ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಅದರಲ್ಲಿ ಜಿಲ್ಲಾಪಂಚಾಯತ್ ವತಿಯಿಂದ ರೂಪಿಸಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿ ಹಳ್ಳಿಯ ಮಹಿಳೆಯರು ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ತಮ್ಮ ಬದುಕನ್ನು ಉನ್ನತೀಕರಣಗೊಳಿಸಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹಾರ್ನಹಳ್ಳಿ ಒಂದು ಪುಟ್ಟ ಗ್ರಾಮ. ಇಲ್ಲಿಯ ಮಹಿಳೆಯರು ಕುಂಭೇಶ್ವರಿ ಮಹಿಳಾ ಸಂಘವನ್ನು ರಚಿಸಿಕೊಂಡು ಶಿವಮೊಗ್ಗ ಜಿಲ್ಲಾ ಪಂಚಾಯತ್‍ನ ಸಹಕಾರದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಅಡಿ ಅನುದಾನ ಪಡೆದು ರೊಟ್ಟಿ ಮಾಡುವ ಯಂತ್ರ ತಂದು ರೊಟ್ಟಿ ತಯಾರಿಸಿ ಮಾರುತ್ತಿದ್ದಾರೆ. ಇವರೆಲ್ಲಾ ರೈತಾಪಿ ಕುಟುಂಬದವರು. ತಾವೇ ಬೆಳೆದ ಜೋಳ, ರಾಗಿ, ಅಕ್ಕಿಯ ಹಿಟ್ಟಿನಲ್ಲಿ ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರದ ಯೋಜನೆ ಅಡಿ ತೆಗೆದುಕೊಂಡಿರುವ ಯಂತ್ರ ಕ್ಷಣದಲ್ಲೇ ರೊಟ್ಟಿಯನ್ನು ತಯಾರಿಸಿಕೊಡುತ್ತದೆ. ಹಿಟ್ಟು ರುಬ್ಬುವುದರಿಂದ ಹಿಡಿದು ರೊಟ್ಟಿ ತಯಾರಾಗಿ ಹೊರಬರುವವರೆಗೂ ಎಲ್ಲವನ್ನೂ ಯಂತ್ರವೇ ಮಾಡಿಬಿಡುತ್ತದೆ. ಇವರು ತಯಾರಿಸಿದ ರೊಟ್ಟಿಗೆ ಜನಪ್ರಿಯತೆ ಹೆಚ್ಚುತ್ತಿದೆ. ಅದಕ್ಕೆ ತಕ್ಕದಾದ ವಿವಿಧ ನಮೂನೆಯ ಚಟ್ನಿಪುಡಿಗಳು ರೊಟ್ಟಿಯ ಮಾರಾಟಕ್ಕೆ ಸಹಕಾರಿಯಾಗಿವೆ. ಗುಂಪಿನ ಮುಖ್ಯಸ್ಥೆ ಪವಿತ್ರ ಸಾಲ ಪಡೆದಿದ್ದಾರೆ. ಇವರ ಕಾಯಕಕ್ಕೆ ಪತಿ ಶಿವಪ್ಪ ಕೂಡ ಸಾಥ್ ನೀಡಿದ್ದಾರೆ.
ಸುನಿತಾ ಹಾರ್ನಹಳ್ಳಿ, ರಾಷ್ಟ್ರೀಯ ಜೀವನೋಪಾಯ ಯೋಜನೆ ಮೇಲ್ವಿಚಾರಕಿ: ಹಾರ್ನಹಳ್ಳಿಯಲ್ಲಿ ಮಹಿಳಾ ಸಂಘಟನೆ ಕೇಂದ್ರ ಸರ್ಕಾರದ ಯೋಜನೆ ಅಡಿ ಸಾಲ ಪಡೆದು ವಿವಿಧ ಧಾನ್ಯಗಳ ಹಿಟ್ಟಿನಲ್ಲಿ ರೊಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಬಹು ಬೇಡಿಕೆಯೂ ನಿರ್ಮಾಣವಾಗಿದೆ. ಇವರ ಪ್ರಯತ್ನ ಮೆಚ್ಚುವಂಥದ್ದು.
ಪವಿತ್ರ, ಗುಂಪಿನ ಮುಖ್ಯಸ್ಥೆ: ನಾವು ಸರ್ಕಾರದ ಯೋಜನೆಯಲ್ಲಿ ರೊಟ್ಟಿ ತಯಾರಿಸಿ ಮದುವೆ ಮನೆ, ವಿವಿಧ ಹೋಟೆಲ್‍ಗಳು, ಖಾನಾವಳಿಗಳಿಗೆ ಮಾರಾಟ ಮಾಡುತ್ತಿದ್ದೇವೆ. ಗುಂಪು ಸಂಘಟನೆಗೆ ಸರ್ಕಾರ ಸಾಲ ನೀಡಿ ಸಹಕರಿಸಿದೆ. ಇದರಿಂದ ಜೀವನಕ್ಕೆ ಅನುಕೂಲವಾಗಿದೆ.
