ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗ, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಓಜನೆ (ಪಾಮ್ಸ್), ತೋಟಗಾರಿಕೆ ಇಲಾಖೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ, ಒಂದು ದಿನದ ರಾಜ್ಯಮಟ್ಟದ ತಾಳೆ ಬೆಳೆಯ ಕಾಯಾಗಾರವನ್ನು ದಿನಾಂಕ 08-08-2019 ರಂದು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ನವಿಲೆ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಅರಗ ಜ್ಞಾನೇಂದ್ರ, ಸನ್ಮಾನ್ಯ ಶಾಸಕರು, ತೀರ್ಥಹಳ್ಳಿ ಕ್ಷೇತ್ರ, ತೀರ್ಥಹಳ್ಳಿ ಹಾಗೂ ತಾಳೆ ಬೆಳೆಗಾರರು ಇವರು ನೆರವೇರಿಸಿ ಮಾತನಾಡುತ್ತಾ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗವು ನಮ್ಮ ಜಿಲ್ಲೆಗೆ ಅತೀ ಹತ್ತಿರ ಇದ್ದು, ಕೃಷಿ ಮಾತ್ರವಲ್ಲದೆ ತೋಟಗಾರಿಕೆ ವಿಭಾಗವನ್ನು ಒಳಗೊಂಡಿರುವುದು ಈ ಭಾಗದ ರೈತರಿಗೆ ಒಂದು ವರದಾನವೇ ಆಗಿದೆ. ಅಲ್ಲದೆ, ವಿಶ್ವವಿದ್ಯಾಲಯವು ರೈತರ ಬೇಡಿಕೆಗಳನ್ನು ಅರಿತು, ಈ ನಿಟ್ಟಿನಲ್ಲಿ ಇಂತಹ ವಿವಿಧ ಬೆಳೆಗಳ ಕುರಿತು ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ರೈತರಿಗೂ ಆಯೋಜಿಸುತ್ತಿರುವುದಕ್ಕೆ ಶ್ಲಾಘಿಸಿದರು. ಮುಂದುವರೆದು, ಯಥೇಚ್ಛವಾಗಿ ಆಹಾರಕ್ಕಾಗಿ ಉಪಯೋಗಿಸುವ ಎಣ್ಣೆಗಳಲ್ಲಿ ತಾಳೆ ಎಣ್ಣೆಯೂ ಒಂದು ಪ್ರಮುಖವಾಗಿದೆ, ಇದನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಅಭಿಪ್ರಾಯಿಸಿದರು. ಇದರಿಂದ ಸರ್ಕಾರಕ್ಕೆ ವಿದೇಶ ವಿನಿಮಯದ ನಷ್ಟ ಉಂಟಾಗುತ್ತಿದ್ದು, ರೈತರು ಹೆಚ್ಚಿನ ಆದಾಯ ತರುವಂತ ಇಂತಹ ತಾಳೆ ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದು ಕರೆ ನೀಡಿದರು. ಕೆಲವು ವರ್ಷಗಳ ಹಿಂದೆ ಅನೇಕ ರೈತರು ಬೇಡಿಕೆ ಇಲ್ಲದೆ, ಬೆಂಬಲ ಬೆಲೆ ಇಲ್ಲದೆ ತಾಳೆ ಬೆಳೆಯು ಇನ್ನೇನು ಫಲಸು ಕೊಡಬೇಕು ಎನ್ನುವ ಹಂತದಲ್ಲಿ ಕಡಿದು ಹಾಕಿದ್ದು, ತಾವು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಈ ಬೆಳೆಯನ್ನು ಬೆಳೆಯುವುದಕ್ಕೆ ಉತ್ತೇಜಿಸುವ ಸಲುವಾಗಿ ಸಂಘಗಳನ್ನು ಮಾಡಿಕೊಂಡು ಕೆಲವು ರೈತರನ್ನು ಈ ಸಂಘಗಳಲ್ಲಿ ಸದಸ್ಯರನ್ನಾಗಿಸಿಕೊಂಡು
