ಸಾಗರ: ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ಜಾತ್ರಾ ಹಿನ್ನೆಲೆಯಲ್ಲಿ ಮೈಸೂರು ರಾಜಮಾತೆ ಪ್ರಮೋದಾದೇವಿ ಸಾಗರಕ್ಕೆ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮಂಗಳವಾರ ಬೆಳಗ್ಗೆ ಶ್ರೀ ಮಾರಿಕಾಂಬ ದೇವಿಗೆ ಉಡಿ ಸಮರ್ಪಿಸಿದರು. ಇದೇ ವೇಳೆ ಜಾತ್ರಾ ಸಮಿತಿಯಿಂದ ಮೈಸೂರು ರಾಜಮಾತೆ ಪ್ರಮೋದಾದೇವಿ ಅವರಿಗೆ ಗೌರವ ಸಮರ್ಪಿಸಲಾಯಿತು.
ಶ್ರೀ ಮಾರಿಕಾಂಬ ದೇವಸ್ಥಾನದ ಗಂಡನಮನೆ ಹಾಗೂ ತಾಯಿಮನೆ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಶ್ರೀ ಮಾರಿಕಾಂಬ ಜಾತ್ರಾ ವೇಳೆಯಲ್ಲಿ ದೇವಿಯ ದರ್ಶನ ಪಡೆದಿರುವುದು ಸಂತಸ ಉಂಟುಮಾಡಿದೆ. ಹಿಂದಿನಿಂದಲೂ ಮೈಸೂರು ರಾಜಮನೆತನದ ಪೂರ್ವಿಕರು ಉತ್ಸವದ ಸಂದರ್ಭದಲ್ಲಿ ಸಾಗರಕ್ಕೆ ಬರುತ್ತಿದ್ದರು ಎಂಬುದು ಹಿರಿಯರಿಂದ ತಿಳಿದುಬಂದಿದೆ. ನಾವು ಕೂಡ ದೇವಿ ದರ್ಶನ ಪಡೆದು ದೇವಿಕೃಪೆಗೆ ಪಾತ್ರರಾಗಿದ್ದೇವೆ. ಶ್ರೀ ಮಾರಿಕಾಂಬೆ ಎಲ್ಲರಿಗೂ ಒಳಿತು ಮಾಡಲಿ ಎಂದು ಆಶಿಸಿದರು.
ಮುಂದಿನ ವರ್ಷಗಳಲ್ಲಿ ನಮ್ಮ ಧಾರ್ಮಿಕ ಆಚರಣೆಗಳನ್ನು ಸಾಗರದ ಜತೆಗೆ ಮುಂದುವರೆಸಿಕೊಂಡು ಬರಲಾಗುವುದು. ಜಾತ್ರಾ ಸಂದರ್ಭಗಳಲ್ಲಿ ಭೇಟಿ ನೀಡಲಾಗುತ್ತದೆ. ಅಲ್ಲದೇ ಕಾರ್ಗಲ್ನಲ್ಲಿರುವ ದ್ವಿಮುಖ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡುತ್ತೇವೆ ಎಂದು ತಿಳಿಸಿದರು.
ಸಾಗರಕ್ಕೂ ಮೈಸೂರು ಅರಸ ಮನೆತನದ ಜತೆಗಿರುವ ಸಂಬಂಧ ಮತ್ತು ಮಹತ್ವದ ಕುರಿತು ಪತ್ರಕರ್ತ ದೀಪಕ್ ಸಾಗರ್ ರಾಜಮಾತೆಗೆ ಮಾಹಿತಿ ನೀಡಿದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಮೈಸೂರು ಮನೆತನದ ಪೂರ್ವಿಕರು ದಶಕಗಳ ಹಿಂದಿನಿಂದಲೂ ನಿರಂತರವಾಗಿ ಸಾಗರಕ್ಕೆ ಬರುತ್ತಿದ್ದಾರೆ. ಮೈಸೂರು ಅರಸರ ಪೂರ್ವಿಕರ ಕಾಲದಲ್ಲಿ ಕಾರ್ಗಲ್ನಲ್ಲಿ ನಿರ್ಮಿಸಲಾಗಿದ್ದ ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನ ಅತ್ಯಂತ ಪ್ರಭಾವಶಾಲಿಯಾಗಿದ್ದು, ಇಷ್ಟಾರ್ಥಗಳು ಸಿದ್ಧಿಸುತ್ತವೆ. ಈ ಸಂಬಂಧ ಕಾರ್ಯಕ್ರಮ ಆಯೋಜಿಸಲಾಗುವುದು. ಮೈಸೂರು ರಾಜಮಾತೆ ಅವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮಲೆನಾಡಿನ ಗುಡಿಗಾರರು ಮೈಸೂರು ಅರಸರ ಕಾಲದಲ್ಲಿ ಅಪರೂಪದ ಕೆತ್ತನೆಗಳನ್ನು ಮಾಡಿದ್ದಾರೆ. ಅರಸರು ಸಹ ಕಲಾನೈಪುಣ್ಯ ಮೆಚ್ಚಿಕೊಂಡಿದ್ದರು ಎಂದು ತಿಳಿಸಿದರು. ಮೈಸೂರು ಗುಡಿಗಾರರ ಸಂಘದ ವೀಕ್ಷಕರ ಪುಸ್ತಕದಲ್ಲಿ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅಭಿಪ್ರಾಯ ದಾಖಲಿಸಿದರು.
ಮೈಸೂರಿನಿಂದ ರಾಜಮಾತೆ ಜತೆಗೆ ಆಗಮಿಸಿದ್ದ ಆದಿತ್ಯ, ಸುಜಾತಾ, ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಯು.ಎಲ್.ಮಂಜಪ್ಪ, ಬಿ.ಗಿರಿಧರರಾವ್, ಕೆ.ಪಿ.ನವೀನ್, ರವಿ ನಾಯ್ಡು, ತಾರಾನಾಥ್, ವಿನಾಯಕ್ ಗುಡಿಗಾರ್, ನಾರಾಯಣ್ ಸೇರಿದಂತೆ ಜಾತ್ರಾ ವ್ಯವಸ್ಥಾಪನಾ ಸಮಿತಿ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.