ್ಟು ಸಾಕ್ಷರತೆ ಇದೆ. ಸಾಕ್ಷರತೆ ಇನ್ನೂ ಹೆಚ್ಚುತ್ತಿದೆ. ಆದರೂ ಪೂರ್ಣ ಪ್ರಮಾಣದಲ್ಲಿ ಮತದಾನ ಆಗುತ್ತಿಲ್ಲ. ಶೇ.60 ರಿಂದ 70 ಮಾತ್ರ ಮತದಾನ ಆಗುತ್ತಿದ್ದು, ನಾವೆಲ್ಲ ನಮ್ಮ ಸಾಂವಿಧಾನಿಕ ಹಕ್ಕಾದ ಮತದಾನದ ಹಕ್ಕನ್ನು ಚಲಾಯಿಸಿ ಸಕ್ರಿಯವಾಗಿ ಚುನಾವಣೆಗಳಲ್ಲಿ ಭಾಗವಹಿಸಬೇಕೆಂದರು.
ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಕೆ, ಶಿವಮೊಗ್ಗ ಉಪವಿಭಾಗಾಧಿಕಾರಿ ಹೆಚ್.ಬಿ.ಚನ್ನಪ್ಪ, ತಹಶೀಲ್ದಾರ್ ಗ್ರೇಡ್-2 ಗಣೇಶ್, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
(ಫೋಟೊ ಇದೆ)