ಬೆಳೆಯುತ್ತಿರುವುದಾಗಿ ತಿಳಿಸಿದರು. ಅಲ್ಲದೆ ಇನ್ನೂ ಹೆಚ್ಚಿನ ರೈತರು ಈ ಬೆಳೆಯನ್ನು ಬೆಳೆಯಬೇಕೆಂದು ಕರೆ ನೀಡಿದರು. ಅಲ್ಲದೆ, ಶೇಂಗಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗಳಿಗೆ ಹೋಲಿಸಿದಲ್ಲಿ ಈ ತಾಳೆ ಎಣ್ಣೆಯು ವಿಷಮುಕ್ತ ಎಣ್ಣೆ ಎಂದೇ ಹೇಳಬಹುದು. ಯಾವುದೇ ರಾಸಾಯನಿಕ ಸಿಂಪರಣೆ ಇಲ್ಲದ ಈ ತಾಳೆ ಎಣ್ಣೆ ಅಡುಗೆ ಬಳಸುವುದು ಅತ್ಯುತ್ತಮವಾದುದು. ಈ ಪಟ್ಟಿಗೆ ಕೊಬ್ಬರಿ ಎಣ್ಣೆಯೂ ಕೂಡ ಸೇರುವುದಾಗಿ ತಿಳಿಸುತ್ತಾ, ಈ ತಾಳೆ ಬೆಳೆ ಬೆಳೆಯಲು ಹೆಚ್ಚಿನ ಕೃಷಿ ಕಾರ್ಮಿಕರ ಅಗತ್ಯ ಇರುವುದಿಲ್ಲ, ಈ ಬೆಳೆಯ ಮಧ್ಯೆ ಅಂತರ ಬೆಳೆಯಾಗಿ ವಿವಿಧ ಬೆಳೆಗಳನ್ನು ಬೆಳೆಯುವುದರೊಂದಿಗೆ ರೈತರು ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಕಾಣಬಹುದೆಂದು ತಿಳಿಸುತ್ತಾ, ವಿಶ್ವವಿದ್ಯಾಲಯವು ಈ ಬೆಳೆಯನ್ನು ಬೆಳೆಯುವಂತೆ ರೈತರನ್ನು ಪ್ರೇರೇಪಿಸಲು ಹಾಗೂ ರೈತರೂ ಕೂಡ ಈ ಬೆಳೆಯನ್ನು ಬೆಳೆಯುವ ವೈಜ್ಞಾನಿಕ ಪದ್ಧತಿಗಳ ಬಗ್ಗೆ ವಿಶ್ವವಿದ್ಯಾಲಯದ ವಿಜ್ಞಾನಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಕರೆನೀಡಿದರು.
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ಗೌರವಾನ್ವಿತ ಆಡಳಿ ಮಂಡಳಿ ಸದಸ್ಯರಾದ ಶ್ರೀ ರಮೇಶ್ ಹೆಗ್ಡೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ರೈತರು ಇಂದು ಬೆಂಬಲ ಬೆಲೆ ಸಿಗದೆ ಕಂಗಾಲಾಗಿದ್ದು, ಮೊದಲು ಬೆಲೆ ನಂತರ ಬೆಳೆ ಎಂಬ ಮನೋಭಾವಕ್ಕೆ ಬಂದಿರುವುದು ಸರಿ ಎಂದು ಅಭಿಪ್ರಾಯಿಸುತ್ತಾ, ರೈತರಿಗೆ ಯಾವುದೇ ಬೆಳೆಗೆ ವೈಜ್ಞಾನಿಕ ಧಾರಣೆ ದೊರೆತಲ್ಲಿ ಮಾತ್ರ ಯಾವ ಬೆಳೆಯನ್ನಾದರೂ ನಾವು ಸಮತಲವಾಗಿ ಹರಡಬಹುದಾಗಿದೆ. ತೋಟಗಾರಿಕೆಯಲ್ಲಿ ವಿವಿಧ ಯಾಂತ್ರಿಕ ಬೇಸಾಯ ಕ್ರಮಗಳನ್ನು ಅನುಸರಿಸಲು ಉತ್ತೇಜನವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ ಯಥೇಚ್ಚವಾಗಿ ದೊರೆತಿದ್ದು, ಸಾಕಷ್ಟು ರೈತರು ಇದರ ಉಪಯೋಗವನ್ನು ಪಡೆದುಕೊಂಡಿರುತ್ತಾರೆ ಅಲ್ಲದೆ ಇನ್ನೂ ಕೂಡ ರೈತಸಮುದಾಯಕ್ಕೆ ಈ ಯಾಂತ್ರೀಕೃತ ಪದ್ಧತಿಗಳು, ಉಪಯೋಗಗಳು ತಲುಪಬೇಕಿದೆ ಎಂದು ಯೋಜನೆಗಳ ಬಗ್ಗೆ ತಮ್ಮ ಒಳ್ಳೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅದೇ ರೀತಿ ತಾಳೆ ಬೆಳೆಯನ್ನು ವೈಜ್ಞಾನಿಕವಾಗಿ ಕೈಗೊಳ್ಳಲು, ಯಾಂತ್ರೀಕೃತ ಬೇಸಾಯ ಕ್ರಮಗಳನ್ನು ಅನುಸರಿಸಲು, ಲಾಭ-ನಷ್ಟಗಳ ಲೆಕ್ಕಾಚಾರ, ಎಲ್ಲವನ್ನೂ ಪ್ರಾಯೋಗಿಕವಾಗಿ ವಿವರಿಸಲು ಈ ಯೋಜನೆಯನ್ನು ಬಾವಿಕೆರೆಯಲ್ಲಿ ಒಂದು ಪ್ರಾತ್ಯಕ್ಷಿಕೆ ತಾಕನ್ನು ಪ್ರಾರಂಭಿಸಿದ್ದು, ಈ ತಾಳೆ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ರೈತಮಿತ್ರರು ಪಡೆದುಕೊಂಡು ತಾವೂ ಲಾಭದಾಯಕ ಬೆಳೆಯಾದ ತಾಳೆಯನ್ನು ಬೆಳೆಯುವಂತೆ ಕರೆನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಐ.ಸಿ.ಎ.ಆರ್.-ಐ.ಐ.ಒ.ಪಿ.ಆರ್., ಪೆಡವಗಿ, ಆಂಧ್ರಪ್ರದೇಶ ಇದರ ನಿರ್ದೇಶಕರಾದ ಡಾ. ಆರ್. ಕೆ. ಮಾಥೂರ್‍ರವರು ಮಾತನಾಡುತ್ತಾ, ಈ ಬೆಳೆ ಬಗ್ಗೆ ತಿಳಿದುಕೊಳ್ಳಲು ಎಲ್ಲೆಡೆ ವಿಪರೀತ ಮಳೆ, ಪ್ರವಾಹ ಇದ್ದರೂ ಕೂಡ ಆಸಕ್ತಿಯಿಂದ ಈ ಕಾರ್ಯಾಗಾರಕ್ಕೆ ರೈತರು ಆಗಮಿಸಿರುವುದು ಅವರ ಆಸಕ್ತಿಯನ್ನು ಎತ್ತಿ ತೋರಿಸುತ್ತಿದೆ. ಅಲ್ಲದೆ, ತಾಳೆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಅಂದರೆ, 53 ಮತ್ತು 52 ಟನ್‍ನಷ್ಟು ಪಡೆದು 1 ಮತ್ತು 2ನೇ ಸ್ಥಾನವು ಕರ್ನಾಟಕದ ಮೈಸೂರು ಜಿಲ್ಲೆಯಿಂದ ಎನ್ನುವುದು ಹೆಮ್ಮೆಯ ಸಂಗತಿ. ರೈತರು ಇತರೆ ಆಹಾರ ಉತ್ಪನ್ನಗಳನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ. ಅದೇ ರೀತಿ ಈ ತಾಳೆ ಬೆಳೆಯೂ ಕೂಡ ಅಧಿಕ ಲಾಭ ಕೊಡುವಂತ ಬೆಳೆಯಾಗಿದ್ದು, ರೈತರು ಈ ಬೆಳೆಯ ಬೇಸಾಯದ ಕುರಿತು, ಮಾರುಕಟ್ಟೆ ಕುರಿತು ಹೆಚ್ಚಿನ ಮಾಹಿತಿ ಪಡೆದರೆ, ಈ ತಾಳೆ ಬೆಳೆಯನ್ನು ಒಂದು ಲಾಭದಾಯಕ ಬೆಳೆಯನ್ನಾಗಿ ರೈತರು ಬೆಳೆಯಬಹುದೆಂದು ತಿಳಿಸಿದರು. ಇದಕ್ಕೆ ಫಲೀಕರಣ, (ಫರ್ಟಿಗೇಷನ್) ಸೂಕ್ಷ್ಮ ನೀರಾವರಿ ಪದ್ಧತಿಗಳನ್ನು ಅನುಸರಿಸಿ, ಅತ್ಯಂತ ಕಡಿಮೆ ಕೃಷಿ ಕಾರ್ಮಿಕರು ಮತ್ತು ಅತ್ಯಂತ ಕಡಿಮೆ ಕೃಷಿ ವೆಚ್ಚದಲ್ಲಿ ಈ ಬೆಳೆಯನ್ನು ಬೆಳೆಯಬಹುದಾಗಿದೆ ಎಂದು ತಿಳಿಸಿದರು. ಈ ತಾಳೆ ಬೆಳೆಯಲ್ಲಿ ಅಂತರ ಬೆಳೆಯಾಗಿ ಒಟ್ಟು 17 ವಿವಿಧ ಬೆಳೆಗಳು ಗುರುತಿಸಲ್ಪಟ್ಟಿದ್ದು, ರೈತರಿಗೆ ಹೆಚ್ಚುವರಿ ಆದಾಯಕ್ಕೆ ಇದು ಉತ್ತಮ ಬೆಳೆಯಾಗಿದೆ ಎಂದು ತಿಳಿಸಿದರು. ಅಲ್ಲದೆ, ಈ ಬೆಳೆಯ ಬಗ್ಗೆಯೇ ಒಂದು ಮೊಬೈಲ್ ಆಪ್‍ನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಲ್ಲಿ ಈ ತಾಳೆ ಬೆಳೆ ಬೆಳೆಯುವ ಬಗ್ಗೆ, ಬೆಳೆ ನಿರ್ವಹಣೆ, ನೀರು ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ, ಬೇಸಾಯ ಪದ್ಧತಿಗಳು ಕುರಿತು ಮಾಹಿತಿಯನ್ನು ಈ ಆಪ್ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಿದರು. ಅಲ್ಲದೆ ರೈತರು ಆಂಧ್ರಪ್ರದೇಶದ ನಮ್ಮ ಕೇಂದ್ರಕ್ಕೆ ಹಾಗೂ ವಿವಿಧ ತಾಳೆ ಬೆಳೆ ರೈತರ ತಾಕುಗಳಿಗೆ ಭೇಟಿ ಮಾಡಿ ಅಲ್ಲಿ ಲಭ್ಯವಿರುವ ಮಾಹಿತಿಯನ್ನು ಪಡೆದುಕೊಂಡು ತಾಳೆ ಬೆಳೆಯನ್ನು ಒಂದು ಲಾಭದಾಯಕ ಬೆಳೆಯನ್ನಾಗಿ ಬೆಳೆಯುವಂತೆ ರೈತರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದ ಗೌರವಾನ್ವಿತ ಕುಲಪತಿಗಳಾದ ಡಾ. ಎಂ. ಕೆ. ನಾಯ್ಕ್ ಇವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಮುಂಬರುವ ದಿನಗಳಲ್ಲಿ ತಾಳೆ ಬೆಳೆಗಳ ಉತ್ತಮ ಬೇಡಿಕೆ ಮತ್ತು ಬೆಂಬಲ ಬೆಲೆ ಸಿಗುವುದೆಂದು ಅಭಿಪ್ರಾಯಿಸುತ್ತಾ, ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಮುಂದಿನ ದಿನಗಳಲ್ಲಿ ಎಣ್ಣೆಕಾಳು ಬೆಳೆಗಳ ಕ್ಷೇತ್ರವನ್ನು ವಿಸ್ತರಿಸುವುದು ಹಾಗೂ ಹೆಚ್ಚಿನ ಇಳುವರಿಗೆ ಸೂಕ್ತ ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ತಲುಪಿಸುವುದಾಗಿ ತಿಳಿಸಿದರು. ತಾಳೆ ಬೆಳೆಗೆ ರೋಗ ಮತ್ತು ಕೀಟಗಳ ಹಾವಳಿ ಕಡಿಮೆ ಇದ್ದು, ವಿವಿಧ ತಳಿಗಳಾದ ಗೋದಾವರಿ-ರತ್ನ, ಗೋಧಾವರಿ-ಸ್ವರ್ಣ, ಗೋಧಾವರಿ-ಗೋಲ್ಡ್ ಎಂಬ ಮೂರು ತಳಿಗಳು ಪೆಡವಗಿ, ಆಂಧ್ರಪ್ರದೇಶದಿಂದ ಬಿಡುಗಡೆಯಾಗಿದ್ದು, ಈ ತಳಿಗಳನ್ನು ರೈತರಿಗೆ ಪರಿಚಯಿಸಿ ತಾಳೆ ಬೆಳೆಯನ್ನು ಬೆಳೆಯುವಂತೆ ಪ್ರೇರೇಪಿಸಲಾಗುವುದು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ, ವಿವಿಧ ಅಭಿವೃದ್ಧಿ ಇಲಾಖೆಗಳು ಮತ್ತು ರೈತ ಸಂಘಗಳ ಜೊತೆ ಕೈಗೂಡಿಸುವುದಾಗಿ ಹೇಳಿದರು. ಈ ಬೆಳೆಯ ಸಂಪೂರ್ಣ ಬೇಸಾಯಕ್ರಮದಿಂದ ಮಾರುಕಟ್ಟೆಯವರೆಗೂ ಮಾಹಿತಿ ನೀಡಲು ಬಾವಿಕೆರೆ, ತರೀಕೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 