ನಮ್ಮ ಹಿಂದೂ ಧರ್ಮದಲ್ಲಿರುವ ನೂರಾರು ಸಮುದಾಯಗಳ ಮೂಲ ಆಚಾರ ವಿಚಾರಗಳನ್ನು ತಮ್ಮ ತಮ್ಮ ಮಕ್ಕಳಿಗೆ ಪೋಷಕರು ಚಿಕ್ಕ ವಯಸ್ಸಿನಲ್ಲೇ ತಿಳಿ ಹೇಳುವ ಮೂಲಕ ನಮ್ಮ ಧರ್ಮವನ್ನು ಮುಂದಿನ ಪೀಳಿಗೆ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ಹೇಳಿದರು.

ಶಿವಮೊಗ್ಗ ತಾಲ್ಲೂಕು ಯಲವಟ್ಟಿ ಗ್ರಾಮದಲ್ಲಿ ಶಿವಮೊಗ್ಗದ “ಬಸವ ಕೇಂದ್ರ”ದ ವತಿಯಿಂದ “ಕಾರ್ತಿಕ ಮಾಸ”ದ ಪ್ರಯುಕ್ತ ಏರ್ಪಡಿಸಿರುವ ಒಂದು ತಿಂಗಳ ಕಾಲ ನಡೆಯುವ “ಚಿಂತನ ಕಾರ್ತಿಕ” ಕಾರ್ಯಕ್ರಮದ ಎರಡನೇ ದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅನ್ಯ ಧರ್ಮದ ಅನುಯಾಯಿಗಳು ತಮ್ಮ ಧರ್ಮದ ಮೂಲ ತತ್ವವನ್ನು ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೆ ಹೇಳಿಕೊಡುವ ಪರಿಣಾಮ ಪ್ರತಿ ಶುಕ್ರವಾರ ಹಾಗೂ ಪ್ರತಿ ಭಾನುವಾರ ತಪ್ಪದೇ ಪ್ರಾರ್ಥನಾ ಮಂದಿರಗಳಿಗೆ ತೆರಳಿ ಪ್ರಾರ್ಥಿಸುತ್ತಾರೆ ಇದರ ಪರಿಣಾಮ ಧರ್ಮದ ಮೇಲಿನ ಅವರ ಬದ್ಧತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.

ಅದೇ ರೀತಿ ಸಾವಿರಾರು ವರ್ಷಗಳ ಇತಿಹಾಸವಿರುವ “ವೀರಶೈವ-ಲಿ೦ಗಾಯತ” ಧರ್ಮದ ಮೂಲ ಆಚರಣೆಯಾದ “ಲಿಂಗಧಾರಣೆ” ಸಂಪ್ರದಾಯವನ್ನು ನಾವುಗಳು ನಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೆ ಆಚರಿಸುವಂತೆ ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು. ಆಧುನಿಕತೆಗೆ ಅತಿ ಹೆಚ್ಚು ಮಾರು ಹೋಗುತ್ತಿರುವ ಇಂದಿನ ಯುವ ಜನಾಂಗಕ್ಕೆ ನಮ್ಮ ಸಮುದಾಯದ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ಕುರಿತು ಮನದಟ್ಟು ಮಾಡಿಸಬೇಕು ಎಂದು ಕರೆ ನೀಡಿದರು.

ಈಗಿನ ಕಾಲಘಟದಲ್ಲಿ ಮೊಬೈಲ್ ಬಳಕೆಯಲ್ಲಿ ಪ್ರತಿಯೊಬ್ಬರು ಮುಂದೆ ಬಿದ್ದಿದ್ದಾರೆ. ಏನು ಅರಿಯದ ಮಕ್ಕಳ ಕೈಯಲ್ಲಿ ಪೋಷಕರು ಮೊಬೈಲ್ ಕೊಟ್ಟು ಸಂತೈಸುವುದು ಎಲ್ಲೆಡೆ ಕಂಡು ಬರುತ್ತಿದೆ. ಈ ಬೆಳವಣಿಗೆ ಮಕ್ಕಳ ಭವಿಷ್ಯಕ್ಕೆ ಹಾಗೂ ನಮ್ಮ ಸಮುದಾಯಕ್ಕೆ ಮಾರಕ ಆಗಬಹುದು ಹಾಗಾಗಿ ಪ್ರತಿಯೊಬ್ಬರು ಇದನ್ನು ತಡೆಯುವ ಪ್ರಯತ್ನ ಮಾಡಬೇಕು ಬದಲಾಗಿ ಧಾರ್ಮಿಕ ಚಿಂತನೆಗಳು ಹೆಚ್ಚೆಚ್ಚು ಬಿತ್ತಬೇಕು ಈ ಮೂಲಕ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರ ಇಡಬೇಕು ಎಂದು ಮನವಿ ಮಾಡಿದರು.

ಬಸವ ಕೇಂದ್ರದ ಹರ ಚರಮೂರ್ತಿಗಳಾದ ಡಾ|| ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ ಅವರು ಮಾತನಾಡಿ, ಶ್ರೀ ಬಸವಣ್ಣ ನವರು ಹುಟ್ಟು ಹಾಕಿದ ಧರ್ಮದಲ್ಲಿ ಜನ್ಮ ತಳೆದಿರುವ ನಾವುಗಳು ಹೆಮ್ಮೆ ಪಡಬೇಕು. ವೀರಶೈವ-ಲಿ೦ಗಾಯತ ಸಮುದಾಯದ ಪ್ರತಿಯೊಬ್ಬರೂ ತಮ್ಮ ಅಂಗದ ಮೇಲೆ ಲಿಂಗವನ್ನು ಧರಿಸಬೇಕು. “ಲಿಂಗಧಾರಣೆ” ಮಾಡುವುದು ಅವಮಾನ ಎಂದು ಕೊಳ್ಳಬಾರದು ಅದು ಗೌರವದ ಸಂಗತಿಯಾಗಬೇಕು ಹಾಗೆಯೇ ದಿನ ನಿತ್ಯದ ನಮ್ಮ ಜೀವನ ಶೈಲಿಯಲ್ಲಿ “ಇಷ್ಟಲಿಂಗ” ಮಹಾ ಪೂಜೆಯನ್ನು ಶಿರಸಾವಹಿಸಿ ಮಾಡಬೇಕು, ಅದನ್ನು ಕಷ್ಟಲಿಂಗ ಎಂದು ಭಾವಿಸಬಾರದು ಎಂದು ತಿಳಿಸಿದರು.

ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಶ್ರೀ ಶಿವಯೋಗಿ ಚನ್ನಬಸವ ಪಟ್ಟದದೇವರು ಅವರುಗಳು ಶತಾಯುಷಿಗಳಾಗಿ ಬದುಕಿ ಬಾಳಲೂ ಇಷ್ಟಲಿಂಗ ಮಹಾಪೂಜೆ ಮೂಲ ಕಾರಣವಾಗಿದ್ದು, ನಾವುಗಳು ಕೂಡ ಪರಿಪೂರ್ಣ ಹಾಗೂ ಉತ್ತಮ ಆರೋಗ್ಯ ಹೊಂದಲು ದಿನ ನಿತ್ಯ ಇಷ್ಟಲಿಂಗ ಪೂಜೆ ಮಾಡುವಂತೆ ಕರೆ ನೀಡಿದರು.

ಶಂಕರಾಚಾರ್ಯ ಅವರ ಕಾಲದಲ್ಲಿ ಧರ್ಮ ಆಚರಣೆ ವೈಯಕ್ತಿಕ ನೆಲೆ ಗಟ್ಟಿನಲ್ಲಿ ಅವರ ಇಷ್ಟಕ್ಕೆ ಅನುಸಾರ ನಡೆಯುತ್ತಿರುವುದನ್ನು ಗಮನಿಸಿ ಧರ್ಮದ ಉಳಿವಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಸಾರ್ವಜನಿಕ ಆಚರಣೆಗೆ ನಾಂದಿ ಹಾಡಿದರು. ಕಾಲ ಕ್ರಮೇಣ ಜಾತಿ ಪದ್ಧತಿಯ ಪರಿಣಾಮ ಕೆಲವರಿಗೆ ದೇವಸ್ಥಾನ ಪ್ರವೇಶ ನಿಷೇಧ ಹೇರಿದ ಪರಿಣಾಮ ರಾಮಾನುಜಚಾರ್ಯ ಅವರು ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿ ಜಾತಿ ಪದ್ಧತಿಯನ್ನು ಹೋಗಲಾಡಿಸುವ ಉದ್ದೇಶದಿಂದ ಉತ್ಸವ ಮೂರ್ತಿ ಆಚರಣೆಗೆ ಚಾಲನೆ ನೀಡಿ, ಸಮಾಜದಲ್ಲಿರುವ ಮೇಲು ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿದರು.

