
ಶಿವಮೊಗ್ಗ: ರಕ್ತದಾನವು ಜೀವ ಉಳಿಸುವ ಶ್ರೇಷ್ಠ ಕಾರ್ಯ ಆಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ವಿಶ್ವ ಸೈಕಲ್ ದಿನದ ಪ್ರಯುಕ್ತ ಶಿವಮೊಗ್ಗ ಸೈಕಲ್ ಕ್ಲಬ್, ಯೂತ್ ಹಾಸ್ಟೆಲ್ಸ್ ವತಿಯಿಂದ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಸಂಜೀವಿನಿ ರಕ್ತನಿದಿಯಲ್ಲಿ ಉದ್ಘಾಟಿಸಿ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ತುಂಬಾ ಇದ್ದು, ರಕ್ತದಾನ ಶಿಬಿರಗಳು ಹೆಚ್ಚು ಆಯೋಜನೆ ಆಗಬೇಕು. ಇದರಿಂದ ರಕ್ತದ ಪೂರೈಕೆ ಹೆಚ್ಚಿಸಲು ಸಾಧ್ಯವಿದೆ. ಅಗತ್ಯವಿರುವವರಿಗೆ ರಕ್ತದ ಲಭ್ಯತೆ ದೊರಕುತ್ತದೆ ಎಂದು ತಿಳಿಸಿದರು.
ತರುಣೋದಯ ಘಟಕ ಚಾರಣದ ಜತೆಯಲ್ಲಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸದಸ್ಯರು ರಕ್ತದಾನ ಮಾಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಕ್ತದಾನ ಪ್ರಸ್ತುತ ಸಮಯದಲ್ಲಿ ಅತ್ಯಂತ ಮುಖ್ಯ ಎಂದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಚೇರ್ಮನ್ ಎಸ್.ಎಸ್.ವಾಗೀಶ್ ಮಾತನಾಡಿ, ಶಿವಮೊಗ್ಗ ಸೈಕಲ್ ಕ್ಲಬ್ ಪ್ರಾರಂಭದಿಂದಲೂ ನಗರದಲ್ಲಿ ಅತ್ಯುತ್ತಮವಾಗಿ ಜನ ಉಪಯೋಗಿ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಹಲವಾರು ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಸೈಕಲ್ ಜಾಥಾ ಮೂಲಕ ಅರಿವು ಮೂಡಿಸುತ್ತಿದ್ದಾರೆ. ವಿಶ್ಚ ಸೈಕಲ್ ದಿನಾಚರಣೆ ಪ್ರಯುಕ್ತ ರಕ್ತದಾನ ಆಯೋಜಿಸಲಾಗಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಜಿ.ವಿಜಯಕುಮಾರ್ ಮಾತನಾಡಿ, ಸೈಕಲ್ ಕ್ಲಬ್ ಸದಸ್ಯರು ಪ್ರತಿ ವರ್ಷ ಎರಡುಬಾರಿ ರಕ್ತದಾನ ಶಿಬಿರ ಏರ್ಪಡಿಸಿ ಹಲವಾರು ರೋಗಿಗಳಿಗೆ ಅನುಕೂಲ ಮಾಡಿ ಕೊಡುತ್ತಿದ್ದಾರೆ. ಇವರ ಜನೋಪಯೋಗಿ ಕಾರ್ಯಗಳು ಎಲ್ಲರ ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.
ಸುರೇಶ್ ಕುಮಾರ್ ಸ್ವಾಗತಿಸಿದರು. ಗಿರೀಶ್ ಕಾಮತ್ ವಂದಿಸಿದರು. ಶ್ರೀಕಾಂತ್ ನಿರೂಪಿಸಿದರು.