ಪ್ರೀತಿ, ಹಾರ್ನಹಳ್ಳಿ: ನಮ್ಮೂರಿನ ಹೆಣ್ಣುಮಕ್ಕಳು ಜೀವನ ನಿರ್ವಹಣೆಗೆ ಗುಂಪಾಗಿ ಸೇರಿಕೊಂಡು ರೊಟ್ಟಿ ತಯಾರಿಸುವ ಯಂತ್ರವನ್ನು ಅನುದಾನದಲ್ಲಿ ಪಡೆದು ಕೆಲಸ ಮಾಡುತ್ತಿದ್ದಾರೆ. ನಾನೂ ಕೂಡ ಇವರಿಗೆ ಸಹಕಾರ ನೀಡುತ್ತಿದ್ದೇನೆ. ಇಂತಹ ಯೋಜನೆಗಳು ಹೆಚ್ಚಾಗಿ ರೂಪಿತಗೊಳ್ಳಬೇಕು.
ರತ್ನಮ್ಮ, ಹಿರಿಯ ಸದಸ್ಯೆ: ನಮ್ಮ ಮಹಿಳಾ ಗುಂಪಿನಲ್ಲಿ ಎಲ್ಲಾ ವಯೋಮಾನದ ಹೆಣ್ಣುಮಕ್ಕಳಿದ್ದಾರೆ. ನಾವು ತಯಾರಿಸಿದ ರೊಟ್ಟಿ ಮಲೆನಾಡು ಮತ್ತು ಬಯಲುನಾಡಿನಲ್ಲಿಯೂ ಬಹು ಬೇಡಿಕೆ ಹೊಂದಿದೆ. ಇಂತಹ ಪ್ರಯತ್ನ ಹೆಚ್ಚಾಗಿ ನಡೆಯಬೇಕು.
ಶಿವಪ್ಪ, ಹಾರ್ನಹಳ್ಳಿ: ನಮ್ಮ ಊರಿನಲ್ಲಿ ಮಹಿಳೆಯರೆಲ್ಲಾ ಸೇರಿಕೊಂಡು ರೊಟ್ಟಿ ಮಾಡುವ ಯಂತ್ರದ ಮೂಲಕ ಹೆಚ್ಚಿನ ರೊಟ್ಟಿ ತಯಾರಿಸಿ ನಗರಗಳಿಗೂ ಮಾರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ನೆರವು ನೀಡಿದೆ. ನನ್ನ ಮಡದಿ, ಮಕ್ಕಳೂ ಸಹ ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಇದೊಂದು ಅತ್ಯಂತ ಉಪಯುಕ್ತ ಯೋಜನೆ.
ನಂದಿನಿ, ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಹಿಳೆಯರು ಸರ್ಕಾರದ ಅನುದಾನ ಪಡೆದು ಜೀವನ ನಿರ್ವಹಣೆಯನ್ನು ಉನ್ನತೀಕರಣಗೊಳಿಸಿಕೊಳ್ಳುತ್ತಿದ್ದಾರೆ. ರೈತಾಪಿ ಕುಟುಂಬದ ಹೆಣ್ಣುಮಕ್ಕಳು ಈ ಯೋಜನೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳುತ್ತಿದ್ದು ಹಾರ್ನಹಳ್ಳಿಯ ಮಹಿಳಾ ಸಂಘಟನೆ ತುಂಬಾ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದು ರೊಟ್ಟಿ ತಯಾರಿಕೆಯ ಮೂಲಕ ಮಾದರಿಯಾಗಿದೆ.
ಕೇಂದ್ರ ಸರ್ಕಾರದ ಯೋಜನೆಯಲ್ಲಿ ಹೆಣ್ಣುಮಕ್ಕಳು ವಿವಿಧ ಖಾದ್ಯಗಳನ್ನೂ ತಯಾರಿಸಿ ಮಾರುಕಟ್ಟೆ ನಿರ್ಮಿಸಿಕೊಳ್ಳುವಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದು ನಗರದ ಜನರನ್ನೂ ಆಕರ್ಷಿಸುತ್ತಿದ್ದಾರೆ. ಅದರಲ್ಲಿಯೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ಮುನ್ನಡೆದಿದ್ದು ಗ್ರಾಮೀಣ ಮಹಿಳೆಯರ ದಿಟ್ಟ ನಿರ್ಧಾರ ಮತ್ತು ಹೆಜ್ಜೆ ಮಾದರಿಯಾಗಿದೆ.