“ರಾಗಿ ತಿಂದವನಿಗೆ ರೋಗವಿಲ್ಲ” ಮತ್ತು “ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ” ಎನ್ನುವ ಗಾದೆ ನಮ್ಮಲ್ಲಿ ಪ್ರಚಲಿತದಲ್ಲಿ ಇರುವುದು ಎಲ್ಲರಿಗೂ ತಿಳಿದ ವಿಷಯ. ರಾಗಿಯ ಕಾಳು ಉಳಿದ ಆಹಾರ ಧಾನ್ಯಗಳಿಗಿಂತ ಸಣ್ಣ ಮತ್ತು ಗಟ್ಟಿ. ಒಂದು ಗ್ರಾಂ ತೂಕದಲ್ಲಿ ಸುಮಾರು 300-450 ಕಾಳುಗಳಿರಬಹುದು. ರಾಗಿ ಕಾಳು ಬಿಳಿ ಅಥವಾ ಕೆಂಪಿನಿಂದ ಕಂದು ಬಣ್ಣಕ್ಕಿದ್ದು, ಶೇಕಡಾ 7-8 ರಷ್ಟು ಪ್ರೋಟೀನನ್ನು ಹೊಂದಿದೆ. ರಾಗಿ ಮಧುಮೇಹ (Diabetes) ರೋಗದಿಂದ ಬಳಲುವವರಿಗೆ ಮತ್ತು ಅತಿ ಹೆಚ್ಚು ತೂಕದ (Obesity) ವ್ಯಕ್ತಿಗಳಿಗೆ ಸಮಂಜಸವಾದ ಆಹಾರ. ರಾಗಿಯಲ್ಲಿರುವ ನಾರಿನಾಂಶ ಆಹಾರದಲ್ಲಿರುವ ಕೊಲೆಸ್ಟಾರ್‍ಲ್‍ಲಿನ ದೇಹಗಾತವಾಗುವುದನ್ನು ಕಡಿಮೆಗೊಳಿಸುವುದರಿಂದ ರಕ್ತದಲ್ಲಿನ ಕೊಲೆಸ್ಟಾರ್ ಪ್ರಮಾಣ ಕಡಿಮೆಯಾಗಿ ವ್ಯಕ್ತಿಯು ಆರೋಗ್ಯವಾಗಿರುತ್ತದೆ.
ರಾಗಿಯಲ್ಲಿನ ಪ್ರೋಟಿನ್ ಅಂಶ ಅಕ್ಕಿಯ ಪ್ರೋಟೀನ್‍ನಿನ ಅಂಶಕ್ಕೆ ಸರಿ ಸಮಾನವಾಗಿದೆ. ಆದರೆ ರಾಗಿಯ ಪ್ರೋಟೀನ್ ಗಂಧಾಂಶಗಳುಳ್ಳ ಆಮೈನೊ ಆಸಿಡ್ಸ್‍ಗಳಲ್ಲಿ ಸಂಪತ್ ಭರಿತವಾಗಿದೆ. ಈ ವಿಷಯದಲ್ಲಿ ರಾಗಿಯ ಪ್ರೋಟೀನ್ ಹಾಲಿನ ಪ್ರೋಟೀನ್‍ಗೆ ಸಮವಾಗಿದೆ. ಮಕ್ಕಳ ಬೆಳವಣಿಗೆಗೆ ಈ ಗುಣಾಂಶವುಳ್ಳ ಪ್ರೋಟೀನ್ ಅತ್ಯವಶ್ಯಕ. ಬಹುಶ: ಇದನ್ನರಿತ ಅನುಭವಿಗಳು ಅನಾಧಿಕಾಲದಿಂದಲೂ ರಾಗಿಯನ್ನು ಶಿಶು ಆಹಾರವನ್ನಾಗಿ ಬಳಸುತ್ತಿದ್ದರು. ರಾಗಿಯ ಪ್ರೋಟೀನ್ ಗುಣಧರ್ಮ ಬೇರೆ ಒರಟು ಧಾನ್ಯಗಳ ಪ್ರೋಟೀನ್‍ಗಳಿಗಿಂತ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಮತ್ತು ರಾಗಿ ಪ್ರೋಟೀನ್‍ಭರಿತ ಆಹಾರಗಳಾದ ಬೆಳೆಕಾಳುಗಳು, ಸೋಯಬೀನ್, ಕಡ್ಲೆಕಾಯಿಹಿಂಡಿ ಇತ್ಯಾದಿಗಳೊಂದಿಗೆ ಹೊಂದಾಣಿಸಿ ಉತ್ತಮ ಗುಣಮಟ್ಟದ ಆಮೈನೋ ಆಮ್ಲಗಳುಳ್ಳ ಪ್ರೋಟೀನ್‍ನನ್ನು ದೇಹಕ್ಕೆ ದೊರಕಿಸಿಕೊಡುವುದು.
