News Next

ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ಮೊಬೈಲ್ ಹಾಗೂ ಇಂಟರ್‍ನೆಟ್ ಬಳಕೆದಾರರ ಅಗತ್ಯಕ್ಕೆ ಪೂರಕವಾಗಿ ಜಿಯೋ ಮತ್ತು ಏರ್‍ಟೆಲ್‍ನಂತಹ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಗಳ ಸಹಭಾಗಿತ್ವದಲ್ಲಿ ಟವರ್‍ಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಅವರು ಇಂದು ಖಾಸಗಿ ಟೆಲಿಕಾಂ ಕಂಪನಿಗಳ ಮುಖ್ಯಸ್ಥರು, ಆಡಳಿತಾಧಿಕಾರಿಗಳು, ಬಿ.ಎಸ್.ಎನ್.ಎಲ್.ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಮೊಬೈಲ್ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಸೇವೆ ದೊರೆಯದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಗಾಗ್ಗೆ ದೂರುಗಳು ಕೇಳಿ ಬರುತ್ತಿವೆ. ನಗರದ ಮಿತಿಯಲ್ಲಿದ್ದರೂ ಮೊಬೈಲ್ ಕಿರಿಕಿರಿ, ಅಗತ್ಯಕ್ಕಿರುವಷ್ಟು ಇಂಟರ್‍ನೆಟ್ ವೇಗ ದೊರೆಯುತ್ತಿಲ್ಲ. ಆದ್ದರಿಂದ ತರಂಗಾತರಂಗಳನ್ನು ಹೆಚ್ಚಿಸಲು ಉದ್ದೇಶಿದ್ದು, ಈಗಾಗಲೇ ಖಾಸಗಿ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಈಗಾಗಲೆ ಟವರ್‍ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವುದಾಗಿ ಅವರು ತಿಳಿಸಿದರು.
ಈಗಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 120ಟವರ್‍ಗಳ ಅಗತ್ಯವಿದ್ದು, ಕೂಡಲೇ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿ.ಎಸ್.ಎನ್.ಎಲ್. ಟವರ್ ನಿರ್ಮಾಣ ಮಾತ್ರವಲ್ಲದೇ ಜಿಯೋ ಮತ್ತು ಏರ್‍ಟೆಲ್‍ನ ಪ್ರತಿ ಕಂಪನಿಗಳಿಗೆ 69ಟವರ್‍ಗಳನ್ನು ನಿರ್ಮಿಸಲು ಗುರಿ ನೀಡಲಾಗಿತ್ತು. ಪ್ರಸ್ತುತ ಜಿಯೋ ಸಂಸ್ಥೆಯು 37 ಮತ್ತು ಏರ್‍ಟೆಲ್ ಸಂಸ್ಥೆಯು 25ಟವರ್‍ಗಳನ್ನು ನಿರ್ಮಿಸಿದ್ದು, ಮಲೆನಾಡು ಭಾಗದ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕುಗಳಲ್ಲಿ ವಿವಿಧ ಕಾರಣಗಳಿಂದಾಗಿ ಉಳಿದ ಟವರ್‍ಗಳ ನಿರ್ಮಾಣ ಕಾರ್ಯದಲ್ಲಿ ಎದುರಾಗಿರಬಹುದಾದ ಸಮಸ್ಯೆಗಳ ಕುರಿತು ಇನ್ನೂ ಒಂದು ವಾರದೊಳಗಾಗಿ ಜಿಲ್ಲಾಧಿಕಾರಿಗಳು ಹಾಗೂ ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ 241ಬಿ.ಎಸ್.ಎನ್.ಎಲ್ ಟವರ್‍ಗಳಿದ್ದು, ಅವುಗಳಲ್ಲಿ 100ಟವರ್‍ಗಳನ್ನು ವಿಶೇಷವಾಗಿ ಗಮನಹರಿಸಿ ನಿರ್ವಹಣೆ ಮಾಡಲಾಗುತ್ತಿದೆ. ಅಂತೆಯೇ ಉಳಿದ 141ಟವರ್‍ಗಳನ್ನು ವಿದ್ಯುತ್, ಜನರೇಟರ್, ಸಿಬ್ಬಂಧಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ಟವರ್‍ನ ವ್ಯವಸ್ಥಿತ ನಿರ್ವಹಣೆಗೆ ಕನಿಷ್ಟ 10ಕಿ.ವ್ಯಾ. ವಿದ್ಯುತ್‍ನ ಅಗತ್ಯವಿದ್ದು, ಇದರ ಪೂರೈಕೆಯಲ್ಲಿ ವ್ಯತ್ಯಯವಿರುವುದು ಕಂಡುಬರುತ್ತಿದೆ. ಇಂತಹ ಟವರ್‍ಗಳಿಗೆ ನಿರಂತರ ವಿದ್ಯುತ್ ಹರಿಸುವ ಅಗತ್ಯವಿದೆ ಎಂದವರು ನುಡಿದರು.