25 ಎಕರೆ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ತಾಕನ್ನು ಪ್ರಾರಂಭಿಸಿದ್ದು, ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ನೀಡಲು ಅನುಕೂಲಕರವಾಗುವುದೆಂದು ತಿಳಿಸಿದರು. ಮುಂದುವರೆದು ದೇಶೀ ತಳಿಗಳನ್ನು ಅಭಿವೃದ್ಧಿ ಪಡಿಸಲು ಐ.ಸಿ.ಎ.ಆರ್.-ಐ.ಐ.ಒ.ಪಿ.ಆರ್.ನ ನಿರ್ದೇಶಕರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಗುರುಮೂರ್ತಿ, ಸಂಶೋಧನಾ ನಿರ್ದೇಸಕರು, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ಡಾ. ಹೆಚ್.ಆರ್.ಯೋಗೀಶ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಶಿವಮೊಗ್ಗ ಇವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಬಿ.ಎನ್. ರಾವ್, ಪ್ರಧಾನ ವಿಜ್ಞಾನಿ, ಐ.ಸಿ.ಎ.ಆರ್.-ಐ.ಐ.ಒ.ಪಿ.ಆರ್., ಪಡೆವಗಿ, ಆಂಧ್ರಪ್ರದೇಶ ಮತ್ತು ಡಾ. ನಾಗರಾಜಪ್ಪ ಅಡಿವಪ್ಪರ್, ಸಹಾಯಕ ಪ್ರಾಧ್ಯಾಪಕರು (ತೋಟಗಾರಿಕೆ), ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಮತ್ತು ಮುಖ್ಯಸ್ಥರು, ಅಖಿಲ ಭಾರತ ಸುಸಂಘಟಿತ ಪ್ರಾಯೋಜೆನ (ಪಾಮ್ಸ್) ಇವರು ತಾಂತ್ರಿಕ ಕಾರ್ಯಾಗಾರದಲ್ಲಿ ತಾಳೆ ಬೆಳೆಯ ಬೇಸಾಯ, ಸೂಕ್ಷ್ಮ ನೀರಾವರಿ, ಫಲೀಕರಣ ಪದ್ಧತಿಗಳು, ಫಲೀಕರಣದ ಅನುಕೂಲ ಮತ್ತು ಅನಾನುಕೂಲಗಳು, ಫಲೀಕರಣಕ್ಕೆ ಸೂಕ್ತವಾದ ರಸಗೊಬ್ಬರಗಳ ಗುಣಲಕ್ಷಣಗಳು, ಫಲೀಕರಣಕ್ಕೆ ರಸಗೊಬ್ಬರಗಳ ಸೂಕ್ತತೆ, ಫಲೀಕರಣಕ್ಕೆ ರಸಗೊಬ್ಬರ ದ್ರಾವಣವನ್ನು ತಯಾರಿಸುವುದು, ಫಲೀಕರಣ ಪದ್ಧತಿಯ ನಿರ್ವಹಣೆ, ಫಲೀಕರಣ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಫಲೀಕರಣದ ಶಿಫಾರಸ್ಸು, ತಾಳೆ ಬೆಳೆ ಬೇಸಾಯ ಕ್ರಮಗಳು, ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ಅಲ್ಲದೆ, ಕೊನೆಯಲ್ಲಿ ರೈತ-ವಿಜ್ಞಾನಿಗಳ ಚರ್ಚಾಗೋಷ್ಠಿಯಲ್ಲಿ ತಾಳೆ ಬೆಳೆ, ತಳಿಗಳು, ಬೇಸಾಯ ಕ್ರಮಗಳು, ಮಾರುಕಟ್ಟೆ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಒಟ್ಟು 180ಕ್ಕೂ ರೈತರು ವಿವಿಧ ಜಿಲ್ಲೆಗಳಿಂದ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.