ರಾಗಿಯಲ್ಲಿ ಕೊಬ್ಬಿನಾಂಶ ತೀರಾ ಕಡಿಮೆ ಇದೆ. ಇದೊಂದು ವಾರದಾನ ಅಂಶ. ಅತಿ ಸ್ವಲ್ಪ ಪ್ರಮಾಣದಲ್ಲಿದ್ದ ಈ ಕೊಬ್ಬಿನ ಅಂಶ ದೇಹಕ್ಕೆ ಅತ್ಯವಶ್ಯಕವಾದ ಪ್ಯಾಟಿ ಆಸಿಡ್ಸ್‍ಗಳನ್ನು ಪೂರೈಸುವವು. ಇದಲ್ಲದೆ ರಾಗಿಯ ಆಹಾರ ಪದಾರ್ಥಗಳು ಹೆಚ್ಚು ದಿನ ಕೆಡದಂತೆ ಉಪಯೋಗಿಸಬಹುದು. ರಾಗಿ ಕಾಳು ಲವಣಾಂಶಗಳಿಂದ ಸಮೃದ್ಧವಾಗಿದೆ. ರಾಗಿಯಲ್ಲಿ ಸುಣ್ಣದ ಅಂಶ ಬೇರೆ ಏಕದಳಧಾನ್ಯಗಳಿಗಿಂತ ಸುಮಾರು ಹತ್ತುಪಟ್ಟು ಹೆಚ್ಚಾಗಿದೆ. ರಾಗಿ ಆಧಾರಿತ ಆಹಾರಗಳು ಮಕ್ಕಳ ಬೆಳವಣಿಗೆ ಮತ್ತು ಏಲುಬುಗಳ ಸಧೃಡತೆ ಪರಿಣಾಮಕಾರಿಯಾಗುವುದರಲ್ಲಿ ಸಹಾಕಾರಿಯಾಗುವುದು. ಇದರಂತೆ ವಯಸ್ಸಾದವರಲ್ಲಿ ಕೂಡ ಎಲಬುಗಳ ಆರೋಗ್ಯ ಕಾಪಾಡಲು ರಾಗಿಯಿಂದ ತಯಾರಿಸಿದ ವಿವಿಧ ಆಹಾರಗಳು ಉಪಯೋಗವಾಗುವವು.
ರಾಗಿಯಲ್ಲಿ ಜೀವಸತ್ವಗಳ ಅಂಶವು ಸುಮಾರಾಗಿ ಹೆಚ್ಚಿನ ಪ್ರಮಾಣದಲ್ಲಿ ಇವೆ. ರಾಗಿಯಲ್ಲಿರುವ ಸೂಕ್ಷ್ಮ ಲವಣಾಂಶಗಳು ಮತ್ತು ಜೀವಸತ್ವಗಳು ಮಾನವನ ದೇಹದ ಬಹುತೇಕ ಜೀವ ರಾಸಾಯನಿಕ ಕ್ರಿಯೆಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಿ ಕಿಣ್ವಗಳ ಹಾಗೂ ನಿರ್ಣಾಳ ಗ್ರಂಥಿಗಳ ಕ್ರಿಯೆ ಸುಗವiವಾಗಿ ಸಾಗಲು ಅನುಕೂಲವಾಗಿದೆ.
