ಶಿವಮೊಗ್ಗ: ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಜತೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಯುವಜನತೆ ಪ್ರಯತ್ನ ನಡೆಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ನೂತನ ಕಾರ್ಯಕ್ರಮ ಹ್ಯಾಪಿ ಅವರ್ಸ್ ಉದ್ಘಾಟಿಸಿ ಮಾತನಾಡಿ, ಬೇಡದ ಹವ್ಯಾಸ ಹಾಗೂ ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಧನಾತ್ಮಕ ಆಲೋಚನೆಯೊಂದಿಗೆ ಗುರಿ ಸಾಧಿಸುವ ಬಗ್ಗೆ ಆಲೋಚನೆ ನಡೆಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ, ಕಂಟ್ರಿ ಕ್ಲಬ್ ಮಾಜಿ ಅಧ್ಯಕ್ಷ ಡಿ.ಎಸ್.ಅರುಣ್ ಮಾತನಾಡಿ, ಸಂಸ್ಥೆಯ ಪ್ರಾರಂಭದಿಂದ ಸದಸ್ಯರು ಹಾಗೂ ಕುಟುಂಬದ ಎಲ್ಲರಿಗೂ ಮನರಂಜನೆ ಹಾಗೂ ಆರೋಗ್ಯದತ್ತ ಗಮನಹರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿ ವರ್ಷ ಹಾಗೂ ವರ್ಷದಾದ್ಯಂತ ಇಂತಹ ಹಲವಾರು ಆಕರ್ಷಕ ಕ್ರೀಡಾಚಟುವಟಿಕೆಗಳನ್ನು ಪರಿಚಯಿಸಿ ಯಶಸ್ವಿಯಾಗಿ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದರು.
ಮಕ್ಕಳಿಗೆ ಕ್ರೀಡೆಗೆ ವಿಶೇಷ ಸೌಲಭ್ಯ, ಆರ್ಚರಿ, ಬ್ಯಾಡ್ಮಿಂಟನ್, ಕ್ರಿಕೆಟ್, ಬಾಸ್ಕೆಟ್ ಬಾಲ್, ಟೇಬಲ್ ಟೆನ್ನಿಸ್, ಆಸಕ್ತ ವಿದ್ಯಾರ್ಥಿಗಳು ನಿಬಂಧನೆ ಪಾಲಿಸಿ ಈಜುಕೊಳದಲ್ಲಿ ವಿಹರಿಸಬಹುದು. ಹೋಂ ಥಿಯೇಟರ್‌ನಲ್ಲಿ ಶೈಕ್ಷಣಿಕ, ಮಾಹಿತಿ ಆಧಾರಿತ ಹಾಗೂ ಮನರಂಜನೆ ಕಿರು ಚಿತ್ರ ವೀಕ್ಷಿಸಬಹುದು. ಫನ್ ಗೇಮ್ಸ್, ಮ್ಯಾಜಿಕ್ ಶೋ ಸೇರಿದಂತೆ ವಿಶೇಷ ಆಕರ್ಷಣೆ ವ್ಯವಸ್ಥೆ ಇದೆ. ಸ್ವಿಮ್ಮಿಂಗ್ ಕ್ಯಾಂಪ್‌ಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಮಾಹಿತಿ ನೀಡಲಾಯಿತು.
ಕಂಟ್ರಿ ಕ್ಲಬ್ ಅಧ್ಯಕ್ಷ ಎಚ್.ಜಿ.ಅಶೋಕ್, ಕಾರ್ಯದರ್ಶಿ ಜಿ.ಎನ್.ಪ್ರಕಾಶ್, ಕ್ರೀಡಾ ಸಮಿತಿ ಮುಖ್ಯಸ್ಥ ಕುಮಾರ್.ಎಸ್.ಕೆ. ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