ಟವರ್‍ಗಳ ಅಗತ್ಯಕ್ಕೆ ವಿದ್ಯುತ್‍ಗಳನ್ನು ಸರಬರಾಜು ಮಾಡಲು ಜಿಲ್ಲೆಯಲ್ಲಿ 110ಕೆ.ವಿ.ಸಾಮಥ್ರ್ಯದ 112 ವಿದ್ಯುತ್ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದಲ್ಲಿನ ಬಿ.ಎಸ್.ಎನ್.ಎಲ್.ಟವರ್‍ಗಳಿಗೆ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗಲಿದೆ ಎಂದ ಅವರು, ಈ ಘಟಕಗಳಿಗೆ ನಿರಂತರವಾಗಿ ವಿದ್ಯುತ್‍ನ್ನು ಹರಿಸುವ ಬಗ್ಗೆಯೂ ಚರ್ಚಿಸಲಾಗುವುದೆಂದವರು ನುಡಿದರು.
ಪ್ರಸ್ತುತ ಬಿ.ಎಸ್.ಎನ್.ಎಲ್. ಸಂಸ್ಥೆಯು ವಿಯೋಮ್ ಸಂಸ್ಥೆಯ ಸ್ವಾಮ್ಯತೆಗೊಳಪಟ್ಟ 30ಟವರ್‍ಗಳ ಸೇವೆಯನ್ನು ಬಳಸಿಕೊಳ್ಳುತ್ತಿದೆ. ಕೊರೋನ ಕಿರಿಕಿರಿಯಿಂದಾಗಿ ನಗರದಿಂದ ಗ್ರಾಮೀಣ ಪ್ರದೇಶಕ್ಕೆ ಬಂದು ಮನೆಯಿಂದ ಕೆಲಸ ನಿರ್ವಹಿಸುತ್ತಿದ್ದ ಯುವ ಉದ್ಯೋಗಿಗಳಿಗೆ ಇಂಟರ್‍ನೆಟ್ ಸೌಲಭ್ಯ ಒದಗಿಸಲು ಗ್ರಾಮ ಪಂಚಾಯಿತಿಯ ನೆಟ್‍ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು ಎಂದರು.
ಕಳೆದ ಆರು ತಿಂಗಳಿಂದೀಚೆಗೆ ಸುಮಾರು 60ಟವರ್‍ಗಳನ್ನು ಸ್ಥಾಪನೆಯಾಗಿದ್ದು, ಮುಂದಿನ ಆರು ತಿಂಗಳ ಅವಧಿಯಲ್ಲಿ ಇನ್ನು 60ಟವರ್‍ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಜಿಲ್ಲಾಡಳಿತದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದವರು ನುಡಿದರು.
ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಉಪಕಾರ್ಯದರ್ಶಿ ರವಿ, ಬಿ.ಎಸ್.ಎನ್.ಎಲ್.ನಿಗಮದ ವಿಭಾಗೀಯ ವ್ಯವಸ್ಥಾಪಕ ಕೃಷ್ಣಮೊಗೇರ, ಜಿಯೋ ಸಂಸ್ಥೆಯ ಮಿಥುನ್, ಏರ್‍ಟೆಲ್‍ನ ಜನರಲ್ ಮ್ಯಾನೇಜರ್ ಪದ್ಮನಾಭ, ಶಾಂತಕುಮಾರ್, ಮ್ಯಾಥ್ಯೂ, ಮೆಸ್ಕಾಂನ ಇಂಜಿನಿಯರ್ ನಟರಾಜ್, ಜ್ಯೋತಿಪ್ರಕಾಶ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

error: Content is protected !!