ಸುಧಾರಿತ ಆಹಾರಾಂಶವುಳ್ಳ ರಾಸಾಯನಿಕ ಸಾಮ್ರತೆ ರಾಗಿಯಲ್ಲಿ ಹೆಚ್ಚಾಗಿದ್ದು, ರಾಗಿ ಆಹಾರವು ಪೌಷ್ಠಿಕ ಮತ್ತು ಆರೋಗ್ಯಕರ ಆಹಾರವನ್ನಾಗಿ ಬಳಸಲು ತುಂಬಾ ಸಹಕಾರಿಯಾಗಿದೆ. ಉದಾ: ಪಾಲಿವಿನಾಲ್ಸ್ ಎಂಬ ರಾಸಾಯನಿಕಗಳು ರಾಗಿಯ ಹೊರಪದರಿನಲ್ಲಿ ಹೆಚ್ಚಾಗಿದ್ದು, ರಾಗಿ ಕಾಳು ಬಹಳ ದಿನ ಕೆಡದಂತೆ ಸಂಗ್ರಹಿಸಲು ಸಹಾಯಕಾರಿಯಾಗಿದೆ. ಇದಲ್ಲದೇ ರಾಗಿಯನ್ನು ಸದಾ ಕಾಲ ಸೇವಿಸುವುದರಲ್ಲಿ ಅಲ್ಸರ್ ಮುಂತಾದ ಅನ್ನನಾಳ ಕಾಯಿಲೆಗಳು ಬರದಂತೆ ತಡೆಯಲು ಕೂಡ ಉಪಯುಕ್ತವಾಗಿದೆ. ಇವುಗಳಿಂದಾಗಿ ರಾಗಿಯನ್ನು ನ್ಯೂಟ್ರಸುಟಿಕಲ್ಸ್ (ಔಷಧಿಯುಕ್ತ ಆಹಾರವೆಂದು) ಪರಿಗಣಿಸಬಹುದು.
ರಾಗಿ ತಿಂದವ ನಿರೋಗಿ ಎಂಬುದು ಗ್ರಾಮೀಣ ಪ್ರದೇಶದ ನುಡಿಗಟ್ಟು ರಾಗಿಯಲ್ಲಿ ಖನಿಜಲವಾಣಾಂಶ, ಸುಣ್ಣ, ಕಬ್ಬಿಣಾಂಶಗಳು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ ಮತ್ತು ಇದು ಒಳ್ಳೆಯ ಪ್ರೋಟಿನ್ ಆಹಾರವಾಗಿದ್ದು, ಸಲ್ಫರ್‍ಯುಕ್ತ ಅಮೈನೊ ಆಮ್ಲವನ್ನು ಹೊಂದಿರುತ್ತದೆ. ಅಲ್ಲದೆ ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಇರುವುದರಿಂದ ಸಕ್ಕರೆ ಖಾಯಿಲೆ ರೋಗಿಗಳಿಗೆ ವರದಾನವಾಗಿದೆ. ಅಲ್ಲದೆ ನಾರಿನಾಂಶ ಸಹ ಹೆಚ್ಚಿನಾಂಶದಲ್ಲಿರುವುದರಿಂದ ರಾಗಿ ಸೇವನೆಯು ಮಲಬದ್ಧತೆ ನಿವಾರಣೆಗೆ ಸಹಾಯಕಾರಿಯಾಗಿದೆ ಮತ್ತು ಬೊಜ್ಜಿನ ಶೇಖರಣೆಯನ್ನು ನಿವಾರಿಸುತ್ತದೆ. ರಾಗಿಯು ಸರಳವಾಗಿ ಜೀರ್ಣವಾಗುವುದರಿಂದ ಮಕ್ಕಳ ಮೇಲು ಆಹಾರ ತಯಾರಿಸಲು ಉಪಯುಕ್ತವಾದ ಧಾನ್ಯವಾಗಿದೆ. ಬೇರೆ ಧಾನ್ಯಗಳಿಗೆ ಹೋಲಿಸಿದಾಗ ರಾಗಿಯು ಅಧಿಕ ಪ್ರಮಾಣದಲ್ಲಿ ಸುಣ್ಣ ಮತ್ತು ಕಬ್ಬಿಣಾಂಶ ಹೊಂದಿರುತ್ತದೆ. ಆದ್ದರಿಂದ ಸುಣ್ಣದ ಕೊರೆತೆಯಿಂದ ಉಂಟಾಗುವ ಮೂಳೆ ಮತ್ತು ಹಲ್ಲುಗಳ ತೊಂದರೆಯನ್ನು ಹಾಗೂ ಕಬ್ಬಿಣ ಕೊರತೆಯಿಂದ ಉಂಟಾಗುವ ರಕ್ತಹೀನತೆಯನ್ನು ತಡೆಗಟ್ಟಲು ರಾಗಿ ಸೇವನೆಯಿಂದ ಸುಲಭ ಸಾಧ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ:
ಡಾ. ಜ್ಯೋತಿ ಎಂ. ರಾಠೋಡ್, ವಿಜ್ಞಾನಿ (ಗೃಹ ವಿಜ್ಞಾನ), ಕೆ.ವಿ.ಕೆ., ಶಿವಮೊಗ್ಗ , 93539 78995