ಶಿವಮೊಗ್ಗ, ಜನವರಿ 24 : : ಅತಿಥಿ-ಅಭ್ಯಾಗತರಿಗೆ ನೀಡುವ ಸಂಭ್ರಮದ ಆತಿಥ್ಯವೆಂದೇ ಪರಿಗಣಿಸಲಾಗಿರುವ ಹಾಗೂ ಸಂಭ್ರಮದ ಸಭೆ-ಸಮಾರಂಭಗಳಲ್ಲಿ ಕಣ್ಮನ ಸೆಳೆಯುವ, ಮನೆಯ ಹೊಸ್ತಿಲು ದಾಟುವ ಮುನ್ನವೇ ಶುಭಕೋರುವ, ಭೂರಮೆಯನ್ನು ಸಿಂಗರಿಸುವ ಬಹುವರ್ಣದ ರಂಗೋಲಿಗೆ ಎಲ್ಲಿಲ್ಲದ ಬೇಡಿಕೆ. ಜಾತಿ-ಮತ-ಭಾಷೆ ಬಣ್ಣಗಳ ನಿರ್ಬಂಧವಿರದ ರಂಗೋಲಿ ಪ್ರತಿ ಮನೆಯಂಗಳ ಶಾಶ್ವತ ಸಂಗಾತಿ.
ಮಲೆನಾಡಿನ ಹೆಬ್ಬಾಗಿಲೆಂದೇ ಪರಿಗಣಿಸಲಾಗಿರುವ ಶಿವಮೊಗ್ಗ ನಗರದಲ್ಲಿ ಸಹ್ಯಾದ್ರಿ ಉತ್ಸವದ ಅಂಗವಾಗಿ ಜಿಲ್ಲಾಡಳಿತವು ನಗರದ ಕುವೆಂಪು ರಂಗಮಂದಿರದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ವೈವಿಧ್ಯಮಯವೂ, ವಿಶಿಷ್ಟವೂ ಆಗಿದೆ. ಜಿಲ್ಲೆಯ ಅನೇಕ ಸ್ಪರ್ಧಿಗಳು ಈ ಕಲಾ ಪ್ರಕಾರವನ್ನು ಸಾಕ್ಷಾತ್ಕಾರಗೊಳಿಸಿ ಭಾರತೀಯ ಸಂಸ್ಕøತಿ ಸಂಪ್ರದಾಯದ ಮೆಲುಕು ಹಾಕಲು ಯತ್ನಿಸಿದ್ದಾರೆ.
ದೂರದಲ್ಲಿ ನಿಂತು ನೋಡಿದಾಗ ವರ್ಣಮಯ ರಂಗೋಲಿ ವರ್ಣಮಯ ಹಾಸಿಗೆಯಂತೆ ಭಾಸವಾಗುವ ಈ ರಂಗೋಲಿಯ ವೈವಿಧ್ಯತೆಯನ್ನು ಸಮೀಪದಿಂದಲೇ ಕಣ್ತುಂಬಿಕೊಳ್ಳಬೇಕು. ಅದರ ನೈಜತೆ ನಿಜಕ್ಕೂ ಬೆರಗುಗೊಳಿಸುವಂತಹದ್ದು. ಎಲೆಗಳನ್ನು ಸಮನಾಂತರವಾಗಿ ಎಳೆದು ಚುಕ್ಕೆಗಳನ್ನು ಸೇರಿಸಿ ಹಲವು ರೀತಿಯ ಅನೇಕ ರಂಗೋಲಿ ಚಿತ್ತಾರಗಳು ಮೈತಳೆದು ನಿಂತಿವೆ. ಇದರಲ್ಲಿ
ಹೂವು, ಮಯೂರ, ನಾಗ, ಬಳ್ಳಿ, ಎಲೆ, ಕಳಸ, ಹಂಸ ಮುಂತಾದವುಗಳನ್ನು ಆಕರ್ಷಕವಾಗಿ ಬಿಡಿಸಿ ತರಹೇವಾರಿ ಬಣ್ಣಗಳನ್ನು ತುಂಬಿ ಅಲಂಕರಿಸಿರುವ ಈ ರಂಗೋಲಿಯನ್ನು ಕಂಡಾ ಏನೋ ಪಡೆದ ಧನ್ಯತಾಭಾವ.
ಸಹ್ಯಾದ್ರಿ ಉತ್ಸವಕ್ಕಾಗಿ ಮೂಡಿ ಬಂದಿರುವ ರಂಗೋಲಿಯ ಶ್ರೀಮಂತಿಕೆ ಅದ್ಭುತವಾಗಿದೆ. ಬಣ್ಣ-ಸುಣ್ಣವನ್ನು ಬಳಸಿ ಸೃಜನಶೀಲತೆಯ ಮೂಲಕ, ಆಧುನಿಕ ಸೌಂದರ್ಯ ಸಾಧನಗಳಿಂದ ಅಲಂಕಾರ ಸಾಮಗ್ರಿಗಳಿರುವ ಈ ಕಾಲದಲ್ಲಿ ವಿಶೇಷ ಗಮನಸೆಳೆಯುವ ರಂಗೋಲಿಯ ಪ್ರಫುಲ್ಲತೆ, ಕೈಚಳಕ, ಕೌಶಲ್ಯ ಮೆಚ್ಚುವಂತದ್ದಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ವಾರ್ತಾಭವನ, ಶಿವಮೊಗ್ಗ.