ಅದೇ ರೀತಿ 12ನೇ ಶತಮಾನದಲ್ಲಿ ಅವತರಿಸಿದ ಅಣ್ಣ ಬಸವಣ್ಣ ನವರು ಜಾತಿ ಪದ್ಧತಿ ಹಾಗೂ ಇನ್ನಿತರ ಮೂಢ ಆಚರಣೆಗಳನ್ನು ಗಮನಿಸಿ ಅವರವರ ದೇವರನ್ನು ಅವರ ಇಚ್ಚೆಗೆ ತಕ್ಕಂತೆ ಅವರ ಮಡಿಲಿನಲ್ಲಿ ಪೂಜಿಸುವ ಆಲೋಚನೆ ಮಾಡಿ 12 ವರ್ಷಗಳ ಕಾಲ “ಕೂಡಲ ಸಂಗಮ”ದಲ್ಲಿ ತಪಸ್ಸು ಮಾಡಿ ಸಿದ್ಧಿ ಪಡೆದು ತಾಳಿರುವ ಲಿಂಗವೇ ಇಷ್ಟಲಿಂಗವಾಗಿದ್ದು, ಇದರ ಅನುಸಾರ ಲಿ೦ಗಾಯತ ಸಮುದಾಯ ತಮ್ಮ ಅಂಗದ ಮೇಲೆ ಸದಾ ಕಾಲ ಲಿಂಗವನ್ನು ಧರಿಸಿ ಹುಟ್ಟಿನಿಂದ ಸಾವಿನವರೆಗೆ, ಸಾವಿನ ನಂತರವೂ ಲಿಂಗವನ್ನು ತಮ್ಮ ಎದೆಯ ಮೇಲೆ ಉತ್ಸವ ಮೂರ್ತಿಯಂತೆ ಪ್ರತಿಷ್ಠಾಪಿಸಿಕೊಂಡಿರುವ ವಿಶ್ವದ ಏಕೈಕ ಧರ್ಮ ಅದು ಬಸವಣ್ಣನ ಲಿ೦ಗಾಯತ ಧರ್ಮ ಎಂದು ಲಿಂಗದ ಮಹತ್ವ ಕುರಿತು ಶರಣರಲ್ಲಿ ಜಾಗೃತಿ ಮೂಡಿಸಿದರು.

ಧರ್ಮದ ಉಳಿವಿಗಾಗಿ ಅವಿರತ ಶ್ರಮಿಸಬೇಕು, ಸಮುದಾಯದ ಏಳಿಗೆಗೆ ನಾವೆಲ್ಲರೂ ಒಗ್ಗಟ್ಟಾಗಬೇಕು ವಿಶ್ವ ಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಪ್ರತಿಯೊಬ್ಬರು ದಾರ್ಶನಿಕ ಜೀವನ ತಮ್ಮದಾಗಿಸಿಕೊಳ್ಳಬೇಕು ಜೊತೆಗೆ ಸಮಾಜದ ಉನ್ನತಿಗೆ ಕಾರಣಿಭೂತರಾಗಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಯಲವಟ್ಟಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶರಣ ಪರಮೇಶ್ವರಪ್ಪ ಅವರು, ಭಾಲ್ಕಿ ಚೆನ್ನಬಸವ ಪಟ್ಟದೇವರು ಕುರಿತು ಉಪನ್ಯಾಸ ನೀಡಿದ ಶರಣ ವಿರೂಪಾಕ್ಷಪ್ಪ ಅವರು, ಕಾರ್ಯಕ್ರಮದ ಸೇವಾರ್ಥಿಗಳಾದ ಶರಣ ಈಶ್ವರಪ್ಪ, ಶರಣ ತೇಜಸ್ವಿ ಅವರು ಉಪಸ್ಥಿತರಿದ್ದರು.

error: Content is protected !